ಕೊರೊನಾ ಸೋಂಕಿನ ಭೀತಿ…ಆದರೂ ಥರ್ಮಲ್ ಸ್ಕ್ರೀನಿಂಗ್ ಇಲ್ಲ, ಮಾಸ್ಕ್ ಇಲ್ಲ, ಹರಿದ್ವಾರದ ಕುಂಭ ಮೇಳದಲ್ಲಿ ಲಕ್ಷಾಂತರ ಜನ

ಹರಿದ್ವಾರ: ಭಾರತದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು, ಇದೇ ಸಮಯದಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ಕುಂಭ ಮೇಳ ನಡೆಯುತ್ತಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದರೆ ಅಲ್ಲಿ ಕೋವಿಡ್‌ ಸಾಂಕ್ರಾಮಿಕ ಹರಡುವ ಸಾಧ್ಯತೆ ಹೆಚ್ಚಿದೆ.
ಸೋಮವಾರ ಇಲ್ಲಿ ಭಾಗವಹಿಸಿದ 102 ಮಂದಿಗೆ ಕೊವಿಡ್ ದೃಢಪಟ್ಟಿದೆ. ಕುಂಭ ಮೇಳದ ಪವಿತ್ರ ಸ್ನಾನಕ್ಕಾಗಿ ಲಕ್ಷಾಂತರ ಜನರು ಹರಿದ್ವಾರಕ್ಕೆ ಆಗಮಿಸುತ್ತಿದ್ದಾರೆ. ಇಲ್ಲಿ ಸಾಮಾಜಿಕ ಅಂತರವಾಗಲೀ, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯಾಗಲಿ ಇಲ್ಲ. ಕೆಲವೇ ಕೆಲವು ಮಂದಿ ಮಾತ್ರ ಮಾಸ್ಕ್ ಧರಿಸಿದ್ದರು. ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದಾಗ ಸಾಮಾಜಿಕ ಅಂತರ ಕಾಪಾಡುವಂತೆ ಹೇಳುವುದು ಕಷ್ಟ ಎಂದು ಅಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸರು ಹೇಳಿದ್ದಾರೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.
ಸೋಮವಾರ ಗಂಗಾ ನದಿಯಲ್ಲಿ ಎರಡನೇ ಶಾಹೀ ಸ್ನಾನ (ಪವಿತ್ರ ಸ್ನಾನ) ಮಾಡಲು ಸುಮಾರು 28 ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ಹರಿದ್ವಾರದಲ್ಲಿ ಸೇರಿದ್ದರು. ಭಾನುವಾರ ರಾತ್ರಿ 11.30 ರಿಂದ ಸೋಮವಾರ ಸಂಜೆ 5 ಗಂಟೆ ವರೆಗೆ 18,169ಕ್ಕಿಂತ ಹೆಚ್ಚು ಭಕ್ತರನ್ನು ಕೊರೊನಾ ಪರೀಕ್ಷೆಗೊಳಪಡಿಸಿದ್ದು ಈ ಪೈಕಿ 102 ಮಂದಿಗೆ ಕೊವಿಡ್ ದೃಢಪಟ್ಟಿದೆ.
ಮಾಸ್ಕ್ ಧರಿಸದೇ ಇದ್ದವರನ್ನು ಪತ್ತೆ ಹಚ್ಚಲು ಕೃತಕ ಬುದ್ಧಿಮತ್ತೆ (AI) ಕ್ಯಾಮೆರಾಗಳನ್ನು ಇರಿಸಿದ್ದರೂ, ಮಾಸ್ಕ್ ಧರಿಸದವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿದ್ದದ್ದು ಕಂಡು ಬರಲಿಲ್ಲ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಇಲ್ಲಿಗೆ ಬರುವವರು ಆರ್​ಟಿ- ಪಿಸಿಆರ್ ನೆಗೆಟಿವ್ ಪರೀಕ್ಷೆ ವರದಿಯೊಂದಿಗೆ ಬರಬೇಕು ಎಂದು ನಿರ್ದೇಶನ ನೀಡಲಾಗಿತ್ತು. ಸುಮಾರು 50ಕ್ಕಿಂತಲೂ ಹೆಚ್ಚು ಮಂದಿ ಭಕ್ತರಲ್ಲಿ ನೆಗೆಟಿವ್ ಸರ್ಟಿಫಿಕೇಟ್ ಕೇಳಲಾಗಿತ್ತು. ಈ ಪೈಕಿ 15 ಮಂದಿಯಲ್ಲಿ ಪರೀಕ್ಷಾ ವರದಿ ಇರಲಿಲ್ಲ. ಆದರೂ ಅವರನ್ನು ಒಳಗೆ ಬಿಡಲಾಗಿದೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಹೇಳಿದೆ.
ರಾಜ್ಯದ ಗಡಿಭಾಗದಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಮತ್ತು ಘಾಟ್‌ ಪ್ರದೇಶಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮತ್ತು ಆಯಂಟಿಜೆನ್ ಪರೀಕ್ಷೆ ಮಾಡಲಾಗಿತ್ತು. ಇವತ್ತು ಬೆಳಗ್ಗೆ ಅಖಾರಗಳಿಗಾಗಿ ಘಾಟ್ ಮೀಸಲಿರಿಸಲಾಗಿದೆ. ಹಾಗಾಗಿಯೇ ಇಲ್ಲಿ ಸ್ಕ್ರೀನಿಂಗ್ ಮಾಡಿಲ್ಲ. ಅಖಾರಗಳ ಸ್ನಾನದ ನಂತರ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಮೇಳದ ಕೊವಿಡ್ ಉಸ್ತುವಾರಿ ಡಾ.ಅವಿನಾಶ್ ಖನ್ನಾ ಹೇಳಿದ್ದಾರೆ.
ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಜನರು ಗುಂಪು ಸೇರುವುದನ್ನು ತಡೆಯಲು ಮಾಸ್ಕ್ ಧರಿಸದೇ ಇದ್ದವರಿಗೆ ದಂಡ ವಿಧಿಸುವುದು, ಥರ್ಮಲ್ ಸ್ಕ್ರೀನಿಂಗ್ ಮಾಡುವುದನ್ನು ನಿಲ್ಲಿಸಲಾಗಿದೆ ಎಂದು ಕುಂಭ ಮೇಳದ ಕರ್ತವ್ಯದಲ್ಲಿರುವ ಐಜಿ ಸಂಜಯ್ ಗುಂಜ್ಯಾಲ್ ಹೇಳಿದ್ದಾರೆ. ನಾವು ಇವತ್ತು ಜನರು ಗುಂಪು ಸೇರುವುದನ್ನು ನಿಯಂತ್ರಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ