ಮುಷ್ಕರದ ಮಧ್ಯೆಯೂ ಬಸ್ ಚಾಲನೆ: ಚಾಲಕನ ಥಳಿಸಿದ ಮಹಿಳೆಯರ ಬಂಧನ

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಸತತ 6ನೇ ದಿನವೂ ಮುಂದುವರೆದಿದೆ. ನೆಲಮಂಗಲ ಠಾಣಾ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದ್ದು, ಮುಷ್ಕರದ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಂಟಿಸಿ ಚಾಲಕನನ್ನು ಪ್ರತಿಭಟನಾ ನಿರತ ಮಹಿಳೆಯರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ. ಹಲ್ಲೆ ನಡೆಸಿದ ಐವರು ಮಹಿಳೆಯರನ್ನು ಬಂಧಿಸಿದ್ದು, 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಅರಿಶಿನಕುಂಟೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಘಟನೆ ನಡೆದಿದೆ. ಪೀಣ್ಯ ಡಿಪೋದ ಚಾಲಕ ಗಿರೀಶ್ ಹಾಗೂ ನಿರ್ವಾಹಕ ಚನ್ನಕೇಶವ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಐವರು ಮಹಿಳೆಯರನ್ನು ಬಂಧಿಸಲಾಗಿದೆ.
ಸೋಮವಾರ ಬೆಳಗ್ಗೆ ಸಾರಿಗೆ ನೌಕರರು ಹಾಗೂ ಅವರ ಕುಟುಂಬಸ್ಥರು ಪ್ರತಿಭಟನೆ ಹಮ್ಮಿಕೊಂಡಿದ್ದರು. ನೆಲಮಂಗಲ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ತಾಲೂಕು ಕಚೇರಿಯಲ್ಲಿ ಮನವಿ ಪತ್ರ ನೀಡಲು ನಿರ್ಧರಿಸಲಾಗಿತ್ತು. ಆದರೆ ಪ್ರತಿಭಟನಾ ನಿರತರನ್ನು ಪೊಲೀಸರು ನೆಲಮಂಗಲ ಬಸ್ ನಿಲ್ದಾಣದ ಬಳಿಯೇ ತಡೆದಿದ್ದಾರೆ. ರೊಚ್ಚಿಗೆದ್ದ ಪ್ರತಿಭಟನಾ ನಿರತರು ಇದೇ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದ ಬಿಎಂಟಿಸಿ ಬಸ್​ಗೆ ಮುತ್ತಿಗೆ ಹಾಕಿದ್ದಾರೆ.
ಮುಷ್ಕರದ ಮಧ್ಯೆಯೂ ಕರ್ತವ್ಯಕ್ಕೆ ಹಾಜರಾಗಿದ್ದ ಚಾಲಕ ಗಿರೀಶ್, ನಿರ್ವಾಹಕ ಚನ್ನಕೇಶವ್​ನನ್ನು ಬಸ್ಸಿನಿಂದ ಹೊರಗೆ ಎಳೆದು ಮಹಿಳೆಯರು ಹಲ್ಲೆ ನಡೆಸಿದ್ದಾರೆ. ಆರೋಪಿಗಳಾದ ಸಾವಿತ್ರಿ, ಗೀತಾ, ಅನ್ನಪೂರ್ಣ, ಸುನಿತಾ ಹಾಗೂ ಪೀಣ್ಯಾ ಡಿಪೋದ ನಿರ್ವಾಹಕಿ ಕುಸುಮಾರನ್ನು ಬಂಧಿಸಿ ಕೋರ್ಟ್​ ಮುಂದೆ ಹಾಜರುಪಡಿಸಲಾಗಿದೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement