ಮಹಾನ್‌ ಮಾನವತಾವಾದಿ ಡಾ. ಅಂಬೇಡ್ಕರ್ ಮಹಾನ್ ಕಾ‌ನೂನು ವಿದ್ವಾಂಸರಷ್ಟೇ ಅಲ್ಲ, ಅರ್ಥಶಾಸ್ತ್ರಜ್ಞರು, ಆರ್‌ಬಿಐ ಸ್ಥಾಪನೆಗೆ ಕಾರಣಕರ್ತರು

(ಬುಧವಾರ ಏ.೧೪ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೦ನೇ ಜನ್ಮ ದಿನಾಚರಣೆ ನಿಮಿತ್ತ ಈ ಲೇಖನ)

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಸುಮಾರು ೫೨೫ ಕ್ಕೂ ಹೆಚ್ಚು ಸಂಸ್ಥಾನಗಳಿದ್ದವು. ಇವುಗಳ ಆಚಾರ – ವಿಚಾರ, ಭಾಷೆ ಸಂಸ್ಕೃತಿಗಳಲ್ಲಿ ಬಹಳಷ್ಟು ಭಿನ್ನತೆಗಳಿದ್ದರೂ ಕೂಡಾ ಈ ಸಂಸ್ಥಾನ ಆಳುವವರ ಮನಮೊಲಿಸಿ ಭೌತಿಕವಾಗಿ ಒಂದು ದೇಶವನ್ನಾಗಿ ರೂಪಿಸಿದವರು ಸರದಾರ ವಲ್ಲಭಭಾಯಿ ಪಟೇಲ್. ಅಂದು ಇಡೀ ಪ್ರಪಂಚವೇ ಭಾರತ ಯಾವಾಗ ಛಿದ್ರ ಆಗುತ್ತದೆ ಚಾತಕ ಪಕ್ಷಿಯಂತೆ ಕಾಯುತ್ತಿತ್ತು. ಆದರೆ ದಿನಗಳೆದಂತೆ ಭಾರತವೂ ಏಕ ಭಾರತವಾಗುವತ್ತ ದಾಪುಗಾಲು ಇಡತೊಡಗಿತು.
ಭೌತಿಕವಾಗಿ ಹಾಗೂ ಮಾನಸಿಕವಾಗಿ.ಇಂದು ಭಾರತ ಏಕಭಾರತವಾಗಿ ಉಳಿಯಲು ಕಾರಣ ಭಾರತದ ಸಂವಿಧಾನ. ಇದರ ಶಿಲ್ಪಿ ಡಾ. ಭೀಮರಾವ ರಾಮರಾವ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಾಗಿ ಇಂದು ಭಾರತ ಅಖಂಡ ದೇಶವಾಗಿ ಉಳಿದಿವೆ. ಅದಕ್ಕಾಗಿ ಅಂಬೇಡ್ಕರ್ ಅವರಿಗೆ ನಾವೆಲ್ಲ ಆಭಾರಿಯಾಗಿರಬೇಕು.
ಡಾ.ಅಂಬೇಡ್ಕರ ಕೇವಲ ದಲಿತರ ಹಕ್ಕಿನ ಹೋರಾಟಗಾರರಷ್ಟೇ ಅಲ್ಲ, ಮಹಿಳೆಯರ, ರೈತರ,ದೀನ-ದಲಿತರ ಹಕ್ಕಿಗಾಗಿ ಸಾಕಷ್ಟು ಹೋರಾಟಗಳನ್ನು ಮಾಡುತ್ತಾ ಅವರಿಗಾಗಿ ಧ್ವನಿ ಎತ್ತಿದ್ದರು. ನಮ್ಮಲ್ಲಿ ಎಷ್ಟೋ ಜನಕ್ಕೆ ಗೊತ್ತಿಲ್ಲ ರಿಸರ್ವ ಬ್ಯಾಂಕ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರೇ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರು.
ಅಂಬೇಡ್ಕರ್ ಅವರು ಕಾನೂನಿನ ಮಹಾ ಪಂಡಿತರಷ್ಟೇ ಅಲ್ಲ, ಜಗತ್ ಪ್ರಸಿದ್ಧ ಅರ್ಥಶಾಸ್ತ್ರಜ್ಞರೂ ಆಗಿದ್ದರು. ಅಪಾರ ಬಡತನ, ಅಸ್ಪೃಶ್ಯತೆ, ಹೆಜ್ಜೆ-ಹೆಜ್ಜೆಗೂ ಅವಮಾನ ಇತ್ಯಾದಿಗಳ ಮಧ್ಯೆಯೇ ತಮ್ಮ ಸಾಧನೆಯಿಂದ ಅತ್ಯಂತ ಎತ್ತರಕ್ಕೆ ಬೆಳೆದುನಿಂತವರು.
ಅಗರ್ಭ ಶ್ರೀಮಂತರಿಗೂ ಹಾಗೂ ಅಗಾಧ ಬುದ್ಧಿವಂತರಿಗೂ ಅತ್ಯುತ್ತಮ ಶಿಕ್ಷಣ ಪಡೆಯಲು ಕಷ್ಟವಿದ್ದ ಕಾಲದಲ್ಲಿಯೇ ಡಾ.ಅಂಬೇಡ್ಕರ ಅವರು ವಿದೇಶದಲ್ಲಿ ಸ್ನಾತಕೋತ್ತರ ಶಿಕ್ಷಣದೊಂದಿಗೆ ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರದಲ್ಲಿ ಎರಡೆರಡೂ ಪಿಎಚ್‌ಡಿ ಪಡೆದ ಧೀಮಂತರು.
ತಮ್ಮ ಸ್ವ-ಸಾಮರ್ಥ್ಯದಿಂದ ಮೇಲೆ ಬಂದು ಸ್ವಾತಂತ್ರ್ಯ, ಎಲ್ಲರಿಗೂ ಸಮಾನತೆ ಮತ್ತು ಭ್ರಾತೃತ್ವಕ್ಕಾಗಿ ಶ್ರಮಿಸಿ ಎಲ್ಲ ವರ್ಗಗಳ ಹಾಗೂ ಬಡವರ ಬದುಕಿಗೆ ದಾರಿ ದೀಪವಾದ ಮಹಾನ್ ಚೇತನ ಹಾಗೂ ಭಾರತದ ಹೆಮ್ಮೆಯ ಸುಪುತ್ರರಲ್ಲಿ ಒಬ್ಬರಾದ ಡಾ. ಬಿ.ಆರ್.ಅಂಬೇಡ್ಕರ ಅವರು ಜನಿಸಿದ್ದು ೧೪ ಏಪ್ರಿಲ್ ೧೮೯೧ರಲ್ಲಿ ಮಧ್ಯಪ್ರದೇಶ ರಾಜ್ಯದ ಮಹೋ ಎಂಬಲ್ಲಿ. ಇವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲೂಕಿನ ಅಂಬೇವಾಡಿ ಗ್ರಾಮದವರು. ತಂದೆ ರಾಮಜಿ, ತಾಯಿ ಭೀಮಾಬಾಯಿಯವರ ೧೪ನೆಯ ಪುತ್ರರಾಗಿ ಜನಿಸಿದರು. ಮಹಾರಾಷ್ಟ್ರದ ದಾಪೋಲಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಇವರು ಸತಾರಾದಲ್ಲಿ ಹೈಸ್ಕೂಲ್ ಶಿಕ್ಷಣಕ್ಕೆ ಸೇರಿದರು. ಇಲ್ಲಿ ಈ ಬಾಲಕನ ಹೃದಯವನ್ನು ಗೆದ್ದ ಅಧ್ಯಾಪಕರಿದ್ದರು. ಅವರ ಹೆಸರು ಅಂಬೇಡ್ಕರ್, ತಮ್ಮ ಶಿಷ್ಯನ ಜ್ಞಾನದಾಹದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು ಬಾಲಕನ ಹೆಸರನ್ನು ದಾಖಲೆಗಳಲ್ಲಿ ಅಂಬೇಡ್ಕರ ಎಂದು ತಿದ್ದಿ ಇದೇ ಹೆಸರು ಶಾಶ್ವತವಾಗುವಂತೆ ಮಾಡಿದರು.
೧೯೧೨ರಲ್ಲಿ ಪದವಿ ಪಡೆದ ಮಹಾರ್‌ ಸಮುದಾಯದ ಮೊಟ್ಟ ಮೊದಲ ವ್ಯಕ್ತಿಯಾದರು. ಇವರು ಯೌವನಕ್ಕೆ ಕಾಲಿಸಿದಾಗ, ಒಂದೆಡೆ ಬ್ರಿಟಿಷರ ದಾಸ್ಯದಿಂದ ವಿವೋಚನೆ ಪಡೆಯಲು ನಡೆಯುತ್ತಿದ್ದ ಹೋರಾಟ, ಮತ್ತೊಂದೆಡೆ ಸಾಮಾಜಿಕ ದಾಸ್ಯ ಸಂಕೋಲೆಗಳನ್ನು ಕಳಚಲು ನಡೆಯುತ್ತಿದ್ದ ಹೋರಾಟ ಈ ಘಟನಾವಳಿಗಳನ್ನು ಜೀವನದಲ್ಲಿ ಸ್ವತಃ ಅನುಭವಿಸಿದ್ದ ಅವರಿಗೆ ಸಹಜವಾಗಿಯೇ ಇವು ಹೆಚ್ಚಿನ ಪ್ರಭಾವ ಬೀರಿದವು. ವ್ಯಕ್ತಿಯ ವಿಕಾಸಕ್ಕೆ ಹಾಗೂ ಸಮಾಜದ ಏಳಿಗೆಗೆ ಉನ್ನತ ಶಿಕ್ಷಣವೇ ಸೋಪಾನವೆಂದು ಬಾಲ್ಯದಿಂದಲೇ ನಂಬಿದ್ದ ಡಾ.ಅಂಬೇಡ್ಕರ ಬರೋಡಾದ ಸಯ್ಯಾಜಿರಾವ್‌ ಗಾಯಕವಾಡ ಅವರ ಆರ್ಥಿಕ ನೆರವಿನಿಂದ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿ ೧೯೧೫ರಲ್ಲಿ ಕೋಲಂಬಿಯಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ನಂತರ ಅವರು ಭಾರತದ ರಾಷ್ಟ್ರೀಯ ವರಮಾನ ಮತ್ತು ಹಣಕಾಸು ಕುರಿತು ಮಹಾಪ್ರಬಂಧವನ್ನು ಬರೆದು ಡಾಕ್ಟರೇಟ್‌ ಪದವಿ ಪಡೆದರು. ನಂತರ ಬ್ರಿಟಿಷ್ ಭಾರತದ ಹಣಕಾಸಿನ ಪ್ರಾಂತೀಯ ವಿಕೇಂದ್ರಿಕರಣ ಎಂಬ ಸಂಶೋಧನಾ ಮೇರು ಪ್ರಬಂಧವನ್ನು ಮಂಡಿಸಿ ೧೯೨೧ರಲ್ಲಿ ಲಂಡನ್ ವಿಶ್ವವಿದ್ಯಾನಿಯದಿಂದ ಎಂ.ಎಸ್.ಸಿ. ಪದವಿ ಪಡೆದುಕೊಂಡರು. ರೂಪಾಯಿ ಸಮಸ್ಯೆ ಕುರಿತು ಮಹಾಪ್ರಬಂಧಕ್ಕೆ ಇದೇ ಲಂಡನ್ ವಿಶ್ವವಿದ್ಯಾನಿಲಯ ಡಿ.ಎಸ್.ಸಿ ಪದವಿ ನೀಡಿ ಗೌರವಿಸಿತು. ಅನಂತರ ಕೆಲಕಾಲ ಜರ್ಮನಿಯ ಬಾನ್ ವಿಶ್ವವಿದ್ಯಾಲಯದಲ್ಲಿಯೂ ಅಧ್ಯಯನ ನಡೆಸಿ, ಲಂಡನ್ನಿನಿಂದ ಕಾನೂನಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಭಾರತಕ್ಕೆ ಮರಳಿದರು.
ಮೂಕ ನಾಯಕ ಎಂಬ ಪತ್ರಿಕೆಯನ್ನು ಆರಂಭಿಸುವ ಮೂಲಕ ದೀನ ದಲಿತರ ಧ್ವನಿಯಾಗಿ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡರು. ೧೯೪೬ ರಲ್ಲಿ ಭಾರತದ ಸಂವಿಧಾನ ರಚನಾ ಸಭೆಗೆ ಅಂಬೇಡ್ಕರ್ ಸದಸ್ಯರಾಗಿ ಆಯ್ಕೆಯಾಗಿ, ತಾತ್ಕಾಲಿಕ ಸರ್ಕಾರದ ನೆಹರು ಮಂತ್ರಿ ಮಂಡಲದಲ್ಲಿ ಕಾನೂನು ಸಚಿವರಾದರು.
ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಭಾರತದ ಸಂವಿಧಾನ ರನದಯೆ ಶಿಲ್ಪಿಯೆನಿಸಿಕೊಂಡರು. ಸಾಮಾಜಿಕ ನ್ಯಾಯದ ಸಾಧನೆಗಾಗಿ ತಮ್ಮಲ್ಲಿ ಚಿಂತನೆಗಳನ್ನು ಭಾರತೀಯ ಸಂವಿಧಾನದಲ್ಲಿ ಸೇರಿಸುವ ಮುನ್ನ ಹಲವಾರು ದೇಶಗಳ ಸಂವಿಧಾನಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದರು. ಸಾಮಾಜಿಕ ನ್ಯಾಯ ಸಾಧನೆಗೆ ಮೀಸಲಾತಿ ರೂಪಿಸಿದ ಸಂವಿಧಾನವು ಮಾನವತಾವಾದ, ಜ್ಞಾನ, ಅರಿವು ಅವೆಲ್ಲದರ ಪರಿಪೂರ್ಣ ಸಂಗಮವಾಗಿದೆ.
ಬಾಲ್ಯದಿಂದಲೂ ಪ್ರಭಾವ ಬೀರಿದ್ದ ಬುದ್ಧನ ಸಂದೇಶದ ಕಡೆಗೆ ಹೆಚ್ಚಿನ ಒಲವನ್ನು ಹೊಂದಿದ್ದ ಾವರು ಭಾರತೀಯ ಬೌದ್ಧ ಮಹಾ ಸಭಾ ಸ್ಥಾಪಿಸಿದರು.
೧೯೫೬ರ ಅಕ್ಟೋಬರ್ ೧೪ ರಂದು ಅಂಬೇಡ್ಕರರು ತಮ್ಮ ೫ ಲಕ್ಷ ಜನ ಅನುಯಾಯಿಗಳ ಜೊತೆ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು. ಮುಂದೇ ೧೯೫೬ರ ಡಿಸೆಂಬರ್ ೬ ರಂದು ಅವರು ಮಹಾಪರಿನಿರ್ವಾಣ ಹೊಂದಿದರು. ಭಾರತ ಸರ್ಕಾರವು ೧೯೯೦ರಲ್ಲಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.
ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು. ನಿಮಗೆ ಗೌರವಯುತವಾದ ಬುದುಕಿನಲ್ಲಿ ವಿಶ್ವಾಸವಿದ್ದರೆ, ಅತ್ಯತ್ತಮವಾದ ಸ್ವ ಸಹಾಯವು ನಿಮ್ಮ ಆತ್ಮ ವಿಶ್ವಾಸವೇ ಆಗಿರುತ್ತದೆ. ಉತ್ತಮ ಸಾಮಾಜಿಕ ವ್ಯವಸ್ಥೆಗೆ ರಾಜಕೀಯ ಸಮಾನತೆ ಮಾತ್ರವಲ್ಲ. ಧಾರ್ಮಿಕ ಸಮಾನತೆಯೂ ಅಗತ್ಯ. ಮತದಾನವನ್ನು ಹಣಕ್ಕಾಗಿ ಮಾರಿಕೊಳ್ಳಬೇಡಿ. ಜನನ ಹೇಗೆ ಇರಲಿ, ಆದರೇ ಸಾವು ಮಾತ್ರ ಚರಿತ್ರೆಯಾಗಿರಿರಲಿ. ನಿಮ್ಮ ಬಳಿ ಎರಡು ರೂಪಾಯಿ ಇದ್ದಲ್ಲಿ ಒಂದು ರೂಪಾಯಿಯನ್ನು ಆಹಾರಕ್ಕಾಗಿ ಬಳಿಸಿ, ಉಳಿದ ಒಂದು ರೂಪಾಯಿಯನ್ನು ಪುಸ್ತಕ್ಕಾಗಿ ಬಳಿಸಿ, ಆಹಾರ ನಿಮ್ಮ ಜೀವನವನ್ನು ಉಳಿಸಿದರೆ, ಪುಸ್ತಕ ನೀವು ಹೇಗೆ ಜೀವಿಸಬೇಕೆಂದು ಕಲಿಸುತ್ತದೆ. ಅಪ್ರಯೋಜಕವಾದ ಶತಮಾನದ ಬಾಳಿಗಿಂತ ಧ್ಯೇಯ ಸಾಧನೆಯ ಅಲ್ಪ ಆಯುಷ್ಯವೇ ಮೇಲು. ಜೀವನವನ್ನು ಉತ್ತಮ ಪಡಿಸಿಕೊಳ್ಳುವುದು ನಿಮ್ಮ ಕೈಯಲ್ಲಿದ್ದು, ನೀವು ಶಿಕ್ಷಿತರಾಗಿ, ಸಂಘಟಿತರಾಗಿ, ಮತ್ತು ಹೋರಾಡಿ ಎಂಬುದನ್ನು ನಾನು ನಿಮಗೆ ತಿಳಿಯಪಡಿಸುತ್ತೇನೆ ಎಂದು ಜನರಲ್ಲಿ ಸದಾಕಾಲ ಜಾಗೃತಿಯನ್ನುಂಟು ಮಾಡುತ್ತಿದ್ದ ಡಾ. ಬಿ.ಆರ್. ಅಂಬೇಡ್ಕರ ಅವರ ೨೦ಕ್ಕೂ ಹೆಚ್ಚಿನ ಕೃತಿಗಳು ಆಕರ ಗ್ರಂಥಗಳಾಗಿವೆ. ಅವರ ಕೃತಿಗಳು ಭಾರತೀಯ ಎಲ್ಲ ಭಾಷೆಗಳಲ್ಲಿ ಪ್ರಕಟವಾಗಿವೆ.
ತಮ್ಮ ವಾಸ ಸ್ಥಳದ ೭೫% ಜಾಗವನ್ನು ಪುಸ್ತಕ ಸಂಗ್ರಹಕ್ಕೆ ವಿನಿಯೋಗಿಸಿಕೊಂಡಿದ್ದರು. ಪ್ರವಾಸ ಸಮಯಲ್ಲಿಯೂ ವಿವಿಧ ಗ್ರಂಥಗಳನ್ನು ಓದುತ್ತಿದ್ದರು, ಅಲ್ಲದೆ, ಎಲ್ಲೇ ಹೋದರೂ ಗ್ರಂಥಾಲಯಗಳಿಗೆ, ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ ಗ್ರಂಥಗಳನ್ನು ಓದುವ ರೂಢಿಯೂ ಇತ್ತು.
ಸಂವಿಧಾನ ಶಿಲ್ಪಿಯಾಗಿ, ನ್ಯಾಯಶಾಸ್ತ್ರಜ್ಞರಾಗಿ, ತತ್ವಜ್ಞಾನಿಯಾಗಿ, ಮಾನವ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರರಾಗಿ ಡಾ. ಬಿ.ಆರ್. ಅಂಬೇಡ್ಕರ ಅವರ ತತ್ವಾದರ್ಶ, ಹೋರಾಟದ ಬದುಕು, ಅಧ್ಯಯನ ಶೀಲತೆ, ಬರವಣಿಗೆ ಇವುಗಳನ್ನು ಯುವ ಸಮೂಹ ಅಳವಡಿಸಿಕೊಂಡು ತಮ್ಮ ಜ್ಞಾನ ಕ್ಷಿತಿಜ ವಿಸ್ತರಿಸಿಕೊಳ್ಳಬೇಕಾಗಿದೆ ಹಾಗೂ ಭವ್ಯ ಭಾರತದ ಅಭಿವೃದ್ಧಿಗೆ ಕೈಜೋಡಿಸಬೇಕಾಗಿದೆ.

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

-ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

 

4.8 / 5. 4

ಶೇರ್ ಮಾಡಿ :

  1. geek

    ನೀವು ಬರೆದ ಮಾತುಗಳೆಲ್ಲವೂ ಅಕ್ಷರಶಃ ಸತ್ಯ. ಅತ್ಯಂತ ತಳಸಮುದಾಯದವರು ಸಮಾಜದ ಎಲ್ಲರಂತೆ ಗೌರವ ಪಡೆದ ದಿನ ಅಂಬೇಡ್ಕರ್ ರವರ ಆಶಯ ಪೂರ್ಣವಾಗುತ್ತದೆ. ಅಂಬೇಡ್ಕರ್ ರವರ ಅಗಾಧ ಪರಿಶ್ರಮಕ್ಕೆ ಭಾರತದ ಎಲ್ಲರೂ ಋಣಿಯಾಗಿರಬೇಕು.

ನಿಮ್ಮ ಕಾಮೆಂಟ್ ಬರೆಯಿರಿ

advertisement