ಸಾರಿಗೆ ನೌಕರರು ಕೆಲಸಕ್ಕೆ ಬರದಂತೆ ಪ್ರಚೋದನಕಾರಿ ವಾಟ್ಸಪ್ ಸಂದೇಶ ರವಾನೆ : 4 ಸಾರಿಗೆ ಸಿಬ್ಬಂದಿ ಅಮಾನತು

ಹುಬ್ಬಳ್ಳಿ: ಆರನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಆಗ್ರಹಿಸಿ ನಡೆದಿರುವ ಸಾರಿಗೆ ನೌಕರರ ಮುಷ್ಕರದ ಅವಧಿಯಲ್ಲಿ ವಾಟ್ಸಪ್ ನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಕಳಿಸುವ ಮೂಲಕ  ಇತರೆ ಸಿಬ್ಬಂದಿ ಕೆಲಸಕ್ಕೆ ಬರದಂತೆ ತಡೆದಿರುವ ಪ್ರಕರಣದಲ್ಲಿ ನಾಲ್ಕು ಸಿಬ್ಬಂದಿ ಅಮಾನತುಗೊಳಿಸಿ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ಎಚ್. ರಾಮನಗೌಡರ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ ಗ್ರಾಮಾಂತರ 1ನೇ ಘಟಕದ ಸಹಾಯಕ ಲೆಕ್ಕಿಗ ಶ್ರೀಹರಿ ಮತ್ತು ಚಾಲಕ ಎಂ.ಕೆ.ಮದ್ನೂರ, ನವಲಗುಂದ ಘಟಕದ ಚಾಲಕ ದೇವರೆಡ್ಡಿ ಹೆಬಸೂರ ಮತ್ತು ನಿರ್ವಾಹಕ ಉಮೇಶ ಹಿರೇಮಠ ಎಂಬವವರು ಅಮಾನತ್ತುಗೊಂಡಿರುವ ಸಿಬ್ಬಂದಿ.
ಮುಷ್ಕರ ಅವಧಿಯಲ್ಲಿ   ಹಲವಾರು ಸಿಬ್ಬಂದಿ ಸ್ವಯಂಪ್ರೇರಿತವಾಗಿ ಕೆಲಸಕ್ಕೆ ಬರುವ ಇಚ್ಛೆ ವ್ಯಕ್ತಪಡಿಸುತ್ತಿದ್ದರು. ಆದರೆ ಬಹಳಷ್ಟು ಮಂದಿ  ಕೊನೆಯ ಗಳಿಗೆಯಲ್ಲಿ ಕರ್ತವ್ಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು. ಇದರ ಬಗ್ಗೆ  ಅನುಮಾನ ಬಂದು ಕಾರಣ ಹುಡುಕುತ್ತಾ ಹೋದಾಗ ಸಂಸ್ಥೆಯ ಕೆಲ ಸಿಬ್ಬಂದಿ ಇದರ ಹಿಂದೆ ಇರುವ ಮಾಹಿತಿ ಸಿಕ್ಕಿತ್ತು. ಅದರ ಜಾಡು ಬೆನ್ನತ್ತಿದಾಗ ವಾಟ್ಸಪ್ ಸಂದೇಶದ ಜಾಲ ಸಿಕ್ಕಿ ಬಿದ್ದಿದೆ.
ಸಂಸ್ಥೆಯ  ಕೆಲ ಸಿಬ್ಬಂದಿ ತಮ್ಮದೇ ಆದ ವಾಟ್ಸಪ್ ಗ್ರೂಪ್ ಗಳನ್ನು ರಚಿಸಿಕೊಂಡಿದ್ದರು. ಇಂತಹ ಒಂದು ಗುಂಪಿನಲ್ಲಿದ್ದ ಶ್ರೀಹರಿ  ತನ್ನ ಮೊಬೈಲ್ ಮೂಲಕ ಗುಂಪಿನ ಇತರೆ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ. ಈತನು ಗುಂಪಿನಲ್ಲಿ ಹಲವಾರು ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಿದ್ದಾನೆ. ಅವುಗಳನ್ನು ಉಳಿದವರು ಮತ್ತೆ ಹಲವಾರು ಸಹೋದ್ಯೋಗಿಗಳಿಗೆ ಕಳಿಸಿದ್ದಾರೆ. ಈ ರೀತಿ ಪ್ರಚೋದನಕಾರಿ ಸಂದೇಶಗಳನ್ನು ವಿನಿಮಯ ಮಾಡುವ ಮೂಲಕ ಕೆಲಸಗಾರರು ಕೆಲಸಕ್ಕೆ ಬರದಂತೆ ತಡೆಯುತ್ತಿದ್ದರು. ಕರ್ತವ್ಯ ನಿರತ ಸಿಬ್ಬಂದಿಗಳಿಗೆ ನಿಂದಿಸುವುದು, ಅವಮಾನ ಮಾಡುವುದು ಇತ್ಯಾದಿ ಮಾಡಿ ಮನೋಸ್ಥೈರ್ಯ ಕುಂದಿಸುವಂತೆ ಮಾಡುತ್ತಿದ್ದರು. ಬಹಳಷ್ಟು ನೌಕರರು ಕೆಲಸದಿಂದ ದೂರ ಉಳಿಯುವಂತೆ ನೋಡಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ. .
ಈ ರೀತಿ ಕಾನೂನು ಬಾಹೀರ ಮುಷ್ಕರಕ್ಕೆ ಕುಮ್ಮಕ್ಕು ನೀಡಿರುವ  ಸಂಬಂಧ 4 ಸಿಬ್ಬಂದಿಗಳನ್ನು ಅಮಾನತುಗೊಳಸಲಾಗಿದೆ. ಈ ರೀತಿಯ ಇನ್ನೂ ಹಲವಾರು ಅಕ್ರಮ‌ ವಾಟ್ಸಪ್ ಗುಂಪುಗಳಿದ್ದು ಅವುಗಳಲ್ಲಿ ಬಹಳಷ್ಟು ಸಿಬ್ಬಂದಿ ಸಕ್ರಿಯವಾಗಿ ಭಾಗಿಯಾಗಿರುವ ಬಗ್ಗೆ ಬಲವಾದ ಮಾಹಿತಿ ಸಿಕ್ಕಿದೆ. ವಿಶೇಷ ತಂಡ ರಚಿಸಲಾಗಿದ್ದು ಇನ್ನುಳಿದವರ ಪತ್ತೆಗಾಗಿ ಇಲಾಖಾ ತನಿಖೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 10 ಹಳದಿ ಅನಕೊಂಡ ಹಾವುಗಳು ವಶಕ್ಕೆ, ಓರ್ವನ ಬಂಧನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement