ಸಿಡಿ ಪ್ರಕರಣ: ಸಿಬಿಐ ತನಿಖೆ ಅಗತ್ಯವಿಲ್ಲ ಎಂದ ಹೈಕೋರ್ಟ್‌

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ತನಿಖೆ ಸದ್ಯಕ್ಕೆ ನಡೆಸುತ್ತಿದ್ದು, ಸಿಬಿಐ ತನಿಖೆಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಶನಿವಾರ ಅಭಿಪ್ರಾಯಪಟ್ಟಿದೆ.
ತನಿಖೆಗೆ ಎಸ್‌ಐಟಿ ರಚಿಸಿ ನಗರ ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶ ರದ್ದತಿ ಕೋರಿ ಸಲ್ಲಿಸಿಕೆಯಾದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಅನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್‌ ನೇತೃತ್ವದ ವಿಭಾಗೀಯ ಪೀಠ ಶನಿವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ವಿಶೇಷ ತನಿಖಾ ತಂಡದ ಮುಖ್ಯಸ್ಥ ಸೌಮೇಂದು ಮುಖರ್ಜಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ತನಿಖಾ ವರದಿ ಪರಿಶೀಲಿಸಿತು. ದಾಖಲಾಗಿರುವ ಮೂರು ಎಫ್‌ಐಆರ್​ಗಳಲ್ಲೂ ಎಸ್‌ಐಟಿ ತನಿಖೆ ನಡೆಸಿ ಪ್ರತ್ಯೇಕ ವರದಿಗಳನ್ನು ಸಲ್ಲಿಸಿದೆ. ಇವುಗಳನ್ನು ಗಮನಿಸಿದರೆ ಸದ್ಯಕ್ಕೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ತನಿಖಾಧಿಕಾರಿಗಳು ಸಲ್ಲಿಸಿರುವ ವರದಿಯನ್ನು ಮುಚ್ಚಿದ ಲಕೋಟೆಯಲ್ಲೇ ಭದ್ರಪಡಿಸಿಡಲು ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದ ಪೀಠ, ಮುಂದಿನ ತನಿಖಾ ಪ್ರಗತಿ ವರದಿಯನ್ನು ಎಸ್‌ಐಟಿ ಮುಚ್ಚಿದ ಲಕೋಟೆಯಲ್ಲೇ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಮೇ 31ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರ ವಕೀಲ ಉಮೇಶ್ ಪರ ವಾದ ಮಂಡಿಸಿದ ವಕೀಲ ಬಿ.ವಿ.ಶಂಕರನಾರಾಯಣ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ಸೋರಿಕೆಯಾಗುತ್ತಿದೆ. ಅದನ್ನೇ ಇಟ್ಟುಕೊಂಡು ಟಿವಿ ವಾಹಿನಿಗಳು ಮೀಡಿಯಾ ಟ್ರಯಲ್ ನಡೆಸುತ್ತಿವೆ. ಹೀಗಾಗಿ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿದರು. ವಾದ ತಿರಸ್ಕರಿಸಿದ ಪೀಠ, ಯಾವ ಶಾಸನಾತ್ಮಕ ಅಧಿಕಾರ ಬಳಸಿ ಸರ್ಕಾರ ಮಾಧ್ಯಮಗಳನ್ನು ನಿರ್ಬಂಧಿಸಬೇಕು. ನಿರ್ದಿಷ್ಟ ಸುದ್ದಿ ಸಂಸ್ಥೆ ಮಾಡಿರುವ ಉಲ್ಲಂಘನೆ ತೋರಿಸಿ ಎಂದು ಪ್ರಶ್ನಿಸಿತು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement