ನಾಸಾ ಮಿಶನ್‌ ಮಂಗಳ; ಮತ್ತೊಂದು ಗ್ರಹದ ಮೇಲೆ ಹೆಲಿಕಾಪ್ಟರ್ ಹಾರಾಟ ನಡೆಸಿ ಇತಿಹಾಸ ಬರೆದ ನಾಸಾ

ವಾಷಿಂಗ್ಟನ್ : ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಪರ್ಸೆವರೆನ್ಸ್ ರೋವರ್ (Perseverance Rover) ಮೂಲಕ ಮಂಗಳನ ಅಂಗಳಕ್ಕೆ ತಲುಪಿದ್ದ ಇಂಜೆನ್ಯುಟಿ ಹೆಲಿಕ್ಯಾಪ್ಟರ್ (Ingenuity Helicopter)ಮೊದಲ ಹಾರಾಟ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಸತತ ಆರು ವರ್ಷಗಳ ಪರಿಶ್ರಮದ ಬಳಿಕ ನಾಸಾ ಮಂಗಳ ಗ್ರಹದ ಮೇಲೆ ಫ್ಲೈಟ್ ಪರೀಕ್ಷೆ ನಡೆಸುವಲ್ಲಿ ಯಶಸ್ವಿಯಾಗಿದೆ. ನಾಸಾ ಈ ಐತಿಹಾಸಿಕ ಘಟನೆಯ ಲೈವ್ ಪ್ರಸಾರ ಮಾಡಿದೆ.
ನಾಸಾದ (NASA) ಈ ಹೆಲಿಕಾಪ್ಟರ್ ಸೋಮವಾರ ಮಂಗಳನ (Mars Mission) ಧೂಳು ತುಂಬಿದ ಕೆಂಪು ಮೇಲ್ಮೈ ಮೇಲೆ ಹಾರಾಟ ಇತಿಹಾಸ ನಿರ್ಮಿಸಿದೆ. ಈ ಹೆಲಿಕಾಪ್ಟರ್ ಸುಮಾರು 1.8 ಕೆ.ಜಿ ತೂಕದ್ದು. ಇಂಜೆನ್ಯುಟಿ ಹೆಲಿಕಾಪ್ಟರ್ ಸುಮಾರು 1.6 ಅಡಿ ಉದ್ದವಾಗಿದೆ. ಇದರಲ್ಲಿ ಬ್ಯಾಟರಿ, ಹೀಟರ್ ಹಾಗೂ ಸೆನ್ಸರ್ ಅಳವಡಿಸಲಾಗಿದೆ. ಹೆಲಿಕಾಪ್ಟರ್ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದ್ದು, ಇದರಿಂದ ಬ್ಯಾಟರಿ ಚಾರ್ಜ್ ಆಗುತ್ತದೆ. ಈ ಹೆಲಿಕ್ಯಾಪ್ಟರ್ -90 ಡಿಗ್ರಿ ಉಷ್ಣಾಂಶದಲ್ಲಿಯೂ ಹಾರಾಟ ನಡೆಸುತ್ತದೆ.
ಈ ಕುರಿತು ಹೇಳಿಕೆ ನೀಡಿರುವ ಇಂಜೆನ್ಯುಟಿ ಹೆಲಿಕ್ಯಾಪ್ಟರ್ ಪ್ರಾಜೆಕ್ಟ್ ಮ್ಯಾನೇಜರ್ ಮಿಮಿ ಆಂಗ್, ‘ಮಾನವ ಇತರ ಗ್ರಹಗಳ ಮೇಲೂ ಕೂಡ ರೋಟರ್ ಕ್ರಾಫ್ಟ್ ಉಡಾಯಿಸುವುದರಲ್ಲಿ ಯಶಸ್ವಿಯಾಗಿದ್ದಾನೆ ಎಂದು ನಾವು ಹೇಳಬಹುದು’ ಎಂದಿದ್ದಾರೆ.
ಮಂಗಳನ ಮೇಲ್ಮೈ ಮೇಲೆ ಹೆಲಿಕಾಪ್ಟರ್ ಹಾರಾಟ ಕೈಗೊಂಡ ಬಳಿಕ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಪರ್ಸೆವರನ್ಸ್ ನಿಂದ ಸಿಗ್ನಲ್ ಕೂಡ ಪಡೆದುಕೊಂಡಿದ್ದಾರೆ. ಮಂಗಳನ ಮೇಲ್ಮೈ ಮೇಲೆ ಹಾರಾಟ ನಡೆಸಿರುವ ಇಂಜೆನ್ಯುಟಿ ಹೆಲಿಕಾಪ್ಟರ್ ಬೆಲೆ ಸುಮಾರು 85 ಮಿಲಿಯನ್ ಡಾಲರ್ ಆಗಿದೆ. ಫ್ಲೈಟ್ ಟೆಸ್ಟ್ ನಲ್ಲಿ ಇಂಜೆನ್ಯುಟಿ ಹೆಲಿಕಾಪ್ಟರ್ ಯಶಸ್ವಿಯಾಗಿರುವುದು ಒಂದು ದೊಡ್ಡ ಸಾಧನೆಯಾಗಿದೆ. ಏಕೆಂದರೆ ಈ ಮಿಶನ್ ನಲ್ಲಿ ಭಾರಿ ಅಪಾಯವಿತ್ತು ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು ಕಳೆದ ಏಪ್ರಿಲ್ 11 ರಂದು ಈ ಹೆಲಿಕ್ಯಾಪ್ಟರ್ ಹಾರಾಟ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಅದನ್ನು ಮುಂದೂಡಲಾಗಿತ್ತು. ನಂತರ ಈ ಹೆಲಿಕಾಪ್ಟರ್ ಸಾಫ್ಟ್‌ವೇರ್‌ ಅಪ್ಡೇಟ್ ಮಾಡಲಾಗಿದ್ದು, ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಈ ಇಂಜೆನ್ಯುಟಿ ಹೆಲಿಕಾಪ್ಟರ್ ಹಾರಾಟ ನಡೆಸಿದ ಬಳಿಕ ಒಂದು ಬ್ಲಾಕ್ ಮತ್ತು ವೈಟ್ ಛಾಯಾಚಿತ್ರವನ್ನು ಕೂಡ ರವಾನಿಸಿದೆ. ಈ ಛಾಯಾಚಿತ್ರದಲ್ಲಿ ಅದರ ನೆರಳು ಕಾಣಿಸುತ್ತಿದೆ. ಮಂಗಳನ ಮೇಲ್ಮೈನಿಂದ ಆಗಸಕ್ಕೆ ಚಿಮ್ಮಿದಾಗ ಅದು ಈ ಫೋಟೋ ಕ್ಲಿಕ್ಕಿಸಿದೆ. ಇದಾದ ಬಳಿಕ ಕೆಲವೇ ಕ್ಷಣಗಳಲ್ಲಿ ಮಂಗಳನ ಮೇಲ್ಮೈನಿಂದ ಕಲರ್ ಫೋಟೋ ಕೂಡ ರವಾನಿಸಿದೆ.
ಮಂಗಳನ ಮೇಲ್ಮೈ ಮೇಲೆ ಹಾರಾಟ ನಡೆಸಲು ಹೆಲಿಕಾಪ್ಟರಿಗೆ ಅಳವಡಿಸಲಾಗಿರುವ ಬ್ಲೇಡ್‌ ಗಳನ್ನು ವಿರುದ್ಧ ದಿಕ್ಕಿನಲ್ಲಿ ಭೂಮಿಯ ಮೇಲ್ಭಾಗದಲ್ಲಿ ಇರುವ ಸ್ಪೀಡ್ ಗಿಂತ ಐದು ಪಟ್ಟು ಹೆಚ್ಚು ಸ್ಪೀಡ್ ನಲ್ಲಿ ತಿರುಗಿಸಲಾಗಿದೆ.ಇವು ಒಂದು ನಿಮಿಷಕ್ಕೆ 2500 ಸುತ್ತು ಸುತ್ತುತ್ತವೆ. ಇದೊಂದು ತುಂಬಾ ಹಗುರವಾದ ಹೆಲಿಕ್ಯಾಪ್ಟರ್ ಆಗಿದೆ. ಹೀಗಾಗಿ ಇದರ ಬ್ಲೇಡ್ ಗಳು ತುಂಬಾ ವೇಗವಾಗಿ ತಿರುಗುತ್ತವೆ. ಇದು ಮಂಗಳನ ವಾತಾವರಣ ಹಾಗೂ ಭಯಂಕರ ಚಳಿಯಲ್ಲಿಯೂ ಕೂಡ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ.

ಪ್ರಮುಖ ಸುದ್ದಿ :-   2024ರಲ್ಲಿ ಸತ್ಯ ನಾಡೆಲ್ಲಾ, ಪಿಚೈ ಹಿಂದಿಕ್ಕಿ ದಾಖಲೆಯ 1,157 ಕೋಟಿ ರೂ. ಪಡೆದ ಭಾರತೀಯ ಮೂಲದ ಟೆಸ್ಲಾ ಕಾರ್ಯನಿರ್ವಾಹಕ ಅಧಿಕಾರಿ...!

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement