ಕೋವಿಡ್‌ ಒಂಟಿತನದ ಕಾಲಘಟ್ಟದಲ್ಲಿ ಚಿಂತೆ ಬಿಡು ನಾನಿದ್ದೇನೆ ಗೆಳೆಯ ಎನ್ನುವ ಪುಸ್ತಕಗಳು..!

(ಏಪ್ರಿಲ್‌ ೨೩ನ್ನು ಜಗತ್ತಿನಾದ್ಯಂತ ವಿಶ್ವ ಪುಸ್ತಕ ದಿನವಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಲೇಖನ)

ಪುಸ್ತಕಗಳು ನಮ್ಮ ಒಳ್ಳೆಯ ಸ್ನೇಹಿತರಷ್ಟೇ ಅಲ್ಲ ಒಳ್ಳೆಯ ಮಾರ್ಗದರ್ಶಕ ಮತ್ತು ಶ್ರೇಷ್ಠ ಒಡನಾಡಿಯೂ ಹೌದು. ಪ್ರಸ್ತುತ ಇಡೀ ಪ್ರಪಂಚವನ್ನೇ ಆಪೋಶನ ಮಾಡುತ್ತಿರುವ ಕೋವಿಡ್-೧೯ರ ವಿರುದ್ಧ ಹೋರಾಡುವ ಈ ಸಂದರ್ಭದಲ್ಲಿ ಅನೇಕ ಜನರಿಗೆ ಏಕಾಂಗಿತನ ಕಾಡದಂತೆ ಕಾಪಾಡುತ್ತಿರುವ ಸ್ನೇಹಿತನೆಂದರೆ ಪುಸ್ತಕ.
ನಮ್ಮ ಜೀವನದಲ್ಲಿ ಹಲವಾರು ಬಂಧುಗಳು, ಸಹಪಾಠಿಗಳು, ಸಹೋದ್ಯೋಗಿಗಳು ಬಂದು ಹೋಗಬಹುದು. ಆದರೆ ಪುಸ್ತಕಗಳು ಸದಾಕಾಲ ನಮ್ಮ ಜೊತೆಗಿರುವ ಗೆಳೆಯರು, ಮಾನವ ಕುಲದ ವಿಕಾಸ ಪ್ರಕ್ರಿಯೆಯಲ್ಲಿ, ಪುಸ್ತಕಗಳ ಪಾತ್ರ ಅಪಾರವಾಗಿದೆ. ಒಂದು ಪ್ರದೇಶದ ಸಂಸ್ಕೃತಿ, ಜನ ಜೀವನವನ್ನು, ಆ ಭಾಷೆಯ ಮೂಲಕ ಬೆಳೆಸಲು, ಪುಸ್ತಕಗಳು ಸಹಾಯ ಮಾಡುತ್ತವೆ. ಮತ್ತು ನಮ್ಮ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್‍ಯಗಳನ್ನು ಪುಸ್ತಕಗಳು ಮಾಡುತ್ತಿವೆ. ಅಂತೆಯೇ ಈ ಅಂಶವನ್ನು ಮನಗಂಡ, ಯುನೆಸ್ಕೋ ಸಂಸ್ಥೆಯು ೧೯೯೫ ರಲ್ಲಿ ಏಪ್ರಿಲ್‌ ೨೩ನ್ನು ವಿಶ್ವ ಪುಸ್ತಕ ದಿನವನ್ನಾಗಿ ಘೋಷಿಸಿದೆ.
ಓದುವ ಅಭಿರುಚಿಯನ್ನು ಬೆಳೆಸುವದು, ಪುಸ್ತಕೋದ್ಯಮವನ್ನು ಬೆಂಬಲಿಸುವುದು ಮತ್ತು ಗ್ರಂಥಸ್ವಾಮ್ಯ ಕಾಯ್ದೆಯನ್ನು ಬಲಪಡಿಸುವದು ವಿಶ್ವ ಪುಸ್ತಕ ದಿನಾಚರಣೆಯ ಉದ್ದೇಶಗಳಾಗಿವೆ. ಜಗತ್ತಿನ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವಿಶ್ವ ಪುಸ್ತಕ ದಿನವನ್ನು ರಾಷ್ಟ್ರೀಯ ಹಬ್ಬದಂತೆ ಆಚರಿಸಲಾಗುತ್ತದೆ.
೧೯೯೫ರಲ್ಲಿ ವಿಶ್ವ ಪುಸ್ತಕ ದಿನದ ಘೋಷಣೆಯಾಗುವುದಕ್ಕಿಂತ ಮುಂಚೆ ೧೯೨೩ ರಲ್ಲಿ ಸ್ಪೇನ್‌ನಲ್ಲಿ ಪುಸ್ತಕ ವ್ಯಾಪಾರಿಗಳು ಪುಸ್ತಕ ದಿನವನ್ನು ಆಚರಿಸುತ್ತಿದ್ದ ಕುರಿತು ಉಲ್ಲೇಖಗಳಿವೆ. ಇದಕ್ಕಿಂತ ಮುಂಚೆ ೧೪೩೬ ಸುಮಾರಿನಲ್ಲಿ ಈ ದಿನವನ್ನು ಗುಲಾಬಿ ದಿನವನ್ನಾಗಿ ಆಚರಿಸುತ್ತಿದ್ದರೆಂಬುದಕ್ಕೆ ಹಲವಾರು ಪುರಾವೆಗಳು ವಿಶ್ವ ಇತಿಹಾಸದಲ್ಲಿ ಅಡಗಿವೆ. ಅಂದು ಜಾಗತಿಕ ಮನ್ನಣೆ ಹೊಂದಿದ ಬರಹಗಾರ ಸರ್ವಾಂಟೀಸ್‌ನ ನೆನಪಿನಲ್ಲಿ ಪುಸ್ತಕಗಳನ್ನು ಹಾಗೂ ಗುಲಾಬಿ ಹೂವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಈ ದಿನವನ್ನು ಆಚರಿಸುತ್ತಿದ್ದರೆಂಬ ಉಲ್ಲೇಖಗಳಿವೆ.
ವೆಲೆನ್ಸಿಯಾದ ಶ್ರೇಷ್ಠ ಬರಹಗಾರರಾದ ವಿಸೆಂಟ್, ಕ್ಲವಲ್, ಆಯ್ಯಂಡ್ರ್ಯು ಅವರು ಜನಿಸಿದ್ದು ಅಕ್ಟೋಬರ್ ೭ ಮತ್ತು ಮರಣಿಸಿದ್ದು, ಎಪ್ರಿಲ್ ೨೩. ಶ್ರೇಷ್ಠ ಲೇಖಕರಾಗಿದ್ದ ಇವರ ಸ್ಮರಣೆಗೋಸ್ಕರ ವೆಲೆನ್ಸಿಯಾದ ಜನತೆ ವಿಸೆಂಟ್ ಅವರ ನೆನಪಿಗಾಗಿ ಎಪ್ರಿಲ್ ೨೩ನ್ನು ಪುಸ್ತಕ ದಿನಾಚರಣೆಯನ್ನಾಗಿ ಆಚರಿಸ ತೊಡಗಿದರು. ತದನಂತರಹದ ಕಾಲದಲ್ಲಿ ಅಂದರೇ ೧೯೯೫ ರ ಸುಮಾರಿಗೆ ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ (ಯುನೆಸ್ಕೋ) ದಿನವನ್ನು, ವಿಶ್ವ ವಿಖ್ಯಾತ ನಾಟಕಕಾರರಾದ ವಿಲಿಯಂ ಶೇಕ್ಸ್ ಪೀಯರ್ ಹಾಗೂ ಇಕಾಗಾನಿಸ್ಕಡೆಲಾವೆಗಾ ಮರಣ ಹೊಂದಿದ್ದನ್ನು ಹಾಗೂ ಅನೇಕ ಬರಹಗಾರರ ಜನ್ಮದಿನವನ್ನು ವಿಶ್ವ ಪುಸ್ತಕ ದಿನ ಮತ್ತು ಗ್ರಂಥ ಸ್ವಾಮ್ಯ ದಿನವನ್ನಾಗಿ ಘೋಷಿಸಿತು. ಇನ್ನೂ ಒಂದು ವಿಶೇಷತೆ ಏನೆಂದರೆ ಇದೇ ದಿನ ಶ್ರೇಷ್ಠ ನಾಟಕಕಾರ ಹಾಗೂ ದಾರ್ಶನಿಕರಾದ ವಿಲಿಯಂ ಶೇಕ್ಸಪಿಯರ್ ಅವರು ಜನಿಸಿದ್ದು ಹಾಗೂ ಮರಣ ಹೊಂದಿದ್ದು,
ವಿಶ್ವದಾದ್ಯಂತಹ ಪುಸ್ತಕ ಪ್ರಕಾಶಕರು ಮತ್ತು ವ್ಯಾಪಾರಿಗಳು, ಗ್ರಂಥಾಲಯಗಳು, ಶಾಲಾ-ಕಾಲೇಜುಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಸಾಂಸ್ಕೃತಿಕ ಸಂಘಟನೆಗಳು ಮತ್ತು ಸಾಹಿತ್ಯ ವೇದಿಕೆಗಳು ಈ ದಿನಾಚರಣೆಯಲ್ಲಿ ಭಾಗವಹಿಸಿ, ಪುಸ್ತಕ ಮತ್ತು ಓದುವಿಕೆಯ ಪ್ರಯೋಜನದ ಮಹತ್ವ ಸಾರುತ್ತವೆ.
ತಂತ್ರಜ್ಞಾನ ಬೆಳೆದಂತೆ, ಜಗತ್ತಿನ ಗಾತ್ರ ಚಿಕ್ಕದಾಗುತ್ತ, ಸಾಮಾಜಿಕ ಜಾಲ ತಾಣಗಳ ತೆಕ್ಕೆಯಲ್ಲಿ ಸೆರೆ ಸಿಕ್ಕ ಯುವ ಜನತೆಗೆ, ಪರೀಕ್ಷೆಯ ಪುಸ್ತಕಗಳನ್ನು ಓದಿ ಮುಗಿಸುವುದೇ ಯಕ್ಷ ಪ್ರಶ್ನೆಯಾದರೂ ಕೂಡ, ಜ್ಞಾನದ ಕಿಟಕಿಯಾದ ಪುಸ್ತಕವನ್ನು ಓದುವುದು ಇನ್ನೂ ನಿಂತಿಲ್ಲ,ಏಕೆಂದರೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾವಿರಾರು ಸ್ನೇಹಿತರು, ಹಿಂಬಾಲಕರು, ಇದ್ದು, ನಮಗೆ ಲೈಕ್‌ಗಳನ್ನು ಕೊಟ್ಟರೂ ಕೂಡ, ನಮ್ಮ ಕಷ್ಟ ಕಾಲದಲ್ಲಿ ಯಾರೂ ನಮ್ಮ ಬೆಂಬಲಕ್ಕೆ ಇರುವುದಿಲ್ಲ. ಆದರೆ ನಮ್ಮ ಕೈಯಲ್ಲಿ ಸಾಮಾಜಿಕ ಜಾಲತಾಣಗಳ ಉಪಕರಣಗಳ ಬದಲಿಗೆ ಪುಸ್ತಕವೊಂದಿದ್ದರೆ, ನಮ್ಮ ಕಷ್ಟ ಕಾಲದಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರವೊದಗಿಸಿ ನಮ್ಮ ಜೀವನವನ್ನು ರೂಪಿಸುತ್ತದೆ. ಪ್ರಪಂಚದಲ್ಲಿ ಮರಣವಿಲ್ಲದ ವರ ಪಡೆದಿರುವ ವಸ್ತುವೆಂದರೆ ಪುಸ್ತಕ.
ಪುಸ್ತಕಗಳು ಸಂಸ್ಕೃತಿಯ ಪ್ರಸರಣೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಕಾಲದಿಂದ ಕಾಲಕ್ಕೆ ಸಮಾಜ ಹಾಗೂ ತಂತ್ರಜ್ಞಾನ ಬೆಳೆದಂತೆ, ಪುಸ್ತಕದ ಬಾಹ್ಯ ಸ್ವರೂಪ ತಾಡೋಲೆಯಿಂದ, ಇ-ಪುಸ್ತಕದ ವರೆಗೆ ಬದಲಾದರೂ ಕೂಡ ಅದರ ಅಂತರಂಗದ ಉದ್ದೇಶ ಒಂದೇ ಆಗಿದೆ. ಶಿಕ್ಷಣ ನಮ್ಮನ್ನು ಸಾಕ್ಷರರನ್ನಾಗಿ ಮಾಡಿದರೆ ಪುಸ್ತಕಗಳು ನಮ್ಮನ್ನು ಸಂಸ್ಕೃತಿಯ ವಾರಸುದಾರರನ್ನಾಗಿ ಮಾಡುತ್ತವೆ.
ವಿಶ್ವ ಪುಸ್ತಕ ದಿನಾಚರಣೆಗೆ ಗ್ರಂಥ ಸ್ವಾಮ್ಯ ದಿನವೆಂದು ಕರೆಯುತ್ತಾರೆ. ಈ ಮೊದಲು ಕೃತಿ ಸ್ವಾಮ್ಯ ಅಥವಾ ಕಾಪಿರೈಟ್ ಸಂಬಂಧಿಸಿದಂತೆ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ನಡೆದದ್ದು ೧೮೮೬ ರಲ್ಲಿ. ೧೮೦೦ರ ಸುಮಾರಿನಲ್ಲಿ ಒಬ್ಬ ಲೇಖಕನ ಕೃತಿ ಮತ್ತೊಂದು ದೇಶದಲ್ಲಿ ಅನುಮತಿ ಇಲ್ಲದೆ ಪ್ರಕಟವಾಗಿ ಲೇಖಕ ಮತ್ತು ಪ್ರಕಾಶನಿಗೆ ನಷ್ಟವಾಗುತ್ತಿದ್ದುದನ್ನು ತಡೆಯಲು ಫ್ರೆಂಚ್‌ ಲೇಖಕ ವಿಕ್ಟರ್ ಹ್ಯೂಗೋ ಪ್ರಮುಖ ಲೇಖಕರನ್ನೊಳಗೊಡ ಇಂಟರ್‌ನ್ಯಾಶನಲ್ ಲಿಟರರಿ, ಆಂಡ್, ಆರ್ಟಿಸ್ಟಿಕ್ ಅಸೋಶೀಯೇಶನ್ ಮೂಲಕ ಯುರೋಪಿನ ಸ್ವಿಟ್ಜರ್‌ಲೆಂಡಿನಲ್ಲಿ ಸಮ್ಮೇಳನ ನಡೆಸಿ, ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲು ಕಾರಣನಾದ, ಮುಂದೆ ಈ ನಿರ್ಣಯಗಳೇ ಬರ್ನ್ ಕನ್ವೇನ್‌ಷನ್ ಎಂದು ಪ್ರಸಿದ್ಧಿ ಪಡೆಯಿತು. ಈ ನಿಯಮಗಳನ್ನು ೧೯೭೧ ರಲ್ಲಿ ಪರಿಷ್ಕೃತಗೊಳಿಸಲಾಯಿತು. ಈ ನಿಯಮಗಳನ್ನು ಭಾರತವೂ ಸೇರಿದಂತೆ ಬಹುಪಾಲು ಎಲ್ಲ ರಾಷ್ಟ್ರಗಳು ಒಪ್ಪಿವೆ.
ಭಾರತದಲ್ಲಿ ಮೊಟ್ಟ ಮೊದಲಿಗೆ ಈಸ್ಟ್ ಇಂಡಿಯಾ ಕಂಪನಿಯು ಇಂಗ್ಲೆಂಡಿನಲ್ಲಿದ್ದ ಕಾಪಿರೈಟ್ ಕಾಯ್ದೆಯನ್ನೇ ೧೮೪೭ ರಲ್ಲಿ ಜಾರಿಗೊಳಿಸಿತು. ಆಗ ಒಂದು ಕೃತಿಯ ಕಾಪಿರೈಟ್ ಅಥವಾ ಗ್ರಂಥ ಸ್ವಾಮ್ಯವು ಒಟ್ಟಾರೆ ೪೭ ವರ್ಷಕ್ಕೆ ಸೀಮಿತವಾಗಿತ್ತು.
ಸಮಾಜದಲ್ಲಿನ ನಿಯಮಾವಳಿಗಳು ಬದಲಾದಂತೆ ಹಲವು ತಿದ್ದು ಪಡಿಗಳನ್ನು ತರಲಾಯಿತು. ಭಾರತ ಸ್ವಾತಂತ್ರ್ಯಗೊಂಡ ನಂತರ ಕೃತಿ ಸ್ವಾಮ್ಯ ಕಾನೂನನ್ನು ೧೯೫೮ ರಲ್ಲಿ ಜನವರಿ ೨೧ ರಂದು ಜಾರಿಗೆ ತರಲಾಯಿತು. ತದ ನಂತರ ಈ ಕಾನೂನಿಗೆ ೧೯೮೩. ೧೯೮೪, ೧೯೯೪, ೧೯೯೯, ೨೦೧೦ ರಲ್ಲಿ ತಿದ್ದು ಪಡಿಗಳನ್ನು ಮಾಡಲಾಗಿದೆ. ಈ ಕಾಪಿರೈಟ್ ಕಾಯ್ದೆಯ ಪ್ರಕಾರ ಯಾವುದೇ ಲೇಖಕನ ಕೃತಿಯು ಅವನ ಮರಣ ದಿನಾಂಕದಿಂದ ೬೦ ವರ್ಷಗಳ ವರೆಗೆ ಅಸ್ತಿತ್ವದಲ್ಲಿರುತ್ತದೆ. ಇದು ಲೇಖಕ ಮತ್ತು ಪ್ರಕಾಶನ ನಡುವಿನ ಒಪ್ಪಂದ ಈ ಪ್ರಕ್ರಿಯೆಯಲ್ಲಿ ಬಹಳ ಮುಖ್ಯ. ಒಂದು ವೇಳೆ ಈ ಕಾನೂನಿನ ಉಲ್ಲಂಘನೆಯಾದಲ್ಲಿ ಕ್ರಿಮಿನಲ್ ಅಥವಾ ಸಿವಿಲ್ ಮೊಕದ್ದಮೆಗಳನ್ನು ಹೂಡಲು ಅವಕಾಶವಿದೆ. ಮೊದಲು ಕೇವಲ ಸಾಹಿತ್ಯ ಕೃತಿಗಳಿಗಷ್ಟೇ ಸೀಮತಿವಾಗಿದ್ದ ಈ ಕಾಯ್ದೆಯನ್ನು ಇದೀಗ ಸಂಗೀತ, ನಾಟಕ, ಚಲನಚಿತ್ರ, ಕೃತಿ, ಬಾನುಲಿ ಪ್ರಸಾರಗಳಂತಹ ಕಲೆಗಳಿಗೂ ಅನ್ವಯಿಸಿ ಬೌದ್ಧಿಕ ಆಸ್ತಿ ಹಕ್ಕು ಎಂದು ಕರೆಯಲಾಗಿದೆ.
ಭಾರತದಲ್ಲಿನ ವಿವಿಧ ರಾಜ್ಯಗಳು, ಕಾಪಿರೈಟ್ ಕೇಂದ್ರ ಮತ್ತು ಸಮಿತಿಗಳನ್ನು ಹೊಂದಿದ್ದು, ಕರ್ನಾಟಕದಲ್ಲಿ ಕಬ್ಬನ್ ಪಾರ್ಕಿನಲ್ಲಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿಯಲ್ಲಿ ರಾಜ್ಯ, ಕೇಂದ್ರ ಗ್ರಂಥಾಲಯವು ಗ್ರಂಥ ಸ್ವಾಮ್ಯ ಕೇಂದ್ರವಾಗಿದ್ದು, ಈ ಕಾಯ್ದೆಯಡಿಯಲ್ಲಿ ಗ್ರಂಥಗಳ ನೋಂದಣಿ ಮಾಡುತ್ತಿದೆ. ಅದೇ ರೀತಿ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯಡಿ ಪ್ರತ್ಯೇಕ ಸಮಿತಿಯ ಕೆಲಸ ನಿರ್ವಹಿಸುತ್ತಿದೆ. ಈ ಕಾಯ್ದೆಯ ಕುರಿತು ಹೆಚ್ಚಿನ ಅರಿವು ಮೂಡಿಸುವ ಉದ್ದೇಶವೂ ವಿಶ್ವ ಪುಸ್ತಕ ದಿನಾಚರಣೆಯ ಆಶಯವಾಗಿದೆ.
ವಿಶ್ವ ಪುಸ್ತಕ ದಿನವನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಸಾಹಿತ್ಯ ಅಕಾಡೆಮಿ, ಕರ್ನಾಟಕ ಲೇಖಕ ಮತ್ತು ಲೇಖಕಿಯರ ಸಂಘ, ಪ್ರಕಾಶಕರ ಸಂಘ ಮುಂತಾದ ಸಂಸ್ಥೆಗಳು ನಿರಂತರ ವಿಚಾರ ಸಂಕಿರಣ, ಹಿರಿಯ ಪ್ರಕಾಶಕರಿಗೆ ಗೌರವಾರ್ಪಣೆ, ಪುಸ್ತಕೋದ್ಯಮದ ಕಾರ್‍ಯಗಳು, ಉಚಿತ ಪುಸ್ತಕ ಹಂಚುವಿಕೆ, ಉಪನ್ಯಾಸ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ, ಪುಸ್ತಕಗಳ ಕಡೆಗೆ ಜನಸಮುದಾಯವನ್ನು ಸೆಳೆಯುವ ಚಟುವಟಿಕೆಗಳಿಗೆಲ್ಲ ಅರ್ಥಪೂರ್ಣವಾಗಿ ತೊಡಗಿಸಿಕೊಂಡಿವೆ. ಆಧುನಿಕ ಬದುಕಿನ ಒತ್ತಡ, ಹಾಗೂ ನಮ್ಮ ಶಿಕ್ಷಣ ಕ್ರಮದಲ್ಲಿನ ಬದಲಾವಣೆಗಳು ಹಾಗೂ ಇತರ ಆಕರ್ಷಣೆಗಳಿಂದಾಗಿ, ಪುಸ್ತಕೋದ್ಯಮ ಬೆಳೆಯುತ್ತಿದೆ.
-ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement