ಎಲ್ಲ ರಾಜ್ಯಗಳಿಗೂ ಹೆಚ್ಚುವರಿ ಆಮ್ಲಜನಕ-ರೆಮ್ಡಿಸಿವಿರ್‌ ಪೂರೈಕೆ: ಪ್ರಧಾನಿ ಮೋದಿ

ಬೆಂಗಳೂರು: ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಮ್ಲಜನಕ ಹಾಗೂ ರೆಮ್ಡಿಸಿವಿರ್‌ ವ್ಯಾಕ್ಸಿನ್‌ ಹೆಚ್ಚುವರಿ ಉತ್ಪಾದನೆ ಹಾಗೂ ಪೂರೈಕೆಗೆ ಕೇಂದ್ರ ಸರ್ಕಾರ ಸಿದ್ಧವಿದ್ದು, ರಾಜ್ಯ ಸರ್ಕಾರಗಳೂ ಪರಸ್ಪರ ಸಹಕರಿಸುವ ಮೂಲಕ ಸವಾಲನ್ನು ಸಮರ್ಥವಾಗಿ ಎದುರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಶುಕ್ರವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು, ಈಗ ಎದುರಾಗಿರುವ ವಿಪತ್ತನ್ನು ಎದುರಿಸಲು ಆರೋಗ್ಯ ಸೇವಾ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡುವುದು ಅಗತ್ಯ. ಮುನ್ನೆಚ್ಚರಿಕೆಯ ಕ್ರಮಗಳ ಕಟ್ಟುನಿಟ್ಟಿನ ಪಾಲನೆ, ಅನಗತ್ಯ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸುವುದು ಹಾಗೂ ಆಮ್ಲಜನಕದ ಸಮರ್ಪಕ ಹಾಗೂ ಮಿತಬಳಕೆಗೆ ಆದ್ಯತೆ ನೀಡುವುದು ಹಾಗೂ ಜನರಲ್ಲಿ ವಿಶ್ವಾಸ ಮೂಡಿಸುವುದು ಅತಿ ಅಗತ್ಯ ಎಂದು ಪ್ರಧಾನಿ ಮೋದಿ ಹೇಳಿದರು. .
ಯಾವುದೇ ಕಾರಣಕ್ಕೂ ಆಮ್ಲಜನಕದ ದುರ್ಬಳಕೆ ಆಗದಂತೆ ಎಲ್ಲ ರಾಜ್ಯಗಳಲ್ಲೂ ಆಕ್ಸಿಜನ್ ಆಡಿಟ್ ಮಾಡಿಸುವಂತೆ ಸೂಚಿಸಿದ ಪ್ರಧಾನಿ ಆಮ್ಲಜನಕದ ಟ್ಯಾಂಕರುಗಳ ಸುಗಮ ಸಂಚಾರಕ್ಕೆ ರಾಜ್ಯ ಸರ್ಕಾರಗಳು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಆಮ್ಲಜನಕ ಮತ್ತು ರೆಮ್ಡಿಸಿವಿರ್‌ ಸದ್ಬಳಕೆಯಾಗುವ ನಿಟ್ಟಿನಲ್ಲಿ ಜನರು ಆತಂಕದ ಕೊಳ್ಳುವಿಕೆ ನಿಯಂತ್ರಿಸಬೇಕು. ಹೆಚ್ಚುತ್ತಿರುವ ಪ್ರಕರಗಳಿಂದ ಮಾನವ ಸಂಪನ್ಮೂಲ ಅಗತ್ಯತೆಯೂ ಹೆಚ್ಚುತ್ತಿದ್ದು, ಇತ್ತೀಚೆಗೆ ನಿವೃತ್ತರಾದ ಸಿಬ್ಬಂದಿಯ ಸೇವೆ ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.
ಮಾಹಿತಿ ನೀಡಿ-ಅಗತ್ಯದ ಬಗ್ಗೆ ಹೇಳಿದ ಬಿಎಸ್‌ವೈ :
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ರಾಜ್ಯದ ವಸ್ತುಸ್ಥಿತಿ ವಿವರಿಸಿದರು.
ರಾಜ್ಯದಲ್ಲಿ ಆಮ್ಲಜನಕದ ಬಳಕೆ ದಿನೇ ದಿನೇ ಹೆಚ್ಚುತ್ತಿದ್ದು, ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೇವಲ 300 ಟನ್ ಆಮ್ಲಜನಕ ಹಂಚಿಕೆ ಮಾಡಿದೆ. ಏಪ್ರಿಲ್ 30ರ ನಂತರ 1471 ಟನ್ ಆಮ್ಲಜನಕದ ಅಗತ್ಯವಿದೆ. ಕೂಡಲೇ 1471 ಟನ್ ಆಮ್ಲಜನಕ ಹಂಚಿಕೆ ಮಾಡುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ರೆಮ್ಡಿಸಿವಿರ್‌ ಕೊರತೆಯಾಗದಂತೆ ಎಚ್ಚರ ವಹಿಸಲಾಗುತ್ತಿದ್ದು, ಮುಂದಿನ 10 ದಿನಗಳಿಗೆ 2 ಲಕ್ಷ ಡೋಸ್ ಗಳಷ್ಟು ರೆಮ್ಡಿಸಿವಿರ್‌ ಒದಗಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಪಾಸಿಟಿವಿಟಿ ದರ ಶೇ. 16 ರಷ್ಟಿದೆ. ಬೆಂಗಳೂರು ನಗರ ಅತಿ ಹೆಚ್ಚು ಪೀಡಿತವಾಗಿದ್ದು, ತುಮಕೂರು, ಬಳ್ಳಾರಿ, ಮೈಸೂರು, ಹಾಸನ ಮತ್ತು ಕಲಬುರಗಿ ಜಿಲ್ಲೆಗಳಲ್ಲಿಯೂ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ.
ಕಳೆದ ಆರು ತಿಂಗಳಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ರೋಗಿಗಳನ್ನು ದಾಖಲಿಸಲು ಖಾಸಗಿ ಆಸ್ಪತ್ರೆಗಳ ಶೇ. 50 ರಷ್ಟು ಹಾಸಿಗೆಗಳನ್ನು ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಗಳು, ಸಮೀಪದ ಹೋಟೆಲ್ ಗಳ ಸಹಯೋಗದೊಂದಿಗೆ ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿದೆ. ಐಸಿಯು ಸೌಲಭ್ಯಗಳಿರುವ ಫೀಲ್ಡ್ ಆಸ್ಪತ್ರೆಗಳನ್ನು ಸ್ಥಾಪಿಸಲು ಸಹ ಚಿಂತನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದಂತೆ ತಡೆಯಲು ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಜೊತೆಗೆ ಇತರ ಮುನ್ನೆಚ್ಚರಿಕೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ರಾಜ್ಯದ ಆರ್ಥಿಕ ಚಟುವಟಿಕೆಗಳ ಮೇಲೆ ಕನಿಷ್ಠ ಪರಿಣಾಮವಾಗುವ ರೀತಿಯಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಪ್ರಮುಖ ಸುದ್ದಿ :-   ಆಕ್ಷೇಪಾರ್ಹ ವಿಡಿಯೋ ವಿವಾದ: ಪಂಜಾಬ್ ಸಿಎಂ ಭಗವಂತ ಮಾನ್ 'ಗುರು ದ್ರೋಹಿ', 'ಸಮುದಾಯ ವಿರೋಧಿ' ಎಂದು ಅಕಾಲ ತಖ್ತ್ ಘೋಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement