ಏನ್ರೀ ಇದು… ಭಾರತದಲ್ಲಿ ಮುಂದಿನ‌ ತಿಂಗಳು ಪ್ರತಿದಿನ 8 ಲಕ್ಷ ಕೊರೋನಾ ಸೋಂಕು ಸಾಧ್ಯತೆ: ಅಮೆರಿಕ ಸಂಸ್ಥೆ ಅಧ್ಯಯನ ವರದಿ..!!

ನವ ದೆಹಲಿ: ದೇಶದಲ್ಲಿ ಎರಡನೇಕೊರೊನಾ ಅಲೆ ವೇಗವಾಗಿ ಹರಡುತ್ತಿದ್ದು ತಲ್ಲಣವನ್ನೇ ಸೃಷ್ಟಿಸುತ್ತಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಪ್ರತಿದಿನ ಮೂರು ಲಕ್ಷಕ್ಕೂ ಹೆಚ್ಚು ದೈನಂದಿನ ಕೊರೊನಾ ಸೋಂಕುಗಳು ದಾಖಲಾಗುತ್ತಿವೆ. ಈ ನಡುವೆ ಮುಂದಿನ‌ ತಿಂಗಳು ಕೊರೊನಾ ಸೋಂಕು ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಅಧ್ಯಯನವೊಂದು ಬಹಿರಂಗ ಪಡಿಸಿದೆ.
ಭಾರತದಲ್ಲಿ ತೀವ್ರವಾಗಿ ಹೆಚ್ಚಳವಾಗುತ್ತಿರುವ ಕೊರೊನಾ ಬಗ್ಗೆ ಅಧ್ಯಯನ ನಡೆಸಿದ ವಾಷಿಂಗ್ಟನ್ ನ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಮತ್ತು ಇವ್ಯಾಲ್ಯುಎಷನ್ (IHME) ಸಂಸ್ಥೆ ಈ ಮಾಹಿತಿ ಬಹಿರಂಗಪಡಿಸಿದೆ. ಏಪ್ರಿಲ್ 15ರಂದು ತನ್ನ ಅಧ್ಯಯನ ಪ್ರೆಸೆಂಟ್‌ ಮಾಡಿರುವ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಮತ್ತು ಇವ್ಯಾಲ್ಯುಎಷನ್ (IHME) ಸಂಸ್ಥೆ, ಮುಂದಿನ‌ ತಿಂಗಳು ಕೊರೋನಾ ಭಾರೀ ಉಲ್ಬಣವಾಗಲಿದೆ ಎಂದು ಹೇಳಿದೆ.
ಈ ಅಧ್ಯಯನ ವರದಿ ಪ್ರಕಾರ ಮೇ ತಿಂಗಳ ಅರಂಭ ಹಾಗೂ ಮಧ್ಯ ಭಾಗದಲ್ಲಿ ಭಾರತದಲ್ಲಿ ಕೊರೊನಾ ದೈನಂದಿನ ಸೋಂಕು 6,65,000ಕ್ಕೆ ಏರಿಕೆಯಾಗಬಹುದು, ದೈನಂದಿನ ಮರಣದ ಸಂಖ್ಯೆ ಸಹ ಏರಲಿದ್ದು, ಸುಮಾರು 5,600 ಸಂಖ್ಯೆ ದಾಟಲಿದೆ. ಅಲ್ಲದೆ, ದೇಶದಲ್ಲಿ ಏಪ್ರಿಲ್ 12ರಿಂದ ಆಗಸ್ಟ್ 1ರ ನಡುವಿನ ಅವಧಿಯಲ್ಲಿ ಒಟ್ಟು 3,29,000 ಸಾವುಗಳು ಸಂಭವಿಸಿಬಹುದು ಎಂದು ಹೇಳಿದೆ.
ಹೊಸ ಅಧ್ಯಯನದಲ್ಲಿ ಸಂಶೋಧಕರು ಅಂದಾಜು ಮಾಡಿರುವ ಪ್ರಕಾರ ಮುಂದಿನ ವರ್ಷ ಅಂದರೆ 2022 ಏಪ್ರಿಲ್ 12 ರ ಹೊತ್ತಿಗೆ ಭಾರತದಲ್ಲಿ ಶೇಕಡಾ 24ರಷ್ಟು ಜನರಿಗೆ ಕೋವಿಡ್-19 ಸೋಂಕು ತಗುಲಿರುತ್ತದೆ. ಮೇ ತಿಂಗಳ ಎರಡನೇ ವಾರದಲ್ಲಿ 8 ಲಕ್ಷದ ವರೆಗೆ ಹೊಸ ದೈನಂದಿನ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.
ಹಿಂದೆ ವಾಷಿಂಗ್ಟನ್ ನ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವ್ಯಾಲ್ಯುಎಷನ್ ಸಂಸ್ಥೆಯು ‘ಭಾರತದ ದೈನಂದಿನ ಕೋವಿಡ್ -19 ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯು 2020ರ ಸೆಪ್ಟೆಂಬರ್ ನಿಂದ 2021ರ ಫೆಬ್ರವರಿ ಮಧ್ಯದ ವರೆಗೆ ಕುಸಿಯಲಿವೆ’ ಎಂದು ಹೇಳಿತ್ತು. ಬಹುತೇಕ ಅಧ್ಯಯನ ಪ್ರಕಾರವೇ ನಡೆದಿತ್ತು.
ಎರಡನೇ ಅಲೆ ಶುರುವಾದ ಮೇಲೆ ಇದೇ ಮೊದಲ ಬಾರಿಗೆ ಏಪ್ರಿಲ್ 4ರಂದು 1,03,558 ಪ್ರಕರಣಗಳು ಪತ್ತೆಯಾಗಿತ್ತು. ನಂತರ ಏಪ್ರಿಲ್ 14ರಂದು 2,00,739 ಪ್ರಕರಣ ದಾಖಲಾಗಿತ್ತು. ಅಂದರೆ ಒಂದು ಲಕ್ಷದಷ್ಟು ಪ್ರಕರಣ ಹೆಚ್ಚಾಗಲು ತೆಗೆದುಕೊಂಡ ಸಮಯ ಕೇವಲ 11 ದಿನಗಳು ಮಾತ್ರ..! ಉಲ್ಬಣ ಹೆಚ್ಚಾಗಿ ನಂತರ ಏಪ್ರಿಲ್ 21ರಂದು 3,14,835 ಪ್ರಕರಣ ದಾಖಲಾಗಿತ್ತು. ಅಂದರೆ ಮತ್ತೆ ಒಂದು ಲಕ್ಷಕ್ಕಿಂತ ಹೆಚ್ಚು ದೈನಂದಿನ ಪ್ರಕರಣಗಳು ದಾಖಲಾಗಲು ತೆಗೆದುಕೊಂಡ ಅವಧಿ ಎಂಟು ದಿನಗಳು ಮಾತ್ರ..!! ಏಪ್ರಿಲ್ 23ರಂದು 3,46,786 ಹೊಸ ಪ್ರಕರಣಗಳು ದಾಖಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ