15 ದಿನದಲ್ಲಿ ಬೆಂಗಳೂರು ಸೇರಿ ಆರು ಕಡೆ ಮೇಕ್‍ಶಿಫ್ಟ್ ಕೊವಿಡ್‌ ಆಸ್ಪತ್ರೆ ಸ್ಥಾಪನೆ

posted in: ರಾಜ್ಯ | 0

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳದ ಮಧ್ಯೆ, ಹದಿನೈದು ದಿನಗಳಲ್ಲಿ ಬೆಂಗಳೂರು ಮತ್ತು ಇತರೆಡೆ ಐಸಿಯು ಮತ್ತು ವೆಂಟಿಲೇಟರ್‌ನೊಂದಿಗೆ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಅಲ್ಲದೆ, ಕೊರೊನಾ ಸೋಂಕಿತರಿಗೆ ಶೇ .80ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಬೇಕು ಎಂದು ಖಾಸಗಿ ಆಸ್ಪತ್ರೆಗಳು ಹಾಗೂ ಸೌಲಭ್ಯಗಳಿಗೆ ಸರ್ಕಾರ ಆದೇಶಿಸಿದೆ.
ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ‘ಬೆಂಗಳೂರಿನ ತೃತೀಯ ಆರೈಕೆ ಆಸ್ಪತ್ರೆಗಳ ಆವರಣದಲ್ಲಿ ವೆಂಟಿಲೇಟರ್‌ಗಳೊಂದಿಗೆ 2,000 ಹಾಸಿಗೆಗಳ ತಾತ್ಕಾಲಿಕ ಐಸಿಯು ಸ್ಥಾಪಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶುಕ್ರವಾರ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ’ ಎಂದು ತಿಳಿಸಿದರು.
. ಅಲ್ಲದೆ, ಸುಮಾರು 250 ಹಾಸಿಗೆಗಳ ಸಾಮರ್ಥ್ಯವಿರುವ ಮಾಡ್ಯುಲರ್ ಐಸಿಯು ಇರುವ ತಾತ್ಕಾಲಿಕ ಆಸ್ಪತ್ರೆಗಳನ್ನು ಮೈಸೂರು, ಹುಬ್ಬಳ್ಳಿ, ಬೀದರ್, ಬೆಳಗಾವಿ ಮತ್ತು ಶಿವಮೊಗ್ಗಗಳಲ್ಲಿ ಸ್ಥಾಪಿಸಲಾಗುವುದು.ಹದಿನೈದು ದಿನಗಳಲ್ಲಿ ಈ ಆಸ್ಪತ್ರೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ವೆಂಟಿಲೇಟರ್‌ಗಳು ಸೇರಿದಂತೆ ವಿವಿಧ ಉಪಕರಣಗಳನ್ನು ಆಮದು ಮಾಡಿಕೊಳ್ಳಬೇಕಾಗಬಹುದು ಎಂದು ಹೇಳಿದರು.
ಕೋವಿಡ್‌ನ ಸರ್ಕಾರಿ ಹಾಸಿಗೆಗಳ ಸಂಖ್ಯೆಯನ್ನು ಈಗಿರುವ 50 ಪ್ರತಿಶತದಿಂದ 80 ಕ್ಕೆ ಹೆಚ್ಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದೇಶವನ್ನು ದಿನದ ಅಂತ್ಯದ ವೇಳೆಗೆ ನೀಡಲಾಗುವುದು ಎಂದರು.
ಕಳೆದ ವರ್ಷ ಆಮ್ಲಜನಕದ ಬೇಡಿಕೆ ಅಷ್ಟು ಹೆಚ್ಚಿರಲಿಲ್ಲ, ಆದರೆ ಈಗ ಜನರು ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆಗಳ ಬಗ್ಗೆ ದೂರು ನೀಡುತ್ತಿದ್ದಾರೆ ಮತ್ತು ಆಮ್ಲಜನಕ ಬೇಕೆಂದು ಒತ್ತಾಯಿಸುತ್ತಿದ್ದಾರೆ. ‘ನಮ್ಮ ಪ್ರಕರಣಗಳು ಉತ್ತುಂಗದಲ್ಲಿದ್ದಾಗ, ನಾವು ಕೇವಲ 300 ರಿಂದ 350 ಟನ್ ಆಮ್ಲಜನಕವನ್ನು ಮಾತ್ರ ಬಳಸಿದ್ದೇವೆ. ಈ ಬಾರಿ ನಾವು ಈಗಾಗಲೇ 500 ಟನ್ ಆಮ್ಲಜನಕ ಬಳಸಿದ್ದೇವೆ. ಇನ್ನೂ ಹೆಚ್ಚಾದರೆ ಆಮ್ಲಜನಕ ಕೊರತೆಯಾಗಬಹುದು’ ಎಂದ ಅವರು, ಮುಂದಿನ ತಿಂಗಳು ಸುಮಾರು 1,500 ಟನ್ ಆಮ್ಲಜನಕವನ್ನು ಪೂರೈಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಯಡಿಯೂರಪ್ಪ ಕೇಳಿದ್ದಾರೆ ಎಂದು ತಿಳಿಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ