ನೀರಿನೊಳಗೆ ಹೋಗಿ ಪಾಣಿಪೀಠವ ಹತ್ತಿ ಶಿವನ ಪೂಜೆ ಮಾಡುವ ಅರ್ಚಕ ಹಂಪಿಯ ಕೃಷ್ಣ ಭಟ್ಟರು ಶಿವೈಕ್ಯ

ಹಂಪಿ:ಶಿವಲಿಂಗದ ಪಾಣಿಪೀಠದ ಮೇಲೇರಿ ನಿತ್ಯವೂ ಪೂಜೆ ಸಲ್ಲಿಸಿ ಜಗತ್ತಿನ ಗಮನ ಸೆಳೆದಿದ್ದ ಹಂಪಿಯ ಬಡವಿಲಿಂಗ ದೇವಸ್ಥಾನದ ಅರ್ಚಕ ಕೃಷ್ಣ ಭಟ್ಟ ಅವರು ತಮ್ಮ 89ನೇ ವಯಸ್ಸಿನಲ್ಲಿ ಭಾನುವಾರ ನಿಧನರಾಗಿದ್ದಾರೆ.
ವಯೋಸಹಜ ಕಾಯಿಯಿಲೆಯಿಂದ ಅವರು ಬಳಲುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿಯ ಕೃಷ್ಣ ಭಟ್ಟ ಅವರು 1979ರಲ್ಲಿ ಹಂಪಿಗೆ ಬಂದು ನೆಲೆಸಿದ್ದರು. ಅಂದಿನಿಂದ ಬಡವಿ ಲಿಂಗಕ್ಕೆ ಪೂಜೆ ಮಾಡುತ್ತಿದ್ದರು. ಕಳೆದ ವರ್ಷ ಅನಾರೋಗ್ಯದಿಂದ ಪೂಜೆ ನಿಲ್ಲಿಸಿದ್ದರು. ಅವರ ಮಗ ಸದ್ಯ ಈ ಲಿಂಗದ ಪೂಜೆ ಮಾಡುತ್ತಿದ್ದಾರೆ.
ಬಡವಿಲಿಂಗ ದೇವಸ್ಥಾನದ ಈ ಶಿವಲಿಂಗ ನೀರಿನೊಳಗೆ ಇರುವ ಈ ಶಿವಲಿಂಗ ಏಕಶಿಲಾ ಮೂರ್ತಿಯಾಗಿದೆ. ಸುಮಾರು ಮೂರು ಮೀಟರ್ ಎತ್ತರದ ಇದನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕಪ್ಪು ಕಲ್ಲಿನಿಂದ ಕೆತ್ತಲಾಗಿದ್ದು, 3 ಮೀಟರ್ ಎತ್ತರವಿದೆ. ಶಿವಲಿಂಗವು ಮೂರು ಕಣ್ಣಿನ ಗುರುತುಗಳನ್ನು ಹೊಂದಿದೆ. ಮೂರು ಕಣ್ಣುಗಳು ಶಿವನ ಮೂರು ಕಣ್ಣುಗಳನ್ನು ಪ್ರತಿನಿಧಿಸುತ್ತದೆ. ಈ ದೇವಾಲಯಕ್ಕೆ ಹೊದಿಕೆಯಿಲ್ಲ. ಸೂರ್ಯನ ಬೆಳಕು ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತದೆ. ಮಳೆಗಾಲದಲ್ಲಿ ಮಳೆ ನೀರು ಒಳಕ್ಕೆ ಸುರಿಯುತ್ತದೆ.
ನೀರಿನೊಳಕ್ಕೆ ಇಳಿದು ಇಷ್ಟು ಬೃಹತ್‌ ಶಿವಲಿಂಗಕ್ಕೆ ಕೃಷ್ಣ ಭಟ್ಟರು ಪೂಜೆ ಸಲ್ಲಿಸಲು ಶಿವನ ಪಾಣಿಪೀಠ ಏರಬೇಕಾಗಿತ್ತು. ಪಾಣಿಪೀಠ ಏರಿ ಶಿವನ ಪೂಜೆ ಸಲ್ಲಿಸುತ್ತಿದ್ದ ಏಕೈಕ ವ್ಯಕ್ತಿ ಎಂದು ಅವರು ಹೆಸರುವಾಸಿಯಾಗಿದ್ದರು.
ಕೃಷ್ಣ ಭಟ್ಟರ ಬಗ್ಗೆ ಒಂದಷ್ಟು:
ಹಂಪಿಯ ಪ್ರವಾಸಿಗರಿಗೆ ಬಡವಿಲಿಂಗದ ಅರ್ಚಕರಾಗಿದ್ದ ಕೃಷ್ಣ ಭಟ್ಟರ ಪರಿಚಯ ಇರದಿರಲು ಸಾಧ್ಯವೇ ಇಲ್ಲ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕಾಸರವಳ್ಳಿ ಎಂಬ ಗ್ರಾಮದವರಾದ ಇವರು 1978ರಲ್ಲಿ ಮಲೆನಾಡಿನಿಂದ ಬಿಸಿಲು ನಾಡಿಗೆ ಬಂದು ಕೆಲಕಾಲ ವಿರೂಪಾಕ್ಷ ದೇವರ ಅರ್ಚಕರೂ ಆಗಿದ್ದರು…
ಸುಮಾರು 3 ಮೀಟರ್ ಎತ್ತರದ ಏಕಶಿಲೆಯ ಈ ಬಡವಿ ಶಿವಲಿಂಗದ ದೇವಾಲಯದ ಒಳಾಂಗಣ ವರ್ಷವಿಡೀ ನೀರಿನಿಂದ ಆವೃತವಾಗಿರುತ್ತದೆ. ವಯೋವೃದ್ಧ ಅರ್ಚಕರಾದ ಶ್ರೀಕೃಷ್ಣ ಭಟ್ಟರು ಗಂಟೆ ಒಂದಾಗುತ್ತಿದ್ದಂತೆಯೇ, ಕೈಯ್ಯಲ್ಲೊಂದು ಬಕೇಟು ಹಿಡಿದುಕೊಂಡು ಅದರಲ್ಲಿ ವಿಭೂತಿ, ಅರಿಶಿನ-ಕುಂಕುಮ, ನೈವೇದ್ಯಕ್ಕೆಂದು ಒಂದಿಷ್ಟು ಅಕ್ಕಿ ಇಟ್ಟುಕೊಂಡು, ಬೆನ್ನು ಬಾಗಿದ್ದರೂ ಊರುಗೋಲಿನೊಂದಿಗೆ ಬಡವಿ ದೇವಸ್ಥಾನ ತಲುಪುತ್ತಿದ್ದರು…
ಹೀಗೆ ಕಷ್ಟ ಪಟ್ಟು ದೇವಸ್ಥಾನಕ್ಕೆ ಬರುವ ಭಟ್ಟರಿಗೆ ಬಡವಿ ಲಿಂಗವನ್ನು ನೋಡಿದ ತಕ್ಷಣವೇ ಅದೆಲ್ಲಿಂದ ಬರುತ್ತಿತ್ತೋ ಅದಮ್ಯ ಚೇತನಾ ಶಕ್ತಿ… ವಯಸ್ಸಾದರೂ ತುಂಡು ಪಂಚೆ ಸುತ್ತಿಕೊಂಡು ಅವರ ಮಂಡಿವರೆಗೂ ಇರುವ ನೀರಿಗೆ ಇಳಿದು, 3 ಅಡಿ ನೀರಿನಲ್ಲಿ ಮಳುಗಿರುವ ಲಿಂಗದ ಪೀಠಕ್ಕೆ ಕಾಲೂರಿ, ಸುಮಾರು 9 ಅಡಿಯ ಲಿಂಗದ ಮೇಲ್ಭಾಗವನ್ನು ಶುಚಿಗೊಳಿಸುವ ಅವರ ಸಾಹಸ ರೋಮಾಂಚನ. ಇನ್ನೇನು ಬಿದ್ದು ಬಿಡುವರೇನೋ ಎಂಬಂತೆ ಕಂಡರೂ ಅಷ್ಟು ಎತ್ತರದ ಲಿಂಗದ ಮೇಲೆ ಹತ್ತಿ ಹಿಂದಿನ ದಿನದ ಹೂಗಳನ್ನು ಮತ್ತು ಭಕ್ತರು ಎಸೆದ ನಾಣ್ಯಗಳನ್ನು ಹೆಕ್ಕಿ ತೆಗೆದು, ನಂತರ ಬಕೆಟ್‌ನಿಂದ ನೀರನ್ನು ಲಿಂಗ ಸಂಪೂರ್ಣ ನೆನೆಯುವಷ್ಟು ಎರಚಿ, ಆ ಬೃಹತ್ ಲಿಂಗವನ್ನು ಶುದ್ಧೀಕರಿಸಿ, ಹೂವು, ವಿಭೂತಿ ಅರಿಶಿನ ಕುಂಕುಮವಿಟ್ಟು, ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸುತ್ತಿದ್ದರು.
ಸುಮಾರು ಅರ್ಧ ಗಂಟೆಗಳ ಕಾಲ ನಡೆಯುವ ಈ ಪೂಜಾ ಕೈಂಕರ್ಯವನ್ನು ಒಂದು ದಿನವೂ ತಪ್ಪಿಸದೇ ನಡೆಸಿಕೊಂಡು ಬಂದಿದ್ದ ಇವರು ಯಾರೊಂದಿಗೂ ಏನನ್ನೂ ಬಯಸುತ್ತಿರಲಿಲ್ಲ… ಹಾಗೊಮ್ಮೆ ಪ್ರವಾಸಿಗಳು ಮತ್ತು ಭಕ್ತಾದಿಗಳು ಸ್ವಯಂಪ್ರೇರಿತರಾಗಿ ಒಂದಷ್ಟು ಕಾಣಿಕೆ ಸಲ್ಲಿಸಿದರೆ, ಅದರ ಬಹುಪಾಲು ಮೊತ್ತವನ್ನು ಗೋಪೂಜೆ ಮತ್ತಿತರ ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದರಂತೆ.
ಬಾಗಿದ ದೇಹ, ಮಂದವಾಗಿದ್ದ ಕಿವಿ, ಮಂಜಾಗಿದ್ದ ಕಣ್ಣು ಇಷ್ಟೆಲ್ಲಾ ಇದ್ದರೂ ಪ್ರತಿನಿತ್ಯವೂ ಮಳೆ-ಗಾಳಿ-ಬಿಸಿಲು ಯಾವುದನ್ನೂ ಲೆಕ್ಕಿಸದೆ  ಶಿವನ ಆರಾಧನೆಯೇ ಸರ್ವಸ್ವ ಎಂದು ಮುಪ್ಪು ದೇಹಕ್ಕೆ ಬಂದಿರಬಹುದು, ಸಂಕಲ್ಪ, ಭಕ್ತಿಗೆ ಮುಪ್ಪಾಗಿಲ್ಲ ಎಂದು ಬಡವಿ ಲಿಂಗಕ್ಕೆ ತಪ್ಪಿಸದೇ ಪೂಜೆ ಸಲ್ಲಿಸುತ್ತಿದ್ದ ಕೃಷ್ಣ ಭಟ್ಟರು ಅಗಲಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

3.3 / 5. ಒಟ್ಟು ವೋಟುಗಳು 8

ನಿಮ್ಮ ಕಾಮೆಂಟ್ ಬರೆಯಿರಿ