ಬೆಂಗಳೂರು: ಅಂತ್ಯ ಸಂಸ್ಕಾರಕ್ಕೆ ಇನ್ಮೇಲೆ ಪ್ರಿ-ಬುಕಿಂಗ್, ಚಿತಾಗಾರದ ಎದುರು ಸರದಿ ತಪ್ಪಿಸಲು ಈ ವ್ಯವಸ್ಥೆ ಜಾರಿ

posted in: ರಾಜ್ಯ | 0

ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಭೀಕರತೆ ವಿಪರೀತ ಎನ್ನುವಷ್ಟಿದೆ. ಪ್ರತಿದಿನ ಹಾಸಿಗೆ, ವೆಂಟಿಲೇಟರ್, ಐಸಿಯುಗಳಿಗಾಗಿ ಜನ ಬೇಡುತ್ತಿದ್ದಾರೆ. ಈ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಪರದಾಡಬೇಕಾದ ಸ್ಥಿತಿಯಿದೆ.
ಗಂಟೆಗಟ್ಟಲೆ ಚಿತಾಗಾರದ ಎದುರು ಕಾಯುವುದು, ಆಂಬ್ಯುಲೆನ್ಸ್ ಮತ್ತು ಚಿತಾಗಾರದ ಸಿಬ್ಬಂದಿಯಿಂದ ಹಣ ವಸೂಲಿ ಸೇರಿದಂತೆ ನಾನಾ ದೂರುಗಳು ಪ್ರತಿದಿನ ಬಿಬಿಎಂಪಿತಲುಪುತ್ತಿದೆ. ಇದಕ್ಕೆ ಪರಿಹಾರ ನೀಡಲು ಮುಂದಾಗಿರುವ ಬೆಂಗಳೂರು ಬೃಹನ್‌ ನಗರ ಪಾಲಿಕೆ (ಬಿಬಿಎಂಪಿ) ಈಗ ಕೇಂದ್ರೀಕೃತ ವ್ಯವಸ್ಥೆಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಸದ್ಯ 12 ಚಿತಾಗಾರಗಳನ್ನು ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಬಳಸಲಾಗುತ್ತಿದೆ. ಮೊದಲು ಇವುಗಳ ಸಂಖ್ಯೆ ಐದು ಇತ್ತು. ಈಗ ಅವುಗಳನ್ನು12ಕ್ಕೆ ಏರಿಸಲಾಗಿದೆ. ಇದಲ್ಲದೆ ಪ್ರಾಯೋಗಿಕವಾಗಿ ಸುಮನಹಳ್ಳಿ ಮತ್ತು ಗಿಡ್ಡಹಳ್ಳಿಯಲ್ಲಿ ಗ್ಯಾಸ್ ಚಿತಾಗಾರಗಳನ್ನು ತುರ್ತಾಗಿ ತೆರೆಯಲು ಉದ್ದೇಶಿಸಲಾಗಿದೆ.
ನಗರದ ವಿವಿಧ ಆಸ್ಪತ್ರೆಗಳಿಂದ ಒಂದೇ ಚಿತಾಗಾರಕ್ಕೆ ಒಮೃತದೇಹಗಳು ರವಾನೆಯಾದಾಗ ಸರದಿಯಲ್ಲಿ ಕಾಯಬೇಕಾಗುತ್ತದೆ. ಹೀಗಾಗಿ ಇದನ್ನು ತಪ್ಪಿಸಲು ಈಗ ಕೇಂದ್ರೀಕೃತ ವ್ಯವಸ್ಥೆ ಜಾರಿ ಮಾಡಲಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿಯಿಂದಲೇ ಮೃತದೇಹ ಸಾಗಿಸುವ ವಾಹನ ಹಾಗೂ ಮೃತದೇಹ ಸುಡುವ ಸಮಯವನ್ನು ಮೊದಲೇ ನಿಗದಿ ಮಾಡಿ ಮೃತದೇಹ ರವಾನಿಸಲಾಗುತ್ತದೆ.
ಆದರೆ ಒತ್ತಡ ಹೆಚ್ಚಿರುವ ಕಾರಣ ಸದ್ಯ ಇರುವ ಮೂರು ಹೆಲ್ಪ್ ಲೈನ್​ಗಳು ಸಾಲುತ್ತಿಲ್ಲ. ಬೆಳಗ್ಗೆ ಹತ್ತು ಗಂಟೆಗೆ ಬುಕ್ಕಿಂಗ್ ಮಾಡಿದರೆ ಮಧ್ಯಾಹ್ನ ಎರಡು ಗಂಟೆಯ ಸ್ಲಾಟ್ ಸಿಗುತ್ತಿದೆ, ಆದರೆ ಮೃತದೇಹಗಳು ಹೆಚ್ಚಿರುವುದರಿಂದ ಏನೂ ಮಾಡಲಾರದ ಸ್ಥಿತಿ ಎಂದು ಬಿಬಿಎಂಪಿ ಹೇಳುತ್ತದೆ.
ಹೇಗೆ ಬುಕ್‌ ಮಾಡುವುದು..?
ಮೃತ ಸೋಂಕಿತರ ಆಸ್ಪತ್ರೆ ಪ್ರಕ್ರಿಯೆ ಮುಗಿದು, ಡೆತ್ ಸರ್ಟಿಫಿಕೇಟ್ ಸಿಕ್ಕ ಬಳಿಕ ಕುಟುಂಬಸ್ಥರೇ ಪಾಲಿಕೆ ಸಹಾಯವಾಣಿಗೆ ಕರೆ ಮಾಡಿ ಮೃತಪಟ್ಟವರ ವಿವರ ನೀಡಬೇಕು. ನಂತರ ಯಾವ ಚಿತಾಗಾರದಲ್ಲಿ ಯಾವ ಸಮಯದಲ್ಲಿ ಮೃತ ದೇಹಗಳು ಕಡಿಮೆ ಇರುತ್ತವೆಯೋ ಆ ಚಿತಾಗಾರಕ್ಕೆ ಇಂತಿಷ್ಟು ಹೊತ್ತಿಗೆ ಹೋಗಿ ಎಂದು ಸಹಾಯವಾಣಿಯವರೇ ಸಮಯ ನೀಡಿ ವಾಹನ ಕಳುಹಿಸಿಕೊಡಲಾಗುತ್ತದೆ.
080-22493202, 080-22493203 ಮತ್ತು ವಾಟ್ಸ್‌ ಅಪ್ ಸಂಖ್ಯೆ 8792162736 ಗೆ ಸಂಪರ್ಕಿಸಿದರೆ ಬಿಬಿಎಂಪಿಯ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರು ಮೃತಪಟ್ಟರೆ ಆಸ್ಪತ್ರೆ ಅಥವಾ ಮನೆಯಿಂದ ಮೃತ ದೇಹಗಳನ್ನು ವಿದ್ಯುತ್ ಚಿತಾಗಾರಗಳಿಗೆ ಉಚಿತವಾಗಿ ಸಾಗಿಸಲಾಗುತ್ತದೆ. ಈ ಸಹಾಯವಾಣಿ ಸಂಖ್ಯೆಗಳು ನಿತ್ಯ ಬೆಳಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರಗೆ ಕಾರ್ಯನಿರ್ವಹಿಸುತ್ತವೆ.
12 ಚಿತಾಗಾರಗಳ ಮೇಲ್ವಿಚಾರಣೆಗೂ ಎರಡು ಶಿಫ್ಟ್‌ನಲ್ಲಿ ಕೆಲಸ ಮಾಡಲು 24 ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ