ಕೊರೊನಾ ಸೋಂಕಿನ ಲಕ್ಷಣಗಳಿದ್ದರೂ ಕೆಲವರಿಗೆ ಆರ್‌ಟಿ ಪಿಸಿಆರ್‌ ವರದಿ ನೆಗೆಟಿವ್..ಕಾರಣವೇನು.?

posted in: ರಾಜ್ಯ | 0

ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರೋಗಿಗಳಿಗೆ ಚಿಕಿತ್ಸೆ ನೀಡುವುದು ಸಹ ವೈದ್ಯರಿಗೆ ಈಗ ದೊಡ್ಡ ಸವಾಲಾಗಿದೆ. ಈ ನಡುವೆ ಕೆಲವರಿಗೆ ಆರ್‌ಟಿ ಪಿಸಿಆರ್‌ ವರದಿ ನೆಗೆಟಿವ್‌ ಇದ್ದರೂ ಕೊರೊನಾದ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.
ಕೆಲವರಿಗೆ ವರದಿಯಲ್ಲಿ ನೆಗೆಟಿವ್‌ ಆದರೆ ಕೊರೊನಾ ಲಕ್ಷಣಗಳಿವೆ ಎಂದು ವರದಿಯಾಗಿದೆ. ಕೊರೊನಾ ಎರಡನೇ ಅಲೆ ಭೀಕರತೆಯ ಮಧ್ಯೆ ಕೊರೊನಾ ವರದಿಯಲ್ಲಿ ವಿಳಂಬ ಹಾಗೂ ಸುಳ್ಳು ನೆಗೆಟಿವ್​ ವರದಿಗಳು ಸಹ ಸಮಸ್ಯೆಗಳಿಗೆ ಕಾರಣವಾಗಿದೆ ಎಂಬುದು ಮತ್ತೊಂದು ಸಮಸ್ಯೆ.
ಆದರೆ ಕೆಲವರಲ್ಲಿ ಆರ್‌ಟಿ ಪಿಸಿಆರ್‌ ವರದಿ ನೆಗೆಟಿವ್‌ ಬಂದರೂ ಕೊರೊನಾ ಲಕ್ಷಣಗಳಿರುವ ಬಗ್ಗೆ ವೈದ್ಯರು ಕಾರಣ ನೀಡುತ್ತಾರೆ.
ಕೋವಿಡ್‌ ಆರ್​ಟಿ ಪಿಸಿಆರ್​ ಟೆಸ್ಟ್​​ಗಳು ಸೂಕ್ಷ್ಮ ರೀತಿಯಲ್ಲಿ ವೈರಸ್​ ಸೋಂಕನ್ನು ಪತ್ತೆ ಮಾಡಲು ನೆರವಾಗುತ್ತವೆ. ಆದರೆ ಯಾವುದೇ ಪರೀಕ್ಷಾ ವಿಧಾನಗಳು 100 ಪ್ರತಿಶತ ನಿಖರ ಎಂದು ಹೇಳಲು ಆಗುವುದಿಲ್ಲ. ಹೀಗಾಗಿಯೇ ಕೆಲವರಿಗೆ ಕೊರೊನಾ ಲಕ್ಷಣಗಳಿದ್ದರೂ ವರದಿ ಮಾತ್ರ ಒಮ್ಮೊಮ್ಮೆ ನೆಗೆಟಿವ್‌ ಬಂದುಬಿಡುತ್ತದೆ ಎಂದು ಹೇಳುತ್ತಾರೆ. ಎಷ್ಟೋ ಜನರಿಗೆ ವರದಿ ನೆಗೆಟಿವ್‌ ಬಂದಿದ್ದರೂ ಅವರು ಕೊರೊನಾದಿಂದಾಗಿ ಶ್ವಾಸಕೋಶದ ಸೋಂಕಿಗೆ ಒಳಗಾಗಿರುವುದು ಸ್ಕ್ಯಾನ್‌ ಮಾಡಿದಾಗ ಗೊತ್ತಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಸಂಶೋಧಕರು ಹೇಳುವ ಪ್ರಕಾರ ಆರ್​ಟಿ – ಪಿಸಿಆರ್​ ಟೆಸ್ಟ್​ ವೈರಸ್​ ಪತ್ತೆ ಮಾಡುವಲ್ಲಿ ಸಹಕಾರಿ. ಆದರೆ ಅನೇಕ ಕಾರಣಗಳಿಂದಾಗಿ ಈ ಆರ್​ಟಿ ಪಿಸಿಆರ್​ ಟೆಸ್ಟ್​​ನ ನಿಖರತೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ ಎಂದು ಅಂದಾಜಿಸಲಾಗಿದೆ.
ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ಹೀಗೆ ಜನರಿಗೆ ಲಕ್ಷಣಗಳಿದ್ದರೂ ನೆಗೆಟಿವ್‌ ವರದಿ ಬರುತ್ತಿರುವುದು ವರದಿಯಾಗಿದ್ದರಿಂದ ಕೊರೊನಾ ಸೋಂಕು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.ಕೆಲವೊಮ್ಮೆ ತಪ್ಪು ವರದಿಗಳಿಂದಾಗಿ ಸೋಂಕಿತನ ಚಿಕಿತ್ಸೆಯಲ್ಲಿ ತಡವಾಗಿ ಸೌಮ್ಯ ಲಕ್ಷಣಗಳನ್ನ ಹೊಂದಿರುವ ವ್ಯಕ್ತಿ ಮುಂದೆ ಗಂಭೀರ ಲಕ್ಷಣಗಳಿಂದ ಬಳಲುವ ಸಾಧ್ಯತೆ ಇದೆ ಎಂದು ಅವರು ಹೇಳುತ್ತಾರೆ.
ದೇಹದಲ್ಲಿ ಕಡಿಮೆ ಪ್ರಮಾಣದಲ್ಲಿ ವೈರಾಣುಗಳು ಇದ್ದಲ್ಲಿ ಪರೀಕ್ಷಾ ವರದಿ ನೆಗೆಟಿವ್​ ಬರುವ ಸಾಧ್ಯತೆ ಇದೆ. ಗುರುತಿಸಲು ಆಗದೇ ಇರುವಷ್ಟು ಕಡಿಮೆ ಪ್ರಮಾಣದಲ್ಲಿ ವೈರಸ್ ದೇಹದಲ್ಲಿ ಇದ್ದರೆ ನೆಗೆಟಿವ್​ ರಿಪೋರ್ಟ್ ಬರಬಹುದು. ಆದರೆ ವರದಿ ಬರುವ ಸಮಯದಲ್ಲಿ ಅದರ ಸಂಖ್ಯೆ ಹೆಚ್ಚಳವಾಗಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಹಾಗೂ ಸಂಶೋಧಕರು ಅಭಿಪ್ರಾಯಪಡುತ್ತಾರೆ.
ಜೊತೆಗೆ ಕೊರೊನಾ ಎರಡನೆ ಅಲೆಯಲ್ಲಿ ಪ್ರಕರಣಗಳ ಉಲ್ಬಣದಿಂದ ಪ್ರಯೋಗಾಲಯದ ಸಿಬ್ಬಂದಿಗೆ ಮೇಲೆ ಹೆಚ್ಚುತ್ತಿರುವ ಒತ್ತಡ ಹಾಗೂ ಹೆಚ್ಚೆಚ್ಚು ಪರೀಕ್ಷೆಗಳು ಈ ರೀತಿ ತಪ್ಪು ವರದಿ ಬರಲು ಕಾರಣವಾಗಿದೆ. ಆರ್​ಟಿ – ಪಿಸಿಆರ್​ ಟೆಸ್ಟ್​ಗಳಲ್ಲಿ ಯಾವ ಸಮಯದಲ್ಲಿ ಗಂಟಲುದ್ರವ ಸಂಗ್ರಹ ಮಾಡಿದರು ಎಂಬುದೂ ಮುಖ್ಯವಾಗುತ್ತದೆ. ಅಲ್ಲದೆ, ಸರಿಯಾಗಿ ಸ್ವ್ಯಾಬ್​​ ಸಂಗ್ರಹ ಮಾಡದ ಸಂದರ್ಭದಲ್ಲಿ ಹೋದಲ್ಲಿ ವೈರಾಣುಗಳನ್ನ ಪತ್ತೆ ಕಷ್ಟಸಾಧ್ಯವಾಗಿ ಬಿಡುತ್ತದೆ.
ಒಂದು ವೇಳೆ ಸೋಂಕಿನ ಲಕ್ಷಣಗಳಿದ್ದರೆ ವರದಿಯಲ್ಲಿ ನೆಗೆಟಿವ್​ ಎಂದು ತೋರಿಸುತ್ತಿದ್ದರೆ ಮತ್ತೊಮ್ಮೆ ಪರೀಕ್ಷಿಗೆ ಒಳಗಾಗಬಹುದು ಅಥವಾ ವೈದ್ಯರನ್ನು ಸಂಪರ್ಕಿಸಬಹುದು. ಆ ಸಂದರ್ಭದಲ್ಲಿ ಮತ್ತೊಂದು ವರದಿ ಫಲಿತಾಂಶ ಬರುವವರೆಗೂ ಪ್ರತ್ಯೇಕತೆಯಲ್ಲಿ ಇರಬೇಕು.
ಕೊರೊನಾ ಸೋಂಕಿಗೆ ಉಲ್ಬಣಕ್ಕೆ ಅವಕಾಶ ನೀಡದೆ ಆರಂಭದಲ್ಲಿಯೇ ಚಿಕಿತ್ಸೆ ಪಡೆಯಬೇಕಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ