ವರ್ಗಾವಣೆ ಅಪೇಕ್ಷಿತ ಶಿಕ್ಷಕರಿಗೆ ಸಿಹಿ ಸುದ್ದಿ.. ವರ್ಗಾವಣೆ ಪ್ರಕ್ರಿಯೆ ಶೀಘ್ರವೇ‌ ಪ್ರಾರಂಭ ಎಂದ ಶಿಕ್ಷಣ ಸಚಿವರು

ಬೆಂಗಳೂರು: ಕೊರೊನಾ ಸಮಯದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಗೊಂದಲಕ್ಕೆ ಈಗ ತೆರೆಬಿದ್ದಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶುಕುಮಾರ್ ಈ ಕುರಿತು ಪ್ರಕಟಣೆ ನೀಡಿದ್ದು, ಶೀಘ್ರವೇ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ‌ ರಾಜ್ಯ ಸಿವಿಲ್ ಸೇವೆಗಳು-ಶಿಕ್ಷಕರ‌ ವರ್ಗಾವಣೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಸಚಿವ ಸಂಪುಟದ ನಿರ್ಣಯವನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ, ಅಧ್ಯಾದೇಶವನ್ನು ಅಧಿಕೃತ ರಾಜ್ಯಪತ್ರದ ಮೂಲಕ ಪ್ರಕಟಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವರ್ಗಾವಣೆ ಕೋರಿ ಸಲ್ಲಿಕೆಯಾಗಿರುವ ಸುಮಾರು ಎಪ್ಪತ್ತೆರಡು ಸಾವಿರ ಅರ್ಜಿಗಳನ್ನು ಶಿಕ್ಷಕ ಮಿತ್ರ ಆಪ್ ಮೂಲಕವೇ ನಿರ್ವಹಿಸಿ. ಕೌನ್ಸೆಲಿಂಗ್ ಪ್ರಕ್ರಿಯೆ ಸಂಪೂರ್ಣ ಅನ್ ಲೈನ್ ಮೂಲಕವೇ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಶಿಕ್ಷಕರು ಭೌತಿಕವಾಗಿ‌ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ‌ ಪಾಲ್ಗೊಳ್ಳಬಾರದು, ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿರಬೇಕು, ಯಾವುದೇ ದೂರು ದುಮ್ಮಾನಗಳನ್ನು‌ ಸಮರ್ಪಕವಾಗಿ ನಿರ್ವಹಿಸುವ ಸದೃಢ ವ್ಯವಸ್ಥೆ ಜಾರಿಯಲ್ಲಿಡಬೇಕು. ಇಡೀ ಪ್ರಕ್ರಿಯೆ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ
ಕಡ್ಡಾಯ-ಹೆಚ್ಚುವರಿ ವರ್ಗಾವಣೆಯಿಂದ ಸುಮಾರು‌ ಮೂರೂವರೆ ಸಾವಿರ ಶಿಕ್ಷಕರು ತೀವ್ರ ಸಂಕಷ್ಟಕ್ಕೊಳಗಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಅವರಿಗೆ ಅವಕಾಶ ಕಲ್ಪಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ನ್ಯಾಯಾಲಯದ ಆಜ್ಞೆ ಅನುಸರಿಸುವ, ಸಂಕಷ್ಟದಲ್ಲಿರುವ ಶಿಕ್ಷಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅತಿ ಶೀಘ್ರ ಅವಧಿಯಲ್ಲಿ ಸುಗ್ರೀವಾಜ್ಞೆ ಹೊರತರಲು ಕ್ರಮ ಕೈಗೊಳ್ಳಲಾಗಿದ್ದು, ಶಿಕ್ಷಕ‌ ಸಮುದಾಯ ವರ್ಗಾವಣೆ ಪ್ರಕ್ರಿಯೆಯನ್ನು ಅಡೆತಡೆಗಳಿಲ್ಲದೆ‌ ಪೂರ್ಣಗೊಳಿಸಲು ಎಲ್ಲ ಸಹಕಾರ‌ ನೀಡಬೇಕು ಎಂದು ಶಿಕ್ಷಣ ಸಚಿವರು ಮನವಿ ಮಾಡಿದ್ದಾರೆ.
ಕರ್ನಾಟಕ‌ ರಾಜ್ಯ ಸಿವಿಲ್ ಸೇವೆಗಳು-ಶಿಕ್ಷಕರ‌ ವರ್ಗಾವಣೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಸಚಿವ ಸಂಪುಟದ ನಿರ್ಣಯವನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ. ಹೀಗಾಗಿ ಅಧ್ಯಾದೇಶವನ್ನು ಅಧಿಕೃತ ರಾಜ್ಯಪತ್ರದ ಮೂಲಕ ಪ್ರಕಟಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. 2019-20ನೇ ಸಾಲಿನಲ್ಲಿ ಕಡ್ಡಾಯ-ಹೆಚ್ಚುವರಿ ವರ್ಗಾವಣೆಗೊಳಗಾದ ಶಿಕ್ಷಕರಿಗೆ ಒಂದು ಬಾರಿ ವಿಶೇಷ ಅವಕಾಶ ಜಾರಿಯಲ್ಲಿಡಬೇಕು. ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕು ಅಥವಾ ಜಿಲ್ಲೆಯಲ್ಲಿ ಲಭ್ಯವಿರುವ ಹುದ್ದೆಗಳಿಗೆ ಮೊದಲ ಆದ್ಯತೆಯ ವರ್ಗಾವಣೆ ಅವಕಾಶವನ್ನು ನೀಡಲು ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement