ಕರ್ನಾಟಕದಲ್ಲಿ ಆಮ್ಲಜನಕ ಬೆಡ್‌ 20,000 ಹೆಚ್ಚಳ, ಕೋವಿಡ್ ಪರೀಕ್ಷೆ ವರದಿ ತಡವಾದ್ರೆ ಲ್ಯಾಬ್‌ಗಳಿಗೆ ದಂಡ

posted in: ರಾಜ್ಯ | 0

ಬೆಂಗಳೂರು: ಸುಪ್ರೀಂ ಕೋರ್ಟ್ 1,200 ಮೆ.ಟನ್‌ ಆಮ್ಲಜನಕವನ್ನು ರಾಜ್ಯಕ್ಕೆ ಹಂಚಿಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದ ಬೆನ್ನಲ್ಲೇ ಸರ್ಕಾರ ಆಮ್ಲಜನಕ ಬೆಡ್‌ಗಳ ಪ್ರಮಾಣವನ್ನು 20,000 ಹೆಚ್ಚಳ ಮಾಡಲು ಮುಂದಾಗಿದೆ ಎಂದು ಕೋವಿಡ್‌ ಕಾರ್ಯಪಡೆ ಅಧ್ಯಕ್ಷ ಉಪಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದ್ದಾರೆ.
ವಿಧಾನಸೌಧದಲ್ಲಿ ಶನಿವಾರ ಬಿಜೆಪಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 20,000 ಆಮ್ಲಜನಕ ಬೆಡ್‌ಗಳ ಪೈಕಿ ತಕ್ಷಣವೇ ತುರ್ತಾಗಿ 10,000 ಬೆಡ್‌ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಕೋವಿಡ್‌ ಬರುವ ಮುನ್ನ ರಾಜ್ಯದಲ್ಲಿ ದಿನಕ್ಕೆ 100 ಮೆಟ್ರಿಕ್‌ ಟನ್‌ ಆಮ್ಲಜನಕ ಮಾತ್ರ ಖರ್ಚಾಗುತ್ತಿತ್ತು. ಆದರೆ, ಈಗ ನಿತ್ಯವೂ 950 ಮೆಟ್ರಿಕ್‌ ಟನ್‌ ಬೇಕಾಗುತ್ತಿದೆ. ಸದ್ಯಕ್ಕಿರುವ ಆಮ್ಲಜಕ ಬೆಡ್‌ಗಳಿಗೆ ಸಾಕಾಗುವಷ್ಟು ಆಮ್ಲಜನಕ ನಮ್ಮಲ್ಲಿದೆ. ಆದರೆ, ಸೋಂಕಿತರು ಹೆಚ್ಚುತ್ತಿರುವುದರಿಂದ ಅನಿವಾರ್ಯವಾಗಿ ಬೆಡ್‌ಗಳನ್ನೂ ಹೆಚ್ಚಿಸಬೇಕಾಗಿರುವುದರಿಂದ ಹೆಚ್ಚುವರಿ ಆಮ್ಲಜನಕವೂ ಬೇಕಿದೆ. ಆ ಕೊರತೆ ನ್ಯಾಯಾಲಯದ ಆದೇಶದಿಂದ ನೀಗಲಿದೆ ಎಂದು ಹೇಳಿದರು.
ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲೂ ಆಮ್ಲಜನಕ ಬೆಡ್‌ ಹಾಕಲು ನಿರ್ಧರಿಸಲಾಗಿದೆ. ಅಲ್ಲಿಗೆ ಅಗತ್ಯ ನುರಿತ ಸಿಬ್ಬಂದಿ ನಿಯೋಜಿಸಲಾಗುತ್ತದೆ, ಸದ್ಯಕ್ಕೆ ಈಗ ರಾಜ್ಯದಲ್ಲಿ 70,000 ಬೆಡ್‌ಗಳನ್ನು ಕೋವಿಡ್‌ಗೆ ಮೀಸಲು ಇಡಲಾಗಿದ್ದು, ಈ ಪೈಕಿ ಸರಕಾರದಿಂದ 35,000 ಹಾಗೂ ಖಾಸಗಿ ಆಸ್ಪತ್ರೆಗಳ ವತಿಯಿಂದ 35,000 ಬೆಡ್‌ಗಳಿವೆ. ಈ ಒಟ್ಟು ಬೆಡ್‌ಗಳ ಪೈಕಿ 50,000 ಆಮ್ಲಜನಕ ಬೆಡ್‌ಗಳಿವೆ ಎಂದರು.
ಇದೇ ವೇಳೆ ಆಕ್ಸಿಜನ್‌ ಬೆಡ್‌ಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಶೇ.30ರಿಂದ 40ರಷ್ಟು ಗಂಭೀರವಲ್ಲದ ಸೋಂಕಿತರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಆಮ್ಲಜನಕ ಬೆಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರನ್ನು ಕೂಡಲೇ ಸ್ಟೆಪ್‌ಡೌನ್‌ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲು ಸರಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ರೆಮ್ಡೆಸಿವಿರ್‌ ಸಮಸ್ಯೆ ಇಲ್ಲ:
ರೆಮ್ಡೆಸಿವಿರ್‌ ಕೊರತೆ ಈಗಿಲ್ಲ. ಮೇ 9ರ ವರೆಗೂ 30,900 ಡೋಸ್‌ ಹಂಚಿಕೆಯಾಗಿತ್ತು. ಇನ್ನೂ 70,000 ಡೋಸ್‌ ಬರುವುದು ಬಾಕಿ ಇದೆ. ಇವತ್ತು-ನಾಳೆಗೆ ಕೊರತೆ ಇಲ್ಲ. ಎಲ್ಲ ಜಿಲ್ಲೆಗಳಿಗೂ ಹಂಚಿಕೆ ಮಾಡಲಾಗಿದೆ. 10ರ ನಂತರ ಒಂದು ವಾರ ಕಾಲ 2,60,000 ಡೋಸ್ ರಾಜ್ಯಕ್ಕೆ ಹಂಚಿಕೆಯಾಗಿದ್ದು, ಬರುವುದಿದೆ. ಈ ಲೆಕ್ಕದ ಪ್ರಕಾರ ಪ್ರತಿದಿನ ರಾಜ್ಯಕ್ಕೆ 37,000 ಡೋಸ್ ಲಭ್ಯವಾಗುತ್ತಿದೆ. ಹೀಗಾಗಿ ಕೊರತೆ ಪ್ರಶ್ನೆ ಇಲ್ಲ.
ಪ್ರತಿದಿನ ನಮಗೆ ಪೂರೈಕೆ ಮಾಡಬೇಕಾದ ರೆಮ್ಡೆಸಿವಿರ್‌ ಕೋಟಾ ಸಕಾಲಕ್ಕೆ ಪೂರೈಕೆ ಮಾಡುವಂತೆ ಎಲ್ಲ ತಯಾರಿಕಾ ಕಂಪನಿಗಳಿಗೆ ಸರಕಾರ ಇವತ್ತೇ ನೊಟೀಸ್‌ ಕೂಡ ಜಾರಿ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಕೋವಿಡ್‌ ಪರೀಕ್ಷೆ ವರದಿ ತಡವಾದರೆ ಲ್ಯಾಬ್‌ಗೆ ದಂಡ:
ಇನ್ಮುಂದೆ 24 ಗಂಟೆ ಒಳಗಾಗಿ ಕೋವಿಡ್‌ ಪರೀಕ್ಷೆ ವರದಿ ನೀಡಲಾಗುವುದು. ಯಾವ ಲ್ಯಾಬೇ ಆಗಿರಲಿ. ಅದು ಖಾಸಗಿಯಾಗಿರಲಿ ಅಥವಾ ಸರ್ಕಾರದ್ದೇ ಆಗಿರಲಿ ನಿಗದಿ ಮಾಡಿದ ಸಮಯದೊಳಗೆ ಫಲಿತಾಂಶ ನೀಡದಿದ್ದರೆ ಪ್ರತಿ ಟೆಸ್ಟಿಗೆ 100ರಿಂದ 150 ರೂಪಾಯಿ ದಂಡ ವಿಧಿಸಲಾಗುವುದು ಎಂದು ಡಿಸಿಎಂ ಎಚ್ಚರಿಕೆ ನೀಡಿದರು.
ಇಷ್ಟು ದಿನ ಸೋಂಕಿತರು ತಡವಾಗಿ ಪರೀಕ್ಷೆಗೆ ಬರುತ್ತಿದ್ದರು, ತಡವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಪ್ರಾಣ ಹಾನಿ ಹೆಚ್ಚಾಗುತ್ತಿತ್ತು. ಮುಂದೆ ಹೀಗೆ ಆಗಬಾರದು ಎಂದು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಲ್ಯಾಬ್‌ ಟೆಸ್ಟ್‌ ವರದಿ ಬೇಗ ಸಿಗುವುದು ಬಹಳ ಮುಖ್ಯ.
ಆರ್‌ಟಿಪಿಸಿಆರ್‌ ಪರೀಕ್ಷೆಗೆ ವೇಗ ಕೊಡಲಾಗಿದೆ. ಕೋವಿಡ್‌ ಬಂದಾಗ ಸರ್ಕಾರಿ ವಲಯದಲ್ಲಿ ಕೇವಲ ಒಂದೇ ಲ್ಯಾಬ್‌ ಇತ್ತು. ಇವತ್ತು 91 ಲ್ಯಾಬ್‌ಗಳಿವೆ. ಖಾಸಗಿ ವಲಯದಲ್ಲಿ 150 ಲ್ಯಾಬ್‌ಗಳಿವೆ. ದಿನಕ್ಕೆ ಸರಕಾರದ ವತಿಯಿಂದ 10,500 ಟೆಸ್ಟ್‌ಗಳನ್ನು ಮಾಡಬಹುದು. ಖಾಸಗಿ ಲ್ಯಾಬ್‌ಗಳಲ್ಲಿ 70,000 ಜನರಿಗೆ ಟೆಸ್ಟ್‌ ಆಗುತ್ತಿದೆ. ಅಂಕಿ-ಅಂಶಗಳ ಪ್ರಕಾರ 93% ಆರ್‌ಟಿಪಿಸಿಆರ್‌ ಟೆಸ್ಟ್‌ ಆಗುತ್ತಿದ್ದರೆ, 7% ಮಾತ್ರ ರಾಟ್‌ ಟೆಸ್ಟ್‌ ಆಗುತ್ತಿದೆ. ಈಗ ರಾಟ್‌ ಟೆಸ್ಟ್‌ ಅನ್ನು ಎಷ್ಟು ಬೇಕಾದರೂ ಮಾಡಲು ಐಸಿಎಂಆರ್‌ ಒಪ್ಪಿಗೆ ಕೊಟ್ಟಿದ್ದು, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ರಾಟ್‌ ಕಿಟ್‌ಗಳನ್ನು ಒದಗಿಸಿ ಪರೀಕ್ಷೆಗಳನ್ನು ಹೆಚ್ಚಿಸಲಾಗುವುದು ಎಂದರು.
ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಬಳಕೆ ವಸ್ತುಗಳ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಇನ್ನೆರಡು ದಿನದಲ್ಲಿ ಅಷ್ಟೂ ಪಿಎಚ್‌ಸಿಗಳಿಗೆ ಇನ್ನೂ ಹೆಚ್ಚು ಔಷಧಿ ಮತ್ತು ಸರಂಜಾಮುಗಳನ್ನು ಒದಗಿಸಲಾಗುವುದು, ಎಲ್ಲ ವೈದ್ಯರು ಮತ್ತು ಆಸ್ಪತ್ರೆಗಳಿಗೆ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವ ಬಗ್ಗೆ ಬಗ್ಗೆ ಸ್ಪಷ್ಟ ಮಾರ್ಗಸೂಚಿ ನೀಡಲಾಗಿದೆ. ಯಾವ ಕಾರಣಕ್ಕೂ ಅದನ್ನು ಮೀರುವಂತಿಲ್ಲ ಎಂದು ಸೂಚಿಸಿದರು.
ಬಿಜೆಪಿ ಕಾರ್ಯಕರ್ತರು ಕೋವಿಡ್‌ ಸೋಂಕಿರಿಗೆ ನೆರವಾಗುತ್ತಿದ್ದಾರೆಂಬ ಮಾಹಿತಿ ಹಂಚಿಕೊಂಡ ಡಿಸಿಎಂ, ಬೂತ್‌ ಮಟ್ಟದಲ್ಲಿ ಕಾರ್ಯಕರ್ತರು ಸೋಂಕಿತರಿಗೆ ಅಗತ್ಯವಾದ ಎಲ್ಲ ನೆರವು ಕೊಡುತ್ತಿದ್ದಾರೆ. ಆಹಾರ ಧಾನ್ಯ, ಔಷಧಿ, ವೈದ್ಯಕೀಯ ಸಂಪರ್ಕ, ಮಾಸ್ಕ್‌ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. 250 ಕೇಂದ್ರಗಳ ಮೂಲಕ ರಾಜ್ಯಾದ್ಯಂತ ಕಾರ್ಯಕರ್ತರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಪಕ್ಷ ಮಾಡುತ್ತಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ವಿಧಾನಪರಿಷತ್‌ ಸದಸ್ಯ ರವಿಕುಮಾರ್‌, ಪಕ್ಷದ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಬಿಜೆಪಿ ಮಾಧ್ಯಮ ಸಂಚಾಲಕ ಪ್ರಶಾಂತ್‌ ಇದ್ದರು.

advertisement

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಇದೀಗ ಗದಗದಲ್ಲಿ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಎಸ್ಕಾಂಗಳ ಖಾಸಗೀಕರಣ ಇಲ್ಲ, ಗ್ರಾಮೀಣ ಪ್ರದೇಶಗಳಿಗೆ ನಿರಂತರ 7 ತಾಸು ವಿದ್ಯುತ್ ಸರಬರಾಜು: ಸಿಎಂ ಬೊಮ್ಮಾಯಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement