೧೧೧ ಕಾದಂಬರಿ ರಚನೆಕಾರ ಕರ್ನಾಟಕದ ಕಾದಂಬರಿ ಸಾರ್ವಭೌಮ ಅನಕೃ

posted in: ಅಂಕಣಗಳು | 0

(ಕನಾ೯ಟಕ ರಾಷ್ಟ್ರ ವೀರಪುಲಿಕೇಶಿ ಕನ್ನಡ ಬಳಗದ ವತಿಯಿಂದ,ಗೋಕುಲ ರಸ್ತೆಯ, ಶ್ರೀ  ವೆಂಕಟೇಶ್ವರ ನಗರದ, ಲಕ್ಷ್ಮೀಶಕವಿ ಮಾರ್ಗದಲ್ಲಿರುವ “ಸವ೯ಜ್ಞ ಭವನದಲ್ಲಿ”, ಕಾದಂಬರಿ  ಸಾರ್ವಭೌಮರೆಂದೇ ಖ್ಯಾತರಾದ   ಅನಕೃ (ಅ.ನ.ಕೃಷ್ಣರಾವ್‌)ಅವರ  ೧೧೩ ನೇ ವರ್ಷದ ಜನ್ಮದಿನಾಚರಣೆ ಆಚರಿಸಲಾಯಿತು. ಈ ನಿಮಿತ್ತ ಅನಕೃ ಬಗ್ಗೆ  ಬಳಗದ ಅಧ್ಯಕ್ಷ -ವೆಂಕಟೇಶ ಮರೇಗುದ್ದಿ ಲೇಖನ ಬರೆದಿದ್ದಾರೆ)    

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಅನಕೃ ಅವರು ಕನ್ನಡದ ಅಪ್ರತಿಮ ಹೋರಾಟಗಾರರು. ಮತ್ತು  ೧೧೧ ಕಾದಂಬರಿ, ೨೪ ನಾಟಕ, ೧೦ ಕಥಾಸಂಕಲನ, ೩೨ ವಿಮರ್ಶೆ, ಪ್ರಬಂಧ, ವಿಚಾರ, ೧೧ ಸಂಪಾದಿತ ಕೃತಿಗಳು ಹೀಗೆ ಇನ್ನೂ ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯ ಸಾವ೯ಭೌಮರೇ ಆಗಿದ್ದಾರೆ.
ಕನ್ನಡವನ್ನೇ ಉಸಿರಾಗಿಸಿಕೊಂಡಿದ್ದ ಅವರು, ಕನ್ನಡ ಚಳವಳಿಗೆ ಹೊಸ ಚೈತನ್ಯ ತಂದುಕೊಟ್ಟವರು.ನನಗೆ ಮುಂದಿನ ಜನ್ಮವಿದ್ದುದಾದರೆ, ಕನಾ೯ಟಕದಲ್ಲೇ ಜನಿಸಬೇಕು ಎಂದು ಹೇಳುತ್ತಿದ್ದ, ಅನಕೃ, ” ಕನ್ನಡದ ಮೂಲಕವೇ ಭಾರತದ ಸೇವೆಯಾಗಬೇಕು. ಭಾರತ ರಾಷ್ಟ್ರವಾಗಿ ಉಳಿಯಬೇಕಾದರೆ, ಕನಾ೯ಟಕ ಪ್ರಾಂತವಾಗಿ ಉಳಿಯಬೇಕು. ಕನಾ೯ಟಕ ಪ್ರಾಂತವಾಗಿ ಉಳಿಯಬೇಕಾದರೆ, ಕನ್ನಡ ಉಳಿಯಬೇಕು. ಕನ್ನಡ ಉಳಿಯಬೇಕಾದರೆ, ಕನ್ನಡತನ ಕನ್ನಡಿಗರಲ್ಲಿ ಜಾಗೃತವಾಗಬೇಕು. ಕನ್ನಡಿಗರಲ್ಲಿ ಕನ್ನಡತನ ಜಾಗೃತವಾಗಬೇಕಾದರೆ, ಕನ್ನಡ ಭೈರವ ತನ್ನ ಆಳವಾದ ನಿದ್ದೆಯಿಂದ ಮೈ ಕೊಡವಿಕೊಂಡು ಎದ್ದುನಿಲ್ಲಬೇಕು. ಅದಕ್ಕಾಗಿಯೇ ಈ ಕನ್ನಡ ಚಳವಳಿ ಎಂದು, ಕನ್ನಡ ವಿರೋಧಿಗಳಿಗೆ ದಿಟ್ಟತನದಿಂದ ಉತ್ತರಿಸುತ್ತಿದ್ದರು.
ಅವರು ಮಹಾನ್ ಸಾಹಿತಿಗಳಾಗಿದ್ದರೂ ರಸ್ತೆಗಿಳಿದು ಹೋರಾಟ ಮಾಡುತ್ತಿದ್ದರು. ಕನ್ನಡಕ್ಕೆ ಅನ್ಯಾಯವಾಗುತ್ತಿದೆ ಎಂದಾಗ, ಪ್ರತಿಭಟಿಸದೆ  ಇರುತ್ತಿರಲಿಲ್ಲ.  ಬೆಂಗಳೂರಿನಲ್ಲಿ ಒಮ್ಮೆ ಎಂ ಎಸ್ ಸುಬ್ಬಲಕ್ಷ್ಮಿ ಸಂಗೀತ ಕಚೇರಿ ನಡೆದಿರುತ್ತದೆ, ಅನಕೃ ಅವರು, ಆಮಂತ್ರಿತರಾಗಿ  ಮುಂದೆಯೇ ಕುಳಿತಿರುತ್ತಾರೆ, ಕಚೇರಿ ಪ್ರಾರಂಭವಾಗಿ ಸುಮಾರುಹೊತ್ತು ಆದಮೇಲೆ ಅನಕೃ ರವರು, ಆಯೋಜಕರಿಗೆ ಕನ್ನಡ ದಾಸರ ಪದ ಹಾಡಲು ತಿಳಿಸಿರಿ ಎಂದು ಹೇಳಿದರು. ಹಲವು ಬಾರಿ ಹೇಳಿದರೂ ಪ್ರಯೋಜನ ವಾಗಲಿಲ್ಲ, ಆಗ ತಾವೇ ಎದ್ದು ನಿಂತು, ಇಲ್ಲಿಯ ವರೆಗೂ , ತೆಲುಗು ತಮಿಳು ಕೀರ್ತನೆ ಹಾಡಿದಿರಿ, ಕನಾ೯ಟಕ ಸಂಗೀತ ಹುಟ್ಟು ಹಾಕಿದವರೇ ಪುರಂದರ ದಾಸರು, ಅಂತೆಯೇ ಅವರನ್ನು ಕನಾ೯ಟಕ ಸಂಗೀತ ಪಿತಾಮಹ ಎಂದು ಕರೆಯುತ್ತಾರೆ. ದಾಸರ ಕೀರ್ತನೆಗಳನ್ನು ಹಾಡಲೇ ಬೇಕು ಎಂದು ಹೇಳುತ್ತಾರೆ. ಆಗ ಸುಬ್ಬಲಕ್ಷ್ಮಿ ಅವರು, ಹೌದು ಕನಾ೯ಟಕ ಸಂಗೀತ ಪಿತಾಮಹ ಪುರಂದರ ದಾಸರು, ನನ್ನ ಪ್ರಮಾದವನ್ನು ಮನ್ನಿಸಿ ಎಂದು ಹೇಳಿ, ಮುಂದೆ ಕನ್ನಡ ಕೀರ್ತನೆಗಳನ್ನೇ ಹಾಡಿದರಂತೆ.
ಒಮ್ಮೆ, ರವೀಂದ್ರ ಕಲಾ ಭವನವೆಂಬ ಕಟ್ಟಡದ ಉದ್ಘಾಟನೆಗೆ ಅನಕೃ ಅವರನ್ನು ಕರೆದಾಗ, ಉದ್ಘಾಟನಾ ಭಾಷಣ ಮಾಡುತ್ತ, ಈ ಭವನಕ್ಕೆ ರವೀಂದ್ರರ ಹೆಸರು ಇಟ್ಟಿರುವುದು ಸಂತೋಷವೆ, ಆದರೆ ನಮ್ಮ ನಾಡಿನಲ್ಲೇ ಅನೇಕ ಮಹನೀಯರಿದ್ದಾರೆ.ಪಂಚಾಕ್ಷರಿ ಗವಾಯಿ, ಸವಾಯಿ ಗಂಧರ್ವ, ಗುಬ್ಬಿ ವೀರಣ್ಣ, ವಿಶ್ವೇಶ್ವರಯ್ಯ ಹೀಗೆ ನಮ್ಮ ನಾಡಿನ ಮಹನೀಯರ ಹೆಸರಾಗಿದ್ದರೆ ಸೂಕ್ತವಾಗುತ್ತಿತ್ತು ಎಂದರಂತೆ. ಆಗ ಕೆಲವರು ಅನಕೃ ಅವರೊಂದಿಗೆ ಜಗಳವನ್ನೇ ಮಾಡಿದರಂತೆ.
ಹಿಂದಿ ಭಾಷಾ ಪರಿಷತ್ತಿನ ಅಧ್ಯಕ್ಷರಾಗಿದ್ದ ರಂಗನಾಥ ದಿವಾಕರ ಅವರು ೧೯೩೮ ರಲ್ಲಿ ಬಳ್ಳಾರಿಯಲ್ಲಿ ನಡೆದ ೨೦ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆದರೂ ಅವರು ಹೋದಲ್ಲೆಲ್ಲ ಹಿಂದಿ ಪ್ರಚಾರ ಮಾಡುತ್ತಿದ್ದುದನ್ನು ಟೀಕಿಸಿ , ಅನಕೃ ಅವರು, ” ಕನ್ನಡ ನುಡಿ ” ಪತ್ರಿಕೆಯಲ್ಲಿ ಸಂಪಾದಕೀಯ ಲೇಖನ ಬರೆದರು. ಇದು ದಿವಾಕರ ಅವರಿಗೆ ಬೇಸರ ತರಿಸಿತು. ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಬಿಎಂಶ್ರೀ ಅವರು, ದಿವಾಕರರ ಮನಸ್ಸಿಗೆ ಒಪ್ಪಿಗೆಯಾಗುವಂತೆ ಒಂದು ಸ್ಪಷ್ಟಣೆಯನ್ನು ಕನ್ನಡ ನುಡಿಯಲ್ಲಿ ಪ್ರಕಟಿಸಬೇಕೆಂದು, ಅನಕೃ ಅವರಿಗೆ ಸೂಚಿಸಿದರು. ಇದರಿಂದ ಖಿನ್ನರಾದ ಅನಕೃ ಕನ್ನಡ ನುಡಿಯ ಸಂಪಾದಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದರು. ಅವರ ಕನ್ನಡ ಬದ್ಧತೆ ಅಷ್ಟು ನಿಷ್ಠುರವಾಗಿತ್ತು.  ಅವರು ಅದ್ವಿತೀಯ ವಾಗ್ಮಿಯಾಗಿದ್ದರು. ಕನ್ನಡದ ಬಗ್ಗೆ ಗಂಟೆಗಟ್ಟಲೆ, ಗಾಂಭೀರ್ಯದಿಂದ ನಿರರ್ಗಳವಾಗಿ, ನಿರಾಯಾಸವಾಗಿ ಮಾತನಾಡುತ್ತಿದ್ದರು. ಅವರ ಭಾಷಣ ಕೇಳಿ, ಸಭಿಕರು ಬೆರಗಾಗಿ ಹೋಗುತ್ತಿದ್ದರು .ಅವರ ಮಾತು ಕೇಳಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಒಂದೇದಿನ ನಾಲ್ಕೈದು ಕಡೆಗಳಲ್ಲಿ  ಭಾಷಣವಿರುತ್ತಿದ್ದರೂ ಪ್ರತಿ ವೇದಿಕೆಯಲ್ಲಿ ಹೊಸವಿಷಯವನ್ನೇ ಹೇಳುತ್ತಿದ್ದರಂತೆ. ಮೊದಲನೇ ಭಾಷಣ ಕೇಳಿದ ಸಭಿಕರು, ನಂತರದ ಎಲ್ಲ ಸಭೆಗೂ ಹೋಗುವರಂತೆ.
ಬೆಂಗಳೂರಿನಲ್ಲಿ ಯಾವುದೇ ಭಾಷೆಯ ಚಿತ್ರಗಳು, ಬಿಡುಗಡೆಯಾಗಬೇಕಾದರೆ, ಅನಕೃ ಅವರ ಭಾಷಣವಿದೆಯೆ ಎಂದು ವಿಚಾರಿಸಿ, ಅವರ ಭಾಷಣವಿಲ್ಲವೆಂಬುದು ಖಾತ್ರಿ ಮಾಡಿಕೊಂಡು, ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದರಂತೆ.  ಅವರಿಗೆ, ಉತ್ತರ ಕರ್ನಾಟಕದ ಬಗ್ಗೆ ಬಹಳ ಅಭಿಮಾನವಿತ್ತು. ಅದರಲ್ಲೂ ಹುಬ್ಬಳ್ಳಿಯೆಂದರೆ ಬಲು ಪ್ರೀತಿ. ಹುಬ್ಬಳ್ಳಿಗೆ, ಇದು ಗಂಡುಮೆಟ್ಟಿನ ನಾಡು ಎಂದು ಹೇಳುತ್ತಿದ್ದರಂತೆ.        ಕುಂಚ ಬ್ರಹ್ಮ ಶ್ರೀ ಮಿಣಜಿಗಿ ಅವರ ಕಲಾ ಶಾಲೆಗೆ ಮೇಲಿಂದ ಮೇಲೆ ಬರುತ್ತಿದ್ದರು. ವಚನ ಸಾಹಿತ್ಯದ ಬಗ್ಗೆ ಅಪಾರ ಅಭಿಮಾನಹೊಂದಿದ್ದ ಅವರಿಗೆ ,ಕನ್ನಡ ಮಠಗಳೆಂದರೆ  ಬಹಳ ಅಭಿಮಾನ ಮತ್ತು ಪ್ರೀತಿ. ಮುರುಘಾಮಠದಲ್ಲಿ ತಂಗುತ್ತಿದ್ದರು. ಒಮ್ಮೆ ಯಾವುದೋ ಒಂದು ಸಭೆಯಲ್ಲಿ,  ಮಹನೀಯರೊಬ್ಬರು, ವಚನಗಳೇನು ಹಾಡಲು ಬರುತ್ತವೆಯೇ, ಅವು ಮಾತುಗಳು ಇದ್ದಹಾಗಿವೆ ಎಂದು ಅಪಹಾಸ್ಯ ಮಾಡಿದರಂತೆ, ಇಂತಹ ಮಾತುಗಳಿಂದ ಕೋಪಗೊಂಡ ಅನಕೃ ರವರು, ನಾದಬ್ರಹ್ಮ ಪಂಡಿತ ಮಲ್ಲಿಕಾರ್ಜುನ ಮನ್ಸೂರ್ ಅವರ ಮನೆಗೆ ಬಂದರು.  ವಚನ ಸಾಹಿತ್ಯ ಹಾಡಬೇಕೆಂದು ಅವರ ಬಳಿ ವಿನಂತಿಸಿಕೂಂಡರು. ಮತ್ತು ಸ್ವಲ್ಪ ಹಾಡಿಯೂ ತೋರಿಸಿದರಂತೆ. ಇದನ್ನು ಕೇಳಿ, ಪಂಡಿತ ಮನ್ಸೂರ್ ಅವರು   ಹಾಡಿಯೇ ಹಾಡುತ್ತೇನೆಂದು ಮಾತುಕೊಟ್ಟು ಒಮ್ಮೆ ಕಛೇರಿಯಲ್ಲಿ ಅಕ್ಕ ಕೇಳವ್ವ ನಾ ನೊಂದ ಕನಸ ಕಂಡೆ ” ಎಂದು ಹಾಡಿಯೇ ಬಿಟ್ಟರಂತೆ. ಮುಂದೆ ಆ ವಚನ ವಿಶ್ವ ವಿಖ್ಯಾತವಾಯಿತು. ಅಲ್ಲದೆ, ಪಂಡಿತ ಮನ್ಸೂರ ಅವರು ತಮ್ಮ ಸಂಗೀತ ಕಛೇರಿಯ ಕೊನೆಯಲ್ಲಿ ಒಂದಾದರೂ ವಚನ ಹಾಡುತ್ತಿದ್ದರು.
ಕನ್ನಡವೇನಾದರೂ ಉಳಿದಿದ್ದರೆ, ಅದು ಉತ್ತರ ಕರ್ನಾಟಕದಿಂದ ಎಂದು ಅನಕೃ ಹೆಮ್ಮೆಯಿಂದ ಹೇಳುತ್ತಿದ್ದರು. ಅನಕೃ.    ಅಂತಹ ಮಹಾನ್ ಸಾಹಿತಿ, ಕನ್ನಡ ಚಳವಳಿ ಹರಿಕಾರ, ಕನ್ನಡದ ಕಟ್ಟಾಳು , ಹುಬ್ಬಳ್ಳಿಯ ಬಗ್ಗೆ ಅಪಾರ ಅಭಿಮಾನಹೊಂದಿದ್ದ, ಅನಕೃ ಅವರ ಹೆಸರನ್ನು, ನಗರದ ಕೇಂದ್ರ ಗ್ರಂಥಾಲಯಕ್ಕೆ ನಾಮಕರಣ ಮಾಡಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಬೇಕು.
-ವೆಂಕಟೇಶ ಮರೇಗುದ್ದಿ, ಕನಾ೯ಟಕ ರಾಷ್ಟ್ರ ವೀರಪುಲಿಕೇಶಿ ಕನ್ನಡ ಬಳಗ ದೂ- ೯೯೪೫೧೧೪೩೩೫

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

3.7 / 5. ಒಟ್ಟು ವೋಟುಗಳು 3

advertisement

ನಿಮ್ಮ ಕಾಮೆಂಟ್ ಬರೆಯಿರಿ