ಕೊರೊನಾ ಸೋಂಕಿತರ ಮನೆಬಾಗಿಲಿಗೇ ಬರುತ್ತೆ ಆಮ್ಲಜನಕ..! ಬೆಂಗ್ಳೂರಲ್ಲಿ ವಿನೂತನ ಸೇವೆ ಆರಂಭ

ಬೆಂಗಳೂರು: ಆಮ್ಲಜನಕ ಕೊರತೆ ಎದುರಿಸುತ್ತಿರುವ ಕೋವಿಡ್‌ ಸೋಂಕಿತರಿಗೆ ಮನೆ ಬಾಗಿಲಿಗೇ ಓಲಾ ಕ್ಯಾಬ್‌ಗಳ ಮೂಲಕ ಆಮ್ಲಜನಕ ಸಾಂದ್ರಕಗಳನ್ನು (Oxygen Concentrator) ಒದಗಿಸುವ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಚಾಲನೆ ನೀಡಿದ್ದಾರೆ.
ಮೊದಲು ಬೆಂಗಳೂರಿನಲ್ಲಿ ಈ ವ್ಯವಸ್ಥೆ ಆರಂಭವಾಗುತ್ತಿದ್ದು, ಕ್ರಮೇಣ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ. ಈ ಕೆಲಸದಲ್ಲಿ ಸರ್ಕಾರದ ಜತೆ ಗಿವ್‌ ಇಂಡಿಯಾ ಹಾಗೂ ಓಲಾ ಕ್ಯಾಬ್‌ ಕಂಪನಿಗಳು ಕೈಜೋಡಿಸಿವೆ.
ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವತ್ಥನಾರಾಯಣ, ಇಡೀ ರಾಜ್ಯದಲ್ಲಿಯೇ ಮೊತ್ತ ಮೊದಲಿಗೆ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಕೆಲಸವನ್ನು ಆರಂಭ ಮಾಡಲಾಗಿದೆ. ಅದಕ್ಕೆ ಉತ್ತಮ ಫಲಿತಾಂಶ ಸಿಕ್ಕಿತು. ಈಗ ಇಡೀ ಬೆಂಗಳೂರಿಗೆ ವಿಸ್ತರಿಸುತ್ತಿದ್ದು, ಅದಕ್ಕೆ ಓಲಾ ಹಾಗೂ ಗಿವ್‌ ಇಂಡಿಯಾ ಸಹಕಾರ ನೀಡುತ್ತಿವೆ ಎಂದರು.
ಹೋಮ್‌ ಐಸೋಲೇಷನ್‌ ಆಗಿರುವ ಯಾರೇ ಸೋಂಕಿತರಲ್ಲಿ ಆಮ್ಲಜನಕದ ಸ್ಯಾಚುರೇಶನ್ ಮಟ್ಟವು ಶೇ. 94ಕ್ಕಿಂತ ಕಡಿಮೆ ಇದ್ದರೆ ಅಂಥವರಿಗೆ ಆಮ್ಲಜನಕ ಸಾಂದ್ರಕಗಳನ್ನು ನೀಡಲಾಗುವುದು. ಅವರು ಓಲಾ ಆಪ್‌ ಮೂಲಕ ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸಿದ 30 ನಿಮಿಷದೊಳಗೆ ಅವರಿಗೆ ಸಾಂದ್ರಕ ತಲುಪುತ್ತದೆ. ಸೋಂಕಿತರು 5,000 ರೂ. ಭದ್ರತಾ ಠೇವಣಿ (ಡಿಜಿಟಲ್‌ ಮೂಲಕ) ಪಡೆಯಬೇಕು. ಈ ಸಾಂದ್ರಕಗಳನ್ನು ವಾಪಸ್‌ ಪಡೆಯುವಾಗ ಈ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ಜತೆಗೆ, ಸೋಂಕಿತರಿಗೆ ಈ ಯಂತ್ರವನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನೂ ಹೇಳಿಕೊಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.
ಸದ್ಯಕ್ಕೆ 500 ಆಮ್ಲಜನಕ ಸಾಂದ್ರಕಗಳ ಮೂಲಕ ಈ ನೆಟ್‌ವರ್ಕ್‌ ಮಾಡಲಾಗಿದೆ. ಇವತ್ತು ಮಲ್ಲೇಶ್ವರ ಮತ್ತು ಕೋರಮಂಗಲದಲ್ಲಿ ವಿಧ್ಯುಕ್ತವಾಗಿ ಆರಂಭ ಮಾಡಲಾಗಿದೆ. ಕ್ರಮೇಣ ವಿಸ್ತರಣೆ ಮಾಡಲಾಗುವುದು. ಈ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ. ಇದರ ಜತೆಯಲ್ಲೇ ಟೆಲಿಕನ್ಸಲ್‌ಟೆನ್ಸಿ ನೀಡುವ ಚಿಂತನೆಯೂ ಇದೆ. ಅಗತ್ಯಬಿದ್ದರೆ ಅಂಥ ಸೋಂಕಿತರಿಗೆ ಔಷಧೋಪಾಚಾರವನ್ನೂ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಓಲಾ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್‌ ಪೋರ್‌ವಾಲ್‌ ಮಾತನಾಡಿ, ಇಂತಹ ಸಂಕಷ್ಟ ಸಂದರ್ಭದಲ್ಲಿ ಸರ್ಕಾರದ ಜತೆ ಕೈಜೋಡಿಸಿ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಈ ಯೋಜನೆಯನ್ನು ಬೆಂಗಳೂರು ‌ಮಾತ್ರವಲ್ಲದೆ, ಇಡೀ ದೇಶದಲ್ಲಿ ವಿಸ್ತರಿಸಲಾಗುವುದು. 10,000 ಆಮ್ಲಜನಕ ಸಾಂದ್ರಕಗಳನ್ನು ಜನ ಬಳಕೆ ನೀಡುವ ಉದ್ದೇಶ ಇದೆ‌ ಎಂದರು.
ಗಿವ್‌ ಇಂಡಿಯಾದ ಸರ್ಕಾರದ ಜತೆಗಿನ ಪಾಲುದಾರಿಕೆಯ ವ್ಯವಸ್ಥಾಪಕ‌ ನಿರ್ದೇಶಕ ಕೆ.ಪಿ.ವಿನೋದ್‌ ಮಾತನಾಡಿ, ಸರ್ಕಾರ ಮತ್ತು ಓಲಾ ಜತೆಗೆ ಗಿವ್ ಇಂಡಿಯಾ ಸೇರಿ‌ ಕೆಲಸ‌ ಮಾಡುತ್ತಿದೆ. ಮೊದಲ ಹಂತದಲ್ಲಿ 500 ಸಾಂದ್ರಕ ಕೊಡುತ್ತಿದ್ದು ಅಗತ್ಯ ನೋಡಿಕೊಂಡು ಇನ್ನೂ ಹೆಚ್ವು ಸರಬರಾಜು ಮಾಡಲಾಗುವುದು ಎಂದರು.
ಗಿವ್ ಇಂಡಿಯಾ, ಓಲಾ ಜತೆ ಸಂಯೋಜನೆಯ ಕೆಲಸ‌ ಮಾಡಿದ ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ರಾಘವೇಂದ್ರ ಬೇಲೂರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಮುಖ ಸುದ್ದಿ :-   ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನಕ್ಕೆ ನಿರ್ಬಂಧ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement