ಬೆಂಗಳೂರು: ರಾಜ್ಯದಲ್ಲಿ ತೌಕ್ಟೆ ಚಂಡಮಾರುತದ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳೊಂದಿಗೆ ಕಂದಾಯ ಸಚಿವರಾದ ಆರ್. ಅಶೋಕ್ ಹಾಗೂ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಸಭೆ ನಡೆಸಿದರು.
ತೌಕ್ಟೆ ಚಂಡಮಾರುತದಿಂದ ಹಾನಿಗೊಳಗಾಗುವ ಪ್ರದೇಶದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಮುನ್ನೆಚ್ಚರಿಕೆ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್, ತೌಕ್ಟೆ ಚಂಡಮಾರುತ ಲಕ್ಷದ್ವೀಪದಲ್ಲಿ ಕೇಂದ್ರೀಕೃತವಾಗಿದೆ. ರಾಜ್ಯದಿಂದ ಕೇವಲ 200 ಕಿ.ಮೀ ದೂರದಲ್ಲಿದೆ. ಹವಾಮಾನ ಕೇಂದ್ರದಿಂದ ಪ್ರತಿ ನಿಮಿಷಕ್ಕೂ ನಿಗಾ ವಹಿಸಲಾಗಿದೆ. ಬೆಂಗಳೂರಿನ ಜಿಕೆವಿಕೆಯಲ್ಲಿ ಕೇಂದ್ರವಿದೆ. ಶನಿವಾರ ರಾತ್ರಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. 60 ಕಿ.ಮೀ. ವೇಗದಲ್ಲಿ ಇದು ಬೀಸುತ್ತಿದೆ. ಮೇ 18ರ ವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ತಗ್ಗುಪ್ರದೇಶಗಳಿಂದ ಜನರ ಸ್ಥಳಾಂತರಕ್ಕೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮೂರು ಜಿಲ್ಲೆಗಳಲ್ಲಿ 8 ಕಡೆ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಂಕಷ್ಟಕ್ಕೆ ಸಿಲುಕಿದವರಿಗೆ ಅಲ್ಲಿ ಪುನರ್ ವ್ಯವಸ್ಥೆ ಮಾಡಲಾಗುತ್ತದೆ. 10 ಸಾವಿರ ಜನರನ್ನು ಈ ಪರಿಹಾರ ಕೇಂದ್ರಗಳಲ್ಲಿ ಇರಿಸಬಹುದಾದಷ್ಟು ವ್ಯವಸ್ಥೆ ಮಾಡಲಾಗಿದೆ. ಎರಡು ಎನ್ಡಿಆರ್ಎಫ್ ತಂಡಗಳು ಬಂದಿವೆ. ದಕ್ಷಿಣ ಕನ್ನಡದಲ್ಲಿ ಒಂದು ತಂಡ ಹಾಗೂ ಕೊಡಗಿನಲ್ಲಿ 1 ತಂಡ ಇರಲಿವೆ. ಇದರ ಜೊತೆ ನಮ್ಮ ರಾಜ್ಯದ ಎಸ್ಡಿಆರ್ಎಫ್ ತಂಡ ಸಹ ಸಹಕರಿಸಲಿದೆ ಎಂದು ತಿಳಿಸಿದರು.
ಮೂರು ಜಿಲ್ಲೆಗಳಲ್ಲಿ ಯಾರಿಗೂ ರಜೆಯಿಲ್ಲ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಎಲ್ಲ ಸಿಬ್ಬಂದಿಯನ್ನೂ ಕಟ್ಟೆಚ್ಚರದಲ್ಲಿ ಇರಿಸಲಾಗಿದೆ. ಉಡುಪಿಗೆ 23 ಕೋಟಿ ರೂ., ಉತ್ತರಕನ್ನಡಕ್ಕೆ 60 ಕೋಟಿ ರೂ., ದಕ್ಷಿಣ ಕನ್ನಡಕ್ಕೆ 12 ಕೋಟಿ ಹಣ ಮೀಸಲಿಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್ನಲ್ಲಿ ಹಣ ಇಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಮೂರು ಜಿಲ್ಲೆಗಳಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಿರಲಿದೆ. ಅಕ್ಕಪಕ್ಕದ ಜಿಲ್ಲೆಗಳ ಮೇಲೆಯೂ ಪರಿಣಾಮವಾಗಲಿದೆ. ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರಿನಲ್ಲಿ ಮಳೆ ಆಗಲಿದೆ. ಹೀಗಾಗಿ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಜನರಿಗೆ ಎಚ್ಚರಿಸುವ ಅಧುನಿಕ ಸೈರನ್ ವ್ಯವಸ್ಥೆಯಿದೆ. ಅಗತ್ಯ ಸಲಕರಣೆಗಳನ್ನು ಈಗಾಗಲೇ ಸಿದ್ಧ ಮಾಡಿಕೊಂಡಿದ್ದೇವೆ. ಬಸ್, ಲಾರಿ, ಜೀಪ್ಗಳನ್ನು ಸಿದ್ಧ ಮಾಡಿಕೊಂಡಿದ್ದೇವೆ. 15 ಕೋಟಿ ವೆಚ್ಚದಲ್ಲಿ ಸಲಕರಣೆ ಖರೀದಿಸಿದ್ದೇವೆ. 436 ಎಸ್ಡಿಆರ್ಎಫ್ ಸಿಬ್ಬಂದಿಯಿದ್ದಾರೆ. ಅಗ್ನಿಶಾಮಕ, ಪೊಲೀಸ್, ಕೋಸ್ಟಲ್ ಗಾರ್ಡ್ ಸೇರಿ 1 ಸಾವಿರ ಸಿಬ್ಬಂದಿ ಇದ್ದಾರೆ. ಕಳೆದ ವರ್ಷದಂತೆ ಮಾಜಿ ಸೈನಿಕರನ್ನು ನೇಮಕ ಮಾಡಿಕೊಳ್ಳುತ್ತೇವೆ. ಇನ್ನಷ್ಟು ಎನ್ಡಿಆರ್ಎಫ್ ಟೀಂ ಕಳಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಇನ್ನು ಎರಡು ತಂಡಗಳು ರಾಜ್ಯಕ್ಕೆ ಆಗಮಿಸಲಿವೆ.


ನಿಮ್ಮ ಕಾಮೆಂಟ್ ಬರೆಯಿರಿ