ಗಡ್ಚಿರೋಲಿ: ಜಿಲ್ಲೆಯ ಎಟಪಲ್ಲಿಯ ಅರಣ್ಯ ಪ್ರದೇಶದಿಂದ ಶುಕ್ರವಾರ ಕನಿಷ್ಠ 13 ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅಲ್ಲಿ ಮಹಾರಾಷ್ಟ್ರ ಪೊಲೀಸ್ ಸಿ -60 ಘಟಕ ಮತ್ತು ನಕ್ಸಲರ ನಡುವೆ ಎನ್‌ಕೌಂಟರ್ ನಡೆಯುತ್ತಿದೆ.
ಗಡ್ಚಿರೋಲಿಯ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಸಂದೀಪ್ ಪಾಟೀಲ್ ಅವರ ಪ್ರಕಾರ, ಈ ಕಾರ್ಯಾಚರಣೆಯು ಮಹಾರಾಷ್ಟ್ರ ಪೊಲೀಸರಿಗೆ ದೊಡ್ಡ ಯಶಸ್ಸನ್ನು ನೀಡಿದೆ ಮತ್ತು ಎನ್‌ಕೌಂಟರ್‌ನಲ್ಲಿ ಹೆಚ್ಚಿನ ನಕ್ಸಲ್‌ಗಳ ಹುಟ್ಟಡಗಿಸುವ ಸಾಧ್ಯತೆಯಿದೆ.
ಎಟಪಲ್ಲಿಯ ಪೆಯಿಡಿ-ಕೊಟ್ಮಿ ಅರಣ್ಯದಲ್ಲಿ ಶುಕ್ರವಾರ ಮುಂಜಾನೆ ಮಹಾರಾಷ್ಟ್ರ ಪೊಲೀಸರು ಮತ್ತು ನಕ್ಸಲರ ನಡುವಿನ ಮುಖಾಮುಖಿ ನಡೆಯುತ್ತಿದೆ.
ನಿರ್ದಿಷ್ಟ ಮಾಹಿತಿ ಆಧಾರದ ಮೇಲೆ, ಸಿ -60 ಕಮಾಂಡೋಗಳನ್ನು ಒಳಗೊಂಡ ಪೊಲೀಸ್ ಪಡೆಯು ಕಾಡಿನಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ” ಎಂದು ಡಿಐಜಿ ಪಾಟೀಲ್ ಹೇಳಿದ್ದಾರೆ.
ಕಾರ್ಯಾಚರಣೆ ವೇಳೆ ನಕ್ಸಲರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿ -60 ಕಮಾಂಡೋಗಳು ಗುಂಡು ಹಾರಿಸಿದ್ದು ಇದರಲ್ಲಿ 13 ನಕ್ಸಲರು ಕೊಲ್ಲಲ್ಪಟ್ಟರು ಎಂದು ಅವರು ಹೇಳಿದರು.
ಎನ್‌ಕೌಂಟರ್ ಸುಮಾರು ಒಂದು ಗಂಟೆ ಕಾಲ ನಡೆಯಿತು, ನಂತರ ಉಳಿದ ನಕ್ಸಲರು ದಟ್ಟವಾದ ಕಾಡಿಗೆ ಪರಾರಿಯಾಗಿದ್ದಾರೆ ಎಂದು ಗಡ್ಚಿರೋಲಿಯ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್ ಹೇಳಿದ್ದಾರೆ.ಸ್ಥಳದಿಂದ ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ