ಇದೇನು ಹುಚ್ಚಾಟ..? ಕೋವಿಡ್‌ -19 ಪರೀಕ್ಷೆ ನಿರಾಕರಿಸಿದ್ದಕ್ಕೆ ಬೆಂಗಳೂರು ಹುಡುಗನಿಗೆ ಬೇಕಾಬಿಟ್ಟಿ ಥಳಿಸಿದ ಬಿಬಿಎಂಪಿ ಅಧಿಕಾರಿಗಳು..!

ಬೆಂಗಳೂರು: ಛತ್ತೀಸ್‌ಗಡದ ಸೂರಜ್‌ಪುರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯೊಬ್ಬರು ಯುವಕನೊಬ್ಬನಿಗೆ ಕಪಾಳ ಮೋಕ್ಷ ಮಾಡಿ ಆತನ ಮೊಬೈಲ್‌ ಒಡೆದು ಹಾಕಿದ ಘಟನೆ ನಡೆದ ಬೆನ್ನಲ್ಲೇ ಬೆಂಗಳೂರಿನಲ್ಲಿ ಬಿಬಿಎಂಪಿ ಸಿಬ್ಬಂದಿ ಹುಡುಗನೊಬ್ಬನಿಗೆ ಅಮಾನವೀಯವಾಗಿ ಮನಸೋಇಚ್ಛೆ ಥಳಿಸಿದ ಘಟನೆಯ ವಿಡಿಯೋ ಈಗ ವೈರಲ್‌ ಆಗಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯಲ್ಲಿ, ಕೋವಿಡ್‌-19 ಗಾಗಿ ಪರೀಕ್ಷಿಸಲು ಕೇಳಿದಾಗ ಸಹಕರಿಸದ ಕಾರಣಕ್ಕೆ ಹದಿಹರೆಯದವನನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಬೇಕಾಬಿಟ್ಟಿ ಥಳಿಸಿದ್ದಾರೆ.‌

ಈ ಸಂಬಂಧದ ವಿಡಿಯೋ ವೈರಲ್‌ ಆಗಿದ್ದು ಅದರಲ್ಲಿ ಹುಡುಗನೊಬ್ಬನ್ನು ನಿರ್ದಯವಾಗಿ ಥಳಿಸಲಾಗಿದೆ. ಬೆಂಗಳೂರಿನ ದಕ್ಷಿಣ ವಲಯದ ಚಿಕ್ಕಪೇಟೆ ಕ್ಷೇತ್ರದ ಕ್ಷೇತ್ರದ ಧರ್ಮರಾಯ ಸ್ವಾಮಿ ದೇವಾಲಯದ ವಾರ್ಡ್‌ನ ವ್ಯಾಪ್ತಿಯಲ್ಲಿರುವ ನಾಗರತ್‌ ಪೇಟೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ವಿಡಿಯೋದಲ್ಲಿ ಹುಡುಗನಿಗೆ ಇಬ್ಬರು ಥಳಿಸುತ್ತಿರುವುದನ್ನು ಕಾಣಬಹುದು. ಒಬ್ಬ ವ್ಯಕ್ತಿ ಹುಡುಗನ ಕೈಗಳನ್ನು ಹಿಡಿದಿದ್ದರೆ, ಇನ್ನೊಬ್ಬ ವ್ಯಕ್ತಿ ಹುಡುಗನ ಕುತ್ತಿಗೆ ಮತ್ತು ಮುಖಕ್ಕೆ ಅಮಾನೀಯವಾಗಿ ಥಳಿಸುತ್ತಿದ್ದಾನೆ. ಹುಡುಗ ಅಸಹಾಯಕವಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿ ನೆಲಕ್ಕೆ ಬೀಳುತ್ತಾನೆ. ನಂತರ, ಒಬ್ಬ ಅಧಿಕಾರಿಯು ಹುಡುಗನ ಕುತ್ತಿಗೆಯನ್ನು ಹಿಡಿದು ಹುಡುಗನ ತಲೆಯನ್ನು ಮೇಜಿಗೆ ಹೊಡೆಯುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ, ಇತರ ಇಬ್ಬರು (ದಾರಿಹೋಕರು) ಇಬ್ಬರು ಅಧಿಕಾರಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ಮೇಜಿನ ಬಳಿ ಕುಳಿತಿದ್ದ ಇತರ ಅಧಿಕಾರಿಗಳು ಇಬ್ಬರು ಅಧಿಕಾರಿಗಳನ್ನು ತಡೆಯುವುದಿಲ್ಲ.
ಒಂದೆಡೆ ಹಲವೆಡೆ ರೋಗಲಕ್ಷಣವಿಲ್ಲದ ಕಾರಣಕ್ಕಾಗಿ ಅಧಿಕಾರಿಗಳು ಜನರ ಪರೀಕ್ಷೆಗಳನ್ನು ನಿರಾಕರಿಸಿದ್ದಾರೆ ಎಂದು ರಾಜ್ಯದಾದ್ಯಂತ ಅನೇಕ ಜನರು ದೂರುತ್ತಿದ್ದರೆ ಇಲ್ಲಿ ರೋಗಲಕ್ಷಣವಿಲ್ಲದಿದ್ದಾಗ ಹುಡುಗನನ್ನು ಏಕೆ ಪರೀಕ್ಷಿಸಲು ಒತ್ತಾಯಿಸಲಾಯಿತು. ಆತ ಒಪ್ಪಿದಿದ್ದಾಗ ಮನಸೋ ಇಚ್ಛೆ ಯಾಕೆ ಥಳಿಸಲಾಯಿತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಯಾರೂ ಹುಡುಗನಿಗೆ ಥಳಿಸಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲು ಒತ್ತಯಿಸಿದ್ದಾರೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ,ಈ ಘಟನೆ ಬಗ್ಗೆ ಇಲಾಖೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದು, ಪರೀಕ್ಷಾ ಸಂಖ್ಯೆ ಹೆಚ್ಚಿಸಲು ಬಿಬಿಎಂಪಿ ಪ್ರಯತ್ನಿಸುತ್ತಿದ್ದರೂ ಅಧಿಕಾರಿಗಳು ಜನರನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಛತ್ತೀಸ್‌ಗಡದ ಸೂರಜ್‌ಪುರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯೊಬ್ಬರು ಯುವಕನೊಬ್ಬನಿಗೆ ಕಪಾಳ ಮೋಕ್ಷ ಮಾಡಿದ ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಜಿಲ್ಲಾಧಿಕಾರಿ ಛತ್ತೀಸಗಢ ಮುಖ್ಯಮಂತ್ರಿಗಲು ತೆಗೆದುಹಾಕಿದಂತೆ ಕರ್ನಾಟಕದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಬಿಬಿಎಂಪಿ ಸಿಬ್ಬಂದಿ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಕದು ನೋಡಬೇಕು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement