ಬೆಂಗಳೂರು: ಜೂನ್ 7ರ ಬಳಿಕ ಕರ್ನಾಟಕದಲ್ಲಿ ಲಾಕ್ಡೌನ್ ವಿಸ್ತರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ತಜ್ಞರು ಮತ್ತು ತಾಂತ್ರಿಕ ಸಲಹಾ ಸಮಿತಿಯವರು ವರದಿ ತಯಾರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀಡಿದ್ದಾರೆ.
ರಾಜ್ಯದಲ್ಲಿ ಲಾಕ್ಡೌನ್ ಜೂ. 13ರ ವರೆಗೂ ಲಾಕ್ಡೌನ್ ವಿಸ್ತರಣೆಯಾಗುವ ಸಾಧ್ಯತೆಗಳಿವೆ.ಲಾಕ್ಡೌನ್ ವಿಸ್ತರಣೆ ಸಂಬಂಧ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈ ಸೇರಿದ್ದು, ವರದಿಯಲ್ಲಿ ಲಾಕ್ಡೌನ್ ವಿಸ್ತರಿಸುವಂತೆ ತಜ್ಞರು ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಸದ್ಯ ಜೂ.7ರವರೆಗೂ ಲಾಕ್ಡೌನ್ ಜಾರಿಯಲ್ಲಿದ್ದು, ನಂತರ ಲಾಕ್ಡೌನ್ನ್ನು ಕನಿಷ್ಠ ಒಂದು ವಾರಗಳ ಕಾಲ ವಿಸ್ತರಿಸುವುದು ಸೂಕ್ತ. ಇದರಿಂದ ಸೋಂಕನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಸಾಧ್ಯ ಎಂಬುದನ್ನು ತಜ್ಞರು ವರದಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಜೂ. 7ರ ನಂತರ ಏಕಾಏಕಿ ಅನ್ಲಾಕ್ ಮಾಡಿದರೆ ಸೋಂಕು ಮತ್ತೆ ಹೆಚ್ಚಳವಾಗಬಹುದು. ಜತೆಗೆ ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿ, ಲಾಕ್ಡೌನ್ ಅನ್ನು ಒಂದು ವಾರ ವಿಸ್ತರಿಸುವುದು ಒಳಿತು ಎಂದು ತಜ್ಞರು ಸಲಹೆ ಮಾಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ನಾಳೆ (ಜೂನ್ 1) ಹಿರಿಯ ಸಚಿವರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ಸೋಮವಾರ ಕೋವಿಡ್ ತಜ್ಞರ ಸಮಿತಿ ನೀಡಿರುವ ವರದಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಸಚಿವರು, ತಜ್ಞರ ಅಭಿಪ್ರಾಯ ಸಂಗ್ರಹಿಸಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಲಾಕ್ಡೌನ್ ಮುಂದುವರಿಸಬೇಕೇ ಅಥವಾ ಹಂತಹಂತವಾಗಿ ಲಾಕ್ಡೌನ್ ತೆಗೆಯಬೇಕೇ ಅಥವಾ ಆಲಕ್ಡೌನ್ ಮುಂದುವರಿಸಿ ನಿರ್ದಿಷ್ಟ ಪರಿಮಿತಿಯೊಳಗೆ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಬೇಕೇ ಎಂಬುದರ ಕುರಿತು ಜೂನ್ 4 ಅಥವಾ 5ರಂದು ಅಂತಿಮ ತೀರ್ಮಾನ ಮಾಡಲಿದ್ದಾರೆ.
ಭಾನುವಾರ ತಡರಾತ್ರಿಯವರೆಗೂ ಸಭೆ ಮಾಡಿ ತಜ್ಞರ ಸಮಿತಿ ವರದಿ ಸಿದ್ಧಪಡಿಸಿದೆ.ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದ್ದಾರೆ.
ಆರೋಗ್ಯ ಸಚಿವರು ಹೇಳಿದ್ದೇನು..?
ರಾಜ್ಯದಲ್ಲಿ ಪುನಃ ಲಾಕ್ ಡೌನ್ ವಿಸ್ತರಣೆ ಮಾಡುವ ಬಗ್ಗೆ ತಜ್ಞರು ನೀಡಿರುವ ವರದಿಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚೆ ಮಾಡಿ ನಂತರ ತೀರ್ಮಾನ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು,ಕೋವಿಡ್ ವಿಚಾರವಾಗಿ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ತಜ್ಞರ ವರದಿ ಆಧರಸಿ ವೈಜ್ಞಾನಿಕ ನೆಲಗಟ್ಟಿನ ಮೇಲೆಯೇ ನಾವು ಲಾಕ್ ಡೌನ್ ಬಗ್ಗೆ ತೀರ್ಮಾನ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಈ ಎಲ್ಲ ಅಂಶಗಳನ್ನ ಸಚಿವರ ಗಮನಕ್ಕೂ ತರಲಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ವರದಿ ನೋಡಿ ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು..
ಆರ್ಥಿಕ ಇಲಾಖೆಯಿಂದ ಸಲಹೆ..:
ಆರ್ಥಿಕ ಚಟುವಟಿಕೆ ಪ್ರಾರಂಭಿಸುವುದು ಉತ್ತಮ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಆರ್ಥಿಕ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಕಳೆದ ಒಂದು ತಿಂಗಳಿಂದ ರಾಜ್ಯಾದ್ಯಂತ ಬಹುತೇಕ ಆರ್ಥಿಕ ಚಟುವಟಿಕೆ ಸ್ಥಗಿತವಾಗಿದೆ. ಇದರಿಂದ ರಾಜ್ಯದ ಖಜಾನೆಗೆ ಹೊಡೆತ ಬೀಳುತ್ತಿದೆ. ಹೀಗಾಗಿ ಆರ್ಥಿಕ ಚಟುವಟಿಕೆ ನಿಧಾನವಾಗಿ ಪ್ರಾರಂಭವಾಗಬೇಕು. ಸರ್ಕಾರ ಪರಿಸ್ಥಿತಿ ನೋಡಿಕೊಂಡು ಹಂತಹಂತವಾಗಿ ಲಾಕ್ಡೌನ್ ಸಡಿಲ ಮಾಡುವುದು ಅನಿವಾರ್ಯ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ