ಒಡಿಶಾದ ಆಸ್ಪತ್ರೆಯ ನೆಲದಲ್ಲಿ ನಗ್ನವಾಗಿ ಮಲಗಿದ್ದ ಕೋವಿಡ್‌ ಸೋಂಕಿತರು: ತನಿಖೆಗೆ ಆದೇಶ

ಭುವನೇಶ್ವರ: ಬುಡಕಟ್ಟು ಪ್ರಾಬಲ್ಯದ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಕೋವಿಡ್‌ ಆಸ್ಪತ್ರೆಯ ಶೌಚಾಲಯ ಹಾಗೂ ಬೆಡ್‌ಗಳ ಮೇಲೆ, ನೆಲದ ಮೇಲೆ ಬೆತ್ತಲೆಯಾಗಿ ಮಹಿಳೆಯರು ಸೇರಿದಂತೆ ಹಲವು ರೋಗಿಗಳು ಮಲಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ, ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಜಿಲ್ಲೆಯ ನಗರದಲ್ಲಿನ ಆಸ್ಪತ್ರೆಯಲ್ಲಿ ಸೋಂಕಿತರ ಭೇಟಿಗಾಗಿ ಬಂದಿದ್ದ ವ್ಯಕ್ತಿಯೊಬ್ಬರು ರೋಗಿಗಳು ಬೆತ್ತಲಾಗಿ ಮಲಗಿರುವುದನ್ನು ನೋಡಿ, ವಿಡಿಯೋ ಮಾಡಿ ಹಾಗೂ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಮಯೂರ್ಭಂಜ್ ಆಡಳಿತವು ಕಳೆದ ವರ್ಷ ಕಾಳಿಂಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಕಿಮ್ಸ್) ನೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿತ್ತು. ಸಾಂಕ್ರಾಮಿಕದ ಮೊದಲ ಅಲೆಯ ನಂತರ ಈಗ ಮತ್ತೆ ಕೋವಿಡ್‌ ಪ್ರಕರಣಗಳು ಹೆಚ್ಚಾಗಿ ಎರಡನೇ ಅಲೆ ಆರಂಭವಾದಾಗ ಆಸ್ಪತ್ರೆ ಮತ್ತೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.
ಈ ಬಗ್ಗೆ ಮಾಹಿತಿ ನೀಡಿರುವ ವಿಡಿಯೋ ಚಿತ್ರೀಕರಿಸಿದ ಅಜಿತ್ ಸಾಹು, “ನಾನು ಮೇ 19 ರಂದು ನನ್ನ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಿದಿದ್ದೆ. ಅವರನ್ನು ನೋಡಲೆಂದು ನಾನು ಅಲ್ಲಿಯೇ ಇದ್ದೆ. ಬಳಿಕ ಶೌಚಾಲಯದಲ್ಲಿ ಮಲಗಿರುವ ಸೋಂಕಿತರು ನನ್ನ ಗಮನಕ್ಕೆ ಬಂದಿದ್ದಾರೆ. ಸೋಂಕಿತರಿಗೆ ಆಹಾರವು ಇಲ್ಲಿ ದೊರೆಯುತ್ತಿಲ್ಲ. ಶೌಚಾಲಯಕ್ಕೆ ಹೋಗಲು ಆಗುವುದಿಲ್ಲ. ಸರಿಯಾದ ಚಿಕಿತ್ಸೆ, ಆರೈಕೆಯಿಲ್ಲ. ಆಸ್ಪತ್ರೆಯ ಸಿಬ್ಬಂದಿಬರಿ ಕಾಟಾಚಾರಕ್ಕೆ ವಾರ್ಡ್‌ಗೆ ಬಂದು ಹೋಗುತ್ತಿದ್ದರು. ಮೇ 19 ಮತ್ತು 29 ರ ನಡುವೆ ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ತನ್ನ ತಂದೆಯನ್ನು ಇತ್ತೀಚೆಗಷ್ಟೇ ಕಳೆದುಕೊಂಡಿರುವ ಅಜಿತ್ ಸಾಹು, “ಪಿಪಿಇ ಕಿಟ್‌ ಹಾಕಿದ ವೈದ್ಯರು ದಿನಕ್ಕೆ ಎರಡು ಬಾರಿ ರೋಗಿಗಳನ್ನು ನೋಡಲು ಬರುತ್ತಿದ್ದರು. ಆದರೆ ಎಲ್ಲರ ಆರೈಕೆ ಮಾಡಲು ಸಾಕಷ್ಟು ಸಿಬ್ಬಂದಿ ಆಸ್ಪತ್ರೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ.

ನಾಗರಿಕರ ನಿಯೋಗವು ಮಯೂರ್ಭಂಜ್ ಕಲೆಕ್ಟರ್ ವಿನೀತ್ ಭಾರದ್ವಾಜ್‌ರನ್ನು ಭೇಟಿಯಾಗಿ ಪರಿಸ್ಥಿತಿಯ ಬಗ್ಗೆ ತಿಳಿಸಿದೆ. “ಆಸ್ಪತ್ರೆಯಲ್ಲಿ ರೋಗಿಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ರೋಗಿಗಳು ಬೆತ್ತಲೆಯಾಗಿ ಮಲಗಿದ್ದಾರೆ. ಕೆಲವರು ಟಾಯ್ಲೆಟ್‌ ಬಳಿಯೇ ಮಲಗಿರುವುದು ಗಮನಕ್ಕೆ ಬಂದಿದೆ. ರೋಗಿಗಳ ಆರೈಕೆಗೆ ಯಾರೂ ಕೂಡಾ ಇಲ್ಲ” ಎಂದು ನಿಯೋಗದ ಬಿಬೇಕ್ ಪಟ್ನಾಯಕ್ ಆರೋಪಿಸಿದರು.
ಇನ್ನು ಕಲೆಕ್ಟರ್ ವಿನೀತ್ ಭಾರದ್ವಾಜ್‌ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದ್ದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಹೇಳಿಕೆಯಲ್ಲಿ ಎಲ್ಲ ರೋಗಿಗಳು ಆಸ್ಪತ್ರೆಯ ಚಿಕಿತ್ಸೆಯಿಂದ ತೃಪ್ತರಾಗಿದ್ದಾರೆ ಎಂದು ತಿಳಿಸಿರುವುದಾಗಿ ಉಲ್ಲೇಖಿಸಲಾಗಿದೆ.
ವೈದ್ಯರು ಮತ್ತು ದಾದಿಯರು ರೋಗಿಯನ್ನು ನಿರ್ಲಕ್ಷಿಸಿದ್ದಾರೆ ಎಂಬ ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಮಾಡಿದ ಆರೋಪದ ಬಗ್ಗೆ ವಿಚಾರಿಸಲಾಗಿದೆ. ಅದು ಸುಳ್ಳು ಮತ್ತು ಆಧಾರರಹಿತವಾಗಿದೆ ಎಂದು ತಿಳಿದು ಬಂದಿದೆ. ರೋಗಿಗೆ ಮಾನಸಿಕ ಸಮಸ್ಯೆಯಿದೆ ಹಾಗೂ ಮಧ್ಯಸೇವನೆಯ ಚಟವಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಜಿಲ್ಲಾಡಳಿತವು ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಓರ್ವ ರೋಗಿಯ ಬಗ್ಗೆ ಮಾತನಾಡಿದ್ದು, ಆದರೆ ಆಸ್ಪತ್ರೆಯಲ್ಲಿ ಮಹಿಳೆಯರು ಸೇರಿದಂತೆ ಅನೇಕ ರೋಗಿಗಳು ಬೆತ್ತಲೆಯಾಗಿ ಮಲಗಿರುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement