ಕೆಎಸ್‌ಆರ್‌ಟಿಸಿ ಅಂದ್ರೆ ಇನ್ಮೇಲೆ ಕೇರಳ ಸಾರಿಗೆ: ಕಾನೂನು ಹೋರಾಟದಲ್ಲಿ ಕರ್ನಾಟಕಕ್ಕೆ ಸೋಲು

ಬೆಂಗಳೂರು: ಕೆಎಸ್​ಆರ್​ಟಿಸಿ (KSRTC) ಲೋಗೋ ಬಳಕೆ ವಿಚಾರವಾಗಿ ಕರ್ನಾಟಕ ಮತ್ತು ಕೇರಳ ನಡುವೆ ನಡೆಯುತ್ತಿದ್ದ 27 ವರ್ಷಗಳ ತಿಕ್ಕಾಟಕ್ಕೆ ಬ್ರೇಕ್ ಬಿದ್ದಿದ್ದು, ಕರ್ನಾಟಕ ರಾಜ್ಯಕ್ಕೆ ಹಿನ್ನಡೆಯಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(Karnataka State Road Transport Corporation)- ಈ ಲೋಗೋವನ್ನು ಇನ್ಮುಂದೆ ಕರ್ನಾಟಕ ಬಳಸುವಂತಿಲ್ಲ. ಈಗ ಕೆಎಸ್​ಆರ್​ಟಿಸಿ ಲೋಗೋ( KSRTC Logo) ಕೇರಳದವರಿಗೆ ದಕ್ಕಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಅಧೀನದ ಟ್ರೇಡ್​ ಮಾರ್ಕ್​ ರಿಜಿಸ್ಟ್ರಿ (Trade Mark Registry)​ ಆದೇಶ ಹೊರಡಿಸಿದೆ.
27 ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಕೆಎಸ್​ಆರ್​ಟಿಸಿ(ಕರ್ನಾಟಕ ಸ್ಟೇಟ್ ರೋಡ್ ಟ್ರಾನ್ಸ್​ಪೋರ್ಟ್​ ಕಾರ್ಪೋರೇಷನ್) ಹೆಸರಿನಲ್ಲಿ ಸಾರಿಗೆ ಬಸ್​ಗಳ ರಸ್ತೆಗಿಳಿಯುತ್ತಿದ್ದವು. ಕೇರಳದಲ್ಲಿಯೂ ಸಹ ಕೇರಳ ಸ್ಟೇಟ್​ ರೋಡ್ ಟ್ರಾನ್ಸ್​ಪೋರ್ಟ್​ ಕಾರ್ಪೋರೇಷನ್-ಕೆಎಸ್​ಆರ್​ಟಿಸಿ(Kerala State Road Transport Corporation) ಹೆಸರಿನಲ್ಲಿ ಬಸ್​ಗಳು ಕಾರ್ಯಾಚರಣೆ ಮಾಡುತ್ತಿದ್ದವು. ಎರಡೂ ರಾಜ್ಯಗಳ ಸಾರಿಗೆ ಸಂಸ್ಥೆ ಬಸ್​ಗಳ ಟ್ರೇಡ್‌ ಮಾರ್ಕ್‌ ಕೆಎಸ್​ಆರ್​ಟಿಸಿ ಎಂದೇ ಆಗಿತ್ತು. ಇದು ಬಿಕ್ಕಟ್ಟಿಗೆ ಕಾರಣವಾಗಿತ್ತು.
ಕೇರಳ 1965ರಿಂದಲೇ ಕೆಎಸ್​ಆರ್​ಟಿಸಿ ಟ್ರೇಡ್​ ಮಾರ್ಕ್​ನ್ನು ಬಳಸುತ್ತಿದೆ. ಕರ್ನಾಟಕ ಸರ್ಕಾರ 1973ರಿಂದ ಕೆಎಸ್​ಆರ್​​ಟಿಸಿ ಹೆಸರನ್ನು ಬಳಸುತ್ತಿದೆ. ಹೀಗಾಗಿ ನಾವು ಮೊದಲು ಕೆಎಸ್​ಆರ್​ಟಿಸಿ ಹೆಸರು ಬಳಸಿರುವುದರಿಂದ ನಮಗೆ ಈ ಟ್ರೇಡ್ ಮಾರ್ಕ್​ ಕೊಡಬೇಕೆಂದು ಕೇರಳ ಸರ್ಕಾರ ಕಾನೂನು ಹೋರಾಟ ನಡೆಸಿತ್ತು.
ಈ ಬಗ್ಗೆ 2014ರಲ್ಲಿ ಕೇರಳಕ್ಕೆ ಈ ಟ್ರೇಡ್ ಮಾರ್ಕ್ ಬಳಸದಂತೆ ಕರ್ನಾಟಕ ಸರ್ಕಾರ ಸೂಚಿಸಿತ್ತು. ಕೇರಳ ಸರ್ಕಾರ ಈ ಬಗ್ಗೆ ಕೇಂದ್ರ ಸರ್ಕಾರದ ಅಧೀನದ ಟ್ರೇಡ್ ಮಾರ್ಕ್​​ಗಳ ರಿಜಿಸ್ಟ್ರಿ ಬಳಿ ಅರ್ಜಿ ಸಲ್ಲಿಸಿತ್ತು. ಅಂತಿಮವಾಗಿ ಕೆಎಸ್​ಆರ್​ಟಿಸಿ ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಯ ಆಧಾರದಲ್ಲಿ ಟ್ರೇಡ್​ ಮಾರ್ಕ್ ರಿಜಿಸ್ಟ್ರಿ ಕೇರಳ ಸರ್ಕಾರಕ್ಕೆ ಕೆಎಸ್​ಆರ್​​ಟಿಸಿ ಟ್ರೇಡ್​​ ಮಾರ್ಕ್​ ನೀಡಿದೆ. ಸದ್ಯ ಈ ಬಗ್ಗೆ ಕೇರಳ ಸಾರಿಗೆ ಸಂಸ್ಥೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಈ ಬಗ್ಗೆ ಕೆಎಸ್​ಆರ್​​ಟಿಸಿ ಎಂಡಿ ಶಿವಯೋಗಿ ಕಳಸದ ಪ್ರತಿಕ್ರಿಯೆ ನೀಡಿದ್ದು, ಸದ್ಯ ಇದು ನಮ್ಮ ಗಮನಕ್ಕೆ ಬಂದಿದೆ. ಆದ್ರೆ ನಮಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಅಧಿಕೃತ ಆದೇಶ ಕೈ ಸೇರಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ನಾವು ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement