ಜೀವನಶೈಲಿ.. ನಗರಗಳ ಬೆಳವಣಿಗೆ..ಪರಿಸರ ಮಾಲಿನ್ಯ…ರಕ್ಷಣೆ ಬಗೆ…

(ಜೂನ್ ೫, ಪರಿಸರ ದಿನವಾಗಿದ್ದು ಆ ನಿಮಿತ್ತ ಲೇಖನ)

ಪರಿಸರ ರಕ್ಷಣೆಯಲ್ಲಿ ವ್ಯಕ್ತಿಗಳ ಪಾತ್ರ ಬಹಳ ಮುಖ್ಯ. ಸರಕಾರ ಎಷ್ಟೇ ಶಾಸನಗಳನ್ನು ಜಾರಿಗೊಳಿಸಲಿ, ಸಂಘ-ಸಂಸ್ಥೆಗಳು, ಜನಾಂದೋಲನ ಮಾಡಲಿ ಅವುಗಳ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಆಗಲಾರದು. ಪರಿಸರದ ಬಗ್ಗೆ ವ್ಯಕ್ತಿಗಳಲ್ಲಿ ಜಾಗೃತಿ ಮೂಡಿ, ಅವರು ಕಾರ್ಯೊನ್ಮುಖರಾದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ. ಔದ್ಯೋಗಿಕರಣ, ಆಧುನಿಕತೆ, ಸಾರಿಗೆ ಮುಂತಾದ ಯೋಜನೆಗಳಿಂದ ಪರಿಸರ ಕಲುಷಿತವಾಗುತ್ತಿದೆ. ಪರಿಸರ ಮಾಲಿನ್ಯದಲ್ಲಿ ಶೇಕಡಾ ೫೧ರಷ್ಟು ಮಾಲಿನ್ಯ ನಾವುಗಳು ಬಳಸುವ ವಿವಿಧ ವಾಹನಗಳಿಂದ ಮಾಡಲಾಗುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಇದನ್ನು ಪುಷ್ಟೀಕರಿಸುವಂತೆ ಜಗತ್ತಿನಲ್ಲಿಯೇ ಅತ್ಯಂತ ಕಲುಷಿತ ನಗರ ಎಂದು ಹಣೆಪಟ್ಟಿ ಅಂಟಿಸಿಕೊಂಡಿರುವ ಭಾರದ ರಾಜಧಾನಿ ದೆಹಲಿ ಕೋವಿಡ್‌ ಲಾಕಡೌನ್‌ ಸಂದರ್ಭದಲ್ಲಿ ವಾಹನ ಸಂಚಾರಗಳಿಲ್ಲದ ಕಾರಣ ಅಲ್ಲಿನ ವಾತಾವರಣದ ಕಲುಷಿತದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಆಧುನಿಕ ಅನುಭೋಗದಾರಿಕೆಯ ಹೆಚ್ಚಳವು ಪರಿಸರ ಮಾಲಿನ್ಯ ಹೆಚ್ಚಾಗಲು ಮತ್ತು ಪರಿಸರ ನಾಶಕ್ಕೆ ಮುಖ್ಯ ಕಾರಣವಾಗಿದೆ.

ಪರಿಸರ ಮಾಲಿನ್ಯದ ಆಹ್ವಾನವನ್ನು ತಡೆಯುವಲ್ಲಿ ಧರ್ಮ, ಸಾರ್ವಜನಿಕರಲ್ಲಿ ಜಾಗೃತಿ, ವ್ಶೆಜ್ಞಾನಿಕ ಸಂಶೋಧನೆಗಳು ಜೀವನ ಶೈಲಿ ಪ್ರಮುಖ ಪಾತ್ರ ವಹಿಸುತ್ತವೆ. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಧರ್ಮ ಮಹತ್ವದ ಸ್ಥಾನ ವಹಿಸುತ್ತದೆ. ಹಿಂದೂ ಧರ್ಮವು ನಿಸರ್ಗವನ್ನು ಮಾತೃದೇವತೆ ಎಂದು ಆರಾಧನೆ ಮಾಡುತ್ತ ಬಂದಿದೆ. ನದಿಗಳನ್ನು ದೇವತೆಗಳೆಂದು ಪೂಜಿಸುತ್ತಾರೆ. ಬೌದ್ಧ-ಜೈನ ಧರ್ಮಗಳು ಅಹಿಂಸೆಯನ್ನು ಮುಖ್ಯ ತತ್ವವಾಗಿ ಸ್ವೀಕರಿಸಿದ್ದು, ದೇವರನ್ನು ಹೂ, ಹಣ್ಣು, ಎಲೆಗಳಿಂದ ಪೂಜೆ ಮಾಡುವುದನ್ನು ನಿಷೇಧಿಸಿವೆ. ಆಹಾರಕ್ಕಾಗಿ ಪ್ರಾಣಿ ಹಿಂಸೆ ನಿಷೇಧಿಸಿದೆ. ವ್ಯವಹಾರದ ಉದ್ದೇಶಕ್ಕಾಗಿ ನಿಸರ್ಗವನ್ನು ಹಾಳು ಮಾಡುವುದನ್ನು ಹಿಂಸೆ ಎಂದು ಪರಿಗಣಿಸಿದೆ. ಇಸ್ಲಾಂ ಧರ್ಮವೂ ಕೂಡ ಜಲಸಂಪನ್ಮೂಲಗಳನ್ನು ಹಾಳು ಮಾಡುವುದು ವಿಕೃತಗೊಳಿಸುವುದನ್ನು ನಿಷೇಧಿಸಿದೆ.
ಪರಿಸರ ಸಂಪನ್ಮೂಲಗಳು ಅವುಗಳ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ನಮ್ಮ ಅಭಿವೃದ್ಧಿಯನ್ನು ಸುಸ್ಥಿರಗೊಳಿಸಬೇಕಾದರೆ, ನಿರಂತರವಾಗಿ ನಡೆಯುವಂತಾಗಬೇಕಾದರೆ ನಿಸರ್ಗದ ಮೇಲೆ ಮಾನವನು ನಡೆಸುವ ಕ್ರೂರತನ, ಅವ್ಶೆಜ್ಞಾನಿಕ ಬಳಕೆಯನ್ನು ತಡೆಯದೇ ಹೋದರೆ ನಾನಾ ಬಗೆಯ ಸಮಸ್ಯೆಗಳಿಗೆ ಆಮಂತ್ರಣ ನೀಡಿದಂತಾಗುವುದು. ಬೆಳೆಯುತ್ತಿರುವ ನಗರಗಳು ಪರಿಸರ ಮಾಲಿನ್ಯಕ್ಕೆ ಪ್ರಮುಕ ಕಾರಣಗಳಲ್ಲೊಂದು. ಹೀಗಾಗಿ ನಗರವಾಸಿಗಳು ಮಾಲಿನ್ಯ ತಡೆಯುವಲ್ಲಿ ತೀವ್ರ ಗಮನ ಹರಿಸಬೇಕಾಗಿದೆ. ವಾಹನಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಮೂರು-ನಾಲ್ಕು ಜನಸೇರಿ ಒಂದು ವಾಹನ ಬಳಸುವುದು ಸೂಕ್ತ. ಇದರಿಂದ ಇಂಧನದ ಬಳಕೆ ಕಡಿಮೆಯಾಗುತ್ತದೆ. ಮಾಲಿನ್ಯ ತಡೆಗೂ ಅನುಕೂಲವಾಗುತ್ತದೆ. ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆಗೊಳಿಸುವ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸುವುದೂ ಅಗತ್ಯ. ಇಲೆಕ್ಟ್ರಿಕ್‌ ವಾಹನಗಳ ಬಳಕೆ ಇನ್ನೂ ಹೆಚ್ಚಾಗಬೇಕು.
ನಗರ ಪ್ರದೇಶದಲ್ಲಿರುವ ವಿವಿಧ ಕಾರ್ಖಾನೆಗಳಿಂದ ಬಿಡುವ ಹೊಗೆಗಳಲ್ಲಿ ವಿಷಕಾರಕ ಲೋಹದ ಕಣಗಳಿರುವುದರಿಂದ ನಮ್ಮ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತವೆ. ಅದಕ್ಕಾಗಿ ಬದಲಿ ಆರೋಗ್ಯದ ಸಾಧನಗಳನ್ನು ಬಳಸಬೇಕು. ಕೂದಲಿಗೆ ಹಚ್ಚುವ ಕಪ್ಪು ಬಣ್ಣದ ರಾಸಾಯನಿಕಗಳಲ್ಲಿ ಮೆಥಾಯಿಲ್ ಕ್ಲೋರಾಯಿಡ್ ಇರುತ್ತದೆ. ಇದು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು. ಕೂದಲಿಗೆ ಹಚ್ಚುವ ಕೆಂಪು, ಕಪ್ಪು, ಸುವರ್ಣ ಬಣ್ಣಗಳಲ್ಲಿರುವ ರಾಸಾಯನಿಕ ವಸುಗಳು ರಕ್ತದಲ್ಲಿ ಸೇರಿಕೊಳ್ಳುವುದರಿಂದ ವಿಪರೀತ ಪರಿಣಾಮಗಳಾಗುತ್ತವೆ. ಶಾಂಪೂ, ನೇಲ್‌ಪಾಲಿಶ್‌ ಮೊದಲಾದವುಗಳಲ್ಲಿ ಅಮೋನಿಯಾ, ಎಥನಾಲ್ ಮೊದಲಾದ ರಾಸಾಯನಿಕಗಳಿರುವದರಿಂದ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತವೆ, ವಿನೇಗರ್ ಮತ್ತು ಬಿಸಿನೀರು ಸಾಂಪ್ರದಾಯಿಕ ಪದ್ಧತಿಗಳಿಂದ ಕೂದಲು ಸ್ವಚ್ಛಗೊಳಿಸಲು ಆದ್ಯತೆ ಕೊಟ್ಟರೆ ಒಳ್ಳೆಯದು. ವಾಯುಮಾಲಿನ್ಯ ತಡೆಯಲು ಸುವಾಸಿತ ತೈಲಗಳನ್ನು ಬಳಸಬೇಕು.
ಪರಿಸರ ಪ್ರಜ್ಞೆ ನಮ್ಮ ಮನೆಗಳಿಂದಲೇ ಪ್ರಾರಂಭವಾಗಬೇಕು. ನಂತರ ಶಾಲೆ, ಕಾಲೇಜುಗಳಲ್ಲಿ ಈ ಪ್ರಜ್ಞೆ ಬೆಳೆಸಲು ಪ್ರಾಯೋಗಿಕ ಪ್ರಯತ್ನ ಜರುಗಬೇಕು. ಸಾರ್ವಜನಿಕ ಸ್ಥಳಗಳಾದ ಬಸ್ ಸ್ಟಾಂಡ್, ರೈಲ್ವೆಸ್ಟೇಶನ್, ದೇವಸ್ಥಾನ, ಕಲ್ಯಾಣ ಮಂಟಪಗಳು, ಮಾರುಕಟ್ಟೆಗಳು, ಹೋಟೆಲುಗಳು, ದವಾಖಾನೆಗಳಲ್ಲಿ, ಉದ್ದಿಮೆಗಳಲ್ಲಿ ಪರಿಸರ ಸಂರಕ್ಷಣೆಯ ನಿಯಮಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಬೇಕು. ಉಲ್ಲಂಘಿಸಿದವರಿಗೆ ದಂಡ-ಶಿಕ್ಷೆಗಳನ್ನು ಯಾವ ಮುಲಾಜು ಇಲ್ಲದೆ ವಿಧಿಸುವಂಥಾಗಬೇಕು. ಕಠಿಣ ಕ್ರಮಗಳನ್ನು ತೆಗೆದುಗೊಂಡಾಗ ಮಾತ್ರ ಜನರಲ್ಲಿ ಪರಿಸರ ಪ್ರಜ್ಞೆ , ಕಾಳಜಿ ಮೂಡಲು ಸಾಧ್ಯವಾಗುತ್ತದೆ.
ನೀರನ್ನು ಮಿತವಾಗಿ ಬಳಸುವುದು, ಬಳಸಿದ ನೀರನ್ನು ತೋಟ-ಮರ ಗಿಡಗಳಿಗೆ ಪುನರ್ ಬಳಕೆ ಮಾಡುವುದು, ಕಸ, ಮುಸುರೆಯನ್ನು , ಹಣ್ಣಿನ ಸಿಪ್ಪೆಯನ್ನು ಅಂಗಳ, ಅಕ್ಕ ಪಕ್ಕದ ಸ್ಥಳಗಳಲ್ಲಿ ಬೀಸಾಡದೆ ಒಂದೆಡೆ ಸಂಗ್ರಹಿಸಿ, ಸಾರ್ವಜನಿಕವಾಗಿಟ್ಟ ಕಸದ ತೊಟ್ಟಿಯಲ್ಲಿ ಹಾಕುವುದನ್ನು ಹಿರಿಯರು ಪಾಲಿಸುತ್ತ, ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು. ರಸಾಯನ ಯುಕ್ತ ಟೂಥ್‌ಪೆಸ್ಟ್, ಹೇರ ಡೈ, ನೆಲ್ ಪಾಲಿಶ್, ಲಿಪಸ್ಟಿಕ್, ಸ್ನೋ, ಪಾವಡರ್, ಸೆಂಟ್‌ಗಳ ಬಳಕೆಯನ್ನು ಮಿತಗೊಳಿಸುವುದು. ಧ್ವನಿ ವರ್ಧಕ ಕಡಿಮೆ ಪ್ರಮಾಣದಲ್ಲಿ ಇಡುವುದು. ಮತ್ತು ದೂರದರ್ಶನ ವೀಕ್ಷಣೆಯಲ್ಲಿ ನಿಗದಿತ ಅಂತರವನ್ನು ಕಾಪಾಡಿಕೊಳ್ಳುವುದು, ಫ್ರಿಜ್, ಏರಕೂಲರ್‌ಗಳ ಬಳಕೆಯನ್ನು ಅವಶ್ಯವಿದ್ದಲ್ಲಿ ಮಾತ್ರ ಬಳಸುವಂತಾಗಬೇಕು.

ಇಂಧನಯುಕ್ತ ವಾಹನಗಳ ಬಳಕೆಯನ್ನು ಕಡಿಮೆ ಮಾಡುವುದು, ಏರ್ ಹಾರ್ನುಗಳ ವಿಕಾರ/ಕೀರಲು ದ್ವನಿಗಳನ್ನು ನಿಷೇಧಿಸುವುದು. ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಮಾಡಲು ಪ್ರೋತ್ಸಾಹಿಸುವುದು, ಸೋಲಾರ್ ವ್ಯವಸ್ಥೆಯನ್ನು ಬಳಸಿಕೊಂಡು, ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬೇಕು.
ಅಡುಗೆ ಮನೆಯ ತ್ಯಾಜ್ಯಗಳಾದ ಚಹಾಪುಡಿ, ಹಣ್ಣಿನ ಸಿಪ್ಪೆ, ಕಾಯಿ ಪಲ್ಲೆಯ ತ್ಯಾಜ್ಯವನ್ನು ಸಾವಯವ ಗೊಬ್ಬರ ಮಾಡಿಕೊಂಡು ಕೈತೊಟ್ಟಕ್ಕೆ ಬಳಸಿಕೊಳ್ಳುವುದು, ತಾರಸಿ ಉದ್ಯಾನ, ಮನೆಯ ಮುಂದೆ ಅನುಕೂಲವಿದ್ದರೆ, ಚಿಕ್ಕ ಗಿಡಗಳನ್ನು ಬೆಳೆಸುವುದು, ರೇಡಿಯೋ, ಟೇಪ್ ಡಿವಿಡಿಗಳ ಕಡಿಮೆ ಮಾಡಿ ಆಲಿಸುವುದು, ಮೊಬೈಲುಗಳಲ್ಲಿ ಸಾವಕಾಶವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು.
ನಾವು ವಾಸಿಸುವ ಪ್ರದೇಶಗಳಲ್ಲಿ ಬೇವು, ಬಿಲ್ವ, ಅರಳಿ, ಹತ್ತಿ, ನೇರಳೆ, ಹುಣಸೆ ಮುಂತಾದ ಗಿಡ ಮರಗಳನ್ನು ಬೆಳೆಯಬೇಕು. ಇಂಧನಕ್ಕಾಗಿ ಕಟ್ಟಿಗೆಯನ್ನು ಹೆಚ್ಚು ಬಳಸುತ್ತಿರುವುದರಿಂದ, ಹೊಗೆಯಿಂದಾಗಿ ಹಲವಾರು ರೋಗಗಳು ಹೆಚ್ಚುತ್ತಿವೆ. ಹೊಗೆ ರಹಿತ ಮತ್ತು ಸೊಲಾರ್‌ ಒಲೆಗಳನ್ನು ಬಳಸುವುದು ಇಂದಿನ ಅಗತ್ಯವಾಗಿದೆ.
ಪರಿಸರ ರಕ್ಷಣೆಗೆ ಸರ್ಕಾರ ಮತ್ತು ಸೇವಾ ಸಂಸ್ಥೆಗಳು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿವೆ. ಶಿಕ್ಷಕರು ಮತ್ತು ಪಾಲಕರು ಮಕ್ಕಳಿಗೆ ಪರಿಸರ-ನಿಸರ್ಗದ ಮಹತ್ವದ ಬಗ್ಗೆ ತಿಳಿಸಿ ಮಾಲಿನ್ಯ ತಡೆಗಟ್ಟಲು ಸಹಕರಿಸಬೇಕು. ಮಕ್ಕಳಲ್ಲಿ ನಿಸರ್ಗದ ಬಗ್ಗೆ ಪೂಜ್ಯಭಾವನೆ ಬೆಳೆಯುವ ಮೌಲ್ಯಗಳನ್ನು ವೃದ್ಧಿಗೊಳಿಸಬೇಕು. ಶಿಕ್ಷಣದಲ್ಲಿ ಪರಿಸರದ ಬಗ್ಗೆ ಪಠ್ಯಕ್ರಮದಲ್ಲಿ ತಿಳಿಸಿ, ಅಭ್ಯಾಸವನ್ನು ಕಡ್ಡಾಯಗೊಳಿಸಬೇಕು ಇದರಿಂದ ನಿಸರ್ಗ ಮತ್ತು ಪರಿಸರದ ಬಗ್ಗೆ ಗೌರವ ಹಾಗೂ ಸಂರಕ್ಷಣೆಗೆ ಸಾಧ್ಯವಾಗುವುದು.
ವೈಯಕ್ತಿಕ ಪರಿಸರ ಪ್ರಜ್ಞೆ ಜಾಗೃತವಾದಾಗ ಮಾತ್ರ ಸಾರ್ವಜನಿಕ ಪರಿಸರ ಪ್ರಜ್ಞೆ ಮೂಡಲು ಸಾಧ್ಯ. ಪರಿಸರಕ್ಕೆ ಮಾನವನ ಸದಾಶಯಗಳನ್ನು ಪೂರೈಸುವ ಸಾಮರ್ಥವಿದೆ ವಿನಃ ದುರಾಶೆಗಳನ್ನಲ್ಲ. ಪರಿಸರ ಮಾಲಿನ್ಯವನ್ನು ಜನಜಾಗೃತಿ, ವೈಜ್ಞಾನಿಕ ಧಾರ್ಮಿಕ ಆಚರಣೆಗಳಲ್ಲಿ ಆಧಾರವಾಗಿಟ್ಟಿಕೊಂಡು ಪ್ರತಿಯೊಬ್ಬರೂ ರಕ್ಷಿಸಬಹುದಾಗಿದೆ.
– ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥ ಪಾಲಕರು

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement