ಲಾಕ್‌ಡೌನ್‌ ಸಂಕಷ್ಟದ ನಡುವೆ ವಿದ್ಯುತ್​ ದರ ಏರಿಕೆ ಶಾಕ್‌..ಹೆಚ್ಚಳಕ್ಕೆ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅನುಮೋದನೆ..!

ಬೆಂಗಳೂರು: ಬೆಂಗಳೂರು: ಲಾಕ್​ಡೌನ್​ನಿಂದಾಗಿ ಜನ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಇಂಧನ ಬೆಲೆ ಏರಿಕೆ ದೆಸೆಯಿಂದ ದಿನೋಪಯೋಗಿ ವಸ್ತುಗಳ ಬೆಲೆಯೂ ಗಗನಕ್ಕೆ ಏರುತ್ತಿದೆ. ಇದರ ಮಧ್ಯೆಯೇ ವಿದ್ಯುತ್​ ದರ ಏರಿಸುವ ಮೂಲಕ ಸರ್ಕಾರ ಜನರಿಗೆ ಶಾಕ್ ನೀಡಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (Karnataka Electricity Regulatory Commission – KRRC) ರಾಜ್ಯದಲ್ಲಿ ವಿದ್ಯುತ್​ ದರಗಳನ್ನು ಹೆಚ್ಚಿಸಲು ಅನುಮೋದನೆ ನೀಡಿದೆ.
ರಾಜ್ಯದ ವಿವಿಧ ವಿದ್ಯುತ್ ವಿತರಣಾ ಕಂಪನಿಗಳು 135 ಪೈಸೆ (1.35ರೂ.) ಬೆಲೆ ಏರಿಕೆ ಕೋರಿ ಬಹಳ ಹಿಂದೆಯೇ ಪ್ರಸ್ತಾವ ಸಲ್ಲಿಸಿದ್ದವು. ಈ ಪ್ರಸ್ತಾವಗಳನ್ನು ಕೂಲಂಕಷವಾಗಿ ಪರಿಶೀಲಿಸಿರುವ ಆಯೋಗವು ಸರಾಸರಿ 30 ಪೈಸೆ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.

ಈ ಕುರಿತು ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.
ಪರಿಷ್ಕೃತ ದರಗಳು ಏಪ್ರಿಲ್ 1, 2021ರ ನಂತರದ ಮೊದಲ ಮೀಟರ್ ಓದುವ ದಿನಾಂಕದಿಂದ ಬಳಕೆ ಮಾಡುವ ವಿದ್ಯುಚ್ಛಕ್ತಿಗೆ ಅನ್ವಯವಾಗುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳ ದರ ಪರಿಷ್ಕರಣೆಯ ಬಾಕಿಯನ್ನು ಯಾವುದೇ ಬಡ್ಡಿ ವಿಧಿಸದೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ವಸೂಲಿ ಮಾಡಲು ಆದೇಶ ನೀಡಲಾಗಿದೆ.
ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ಯೂನಿಟ್​ಗೆ 83ರಿಂದ 168 ಪೈಸೆಗಳಷ್ಟು ಹೆಚ್ಚಳ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಆಯೋಗವು ಶೇ 3.84ರ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. 30 ಪೈಸೆಗಳಷ್ಟು ದರ ಹೆಚ್ಚಳವಾಗಲಿದೆ.
ಜೊತೆಗೆ ಎಚ್​ಟಿ ಕೈಗಾರಿಕೆಗಳಲ್ಲಿ ಬೆಳಿಗ್ಗೆ 6ರಿಂದ 10ರ ಪೀಕ್ ಅವಧಿಯ ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ ವಿಧಿಸುತ್ತಿದ್ದ 1ರ ದಂಡ ಹಿಂಪಡೆಯಲಾಗಿದೆ. ಎಲ್​ಟಿ ಮಂಜೂರಾತಿ ಮಿತಿಯನ್ನು 150 ಕಿಲೋವ್ಯಾಟ್​ಗೆ ಹೆಚ್ಚಿಸಲಾಗಿದೆ. ಗೃಹಬಳಕೆ ವಿಭಾಗದಲ್ಲಿ ಮೊದಲ ಹಂತವನ್ನು (First Slab) 30 ಯೂನಿಟ್​ಗಳಿಂದ 50 ಯೂನಿಟ್​ಗಳಿಗೆ ಹೆಚ್ಚಿಸಲಾಗಿದೆ. ಸಾರ್ವಜನಿಕ ಬೀದಿದೀಪಗಳಲ್ಲಿ ಎಲ್​ಇಡಿ ಬಲ್ಬ್​ ಬಳಕೆಗೆ ಪ್ರತಿ ಯೂನಿಟ್​ಗೆ 1.05 ರಿಯಾಯ್ತಿ ಮುಂದುವರಿಸಲಾಗುವುದು ಎಂದು ಆಯೋಗ ತಿಳಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement