ರಕ್ತದಾನ ಯಾರು ಮಾಡಬಹುದು..ಯಾಕೆ ಮಾಡಬೇಕು..ಯಾರು ಮಾಡಬಾರದು..?

posted in: ಅಂಕಣಗಳು | 0

 (ಜೂನ್‌ ೧೪.೦೬.೨೦೨೧ರಂದು ವಿಶ್ವ ರಕ್ತದಾನ ವಾಗಿದ್ದು, ಆ ನಿಮಿತ್ತ ಈ ಲೇಖನ)

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಪ್ರತಿವರ್ಷ ಜೂನ್ ೧೪ ರಂದು ಅಂತಾರಾಷ್ಟ್ರೀಯ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಪ್ರಪ್ರಥಮ ಬಾರಿಗೆ ೨೦೦೪ ರಲ್ಲಿ ಪ್ರಚಲಿತಕ್ಕೆ ಬಂದ ಈ ದಿನ ರಕ್ತದ ಅಗತ್ಯದ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತದೆ. ಇದರೊಂದಿಗೆ ಸ್ವಯಂ ಪ್ರೇರಿತರಾಗಿ ಜೀವ ಉಳಿಸುವ ಉಡುಗೊರೆ ರಕ್ತವನ್ನು ದಾನಮಾಡುವ ವ್ಯಕ್ತಿಗಳಿಗೆ ಧನ್ಯವಾದವನ್ನು ಈ ದಿನದಂದು ಅರ್ಪಿಸಲಾಗುತ್ತದೆ.
ವಿಶ್ವದ ಅರ್ಧದಷ್ಟು ರಾಷ್ಟ್ರಗಳಲ್ಲಿಂದು ರಕ್ತದ ಕೊರತೆ ಇದ್ದು, ಕೊರತೆಯನ್ನು ನೀಗಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
ಪ್ರತಿ ವರ್ಷ ರಕ್ತದಾನದಿಂದ ಮಿಲಿಯನ್‌ಗಳಷ್ಟು ಜೀವಗಳು ಉಳಿಯುತ್ತವೆ.
ರಕ್ತದ ಸಾರ್ವತ್ರಿಕ ಅವಶ್ಯಕತೆ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿಯನ್ನು ಸಾಧಿಸಲು, ಸ್ವಯಂ ಪ್ರೇರಿತ ರಕ್ತದಾನ ನಿರ್ವಹಿಸುವ ನಿರ್ಣಾಯಕ ಪಾತ್ರಗಳ ಕುರಿತು ಜಾಗೃತಿ ಮೂಡಿಸಲು ಈ ಬಾರಿಯ ಧ್ಯೇಯ ವಾಕ್ಯ ಗಿವ್ ದಿ ಬ್ಲಡ್ ಆಂಡ್ ಕೀಪ್ ದಿ ವಲ್ಡ್ ಬೀಟಿಂಗ್ ಆಗಿದ್ದು ರಕ್ತ ನೀಡಿ ಮತ್ತು ಜಗತ್ತನ್ನು ಸೋಲಿನಿಂದ ಪಾರುಮಾಡಿ ಎಂಬುದಾಗಿದೆ.
ಎ.ಬಿ.ಓ. ಎಂಬ ರಕ್ತ ಗುಂಪು ಪದ್ಧತಿಯ ಸಂಶೋಧನೆ ನಡೆಸಿ ನೋಬೆಲ್ ಬಹುಮಾನ ಪಡೆದ ಕಾರ್ಲ ಲ್ಯಾಂಡ್‌ಸ್ಟೀನರ್ ((Karl Land Steiner) ಎಂಬ ವಿಜ್ಞಾನಿಯ ಜನ್ಮ ದಿನಾಚರಣೆ (೧೪ ಜೂನ್ ೧೮೬೮) ಯ ಅಂಗವಾಗಿ ಪ್ರತಿವರ್ಷ ಜೂನ್ ೧೪ ಅನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆಯ ೧೯೨ಕ್ಕೂ ಹೆಚ್ಚಿನ ಸದಸ್ಯ ರಾಷ್ಟ್ರಗಳು ಆಚರಿಸುತ್ತವೆ.
ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೇ ಸ್ವಯಂ ಪ್ರೇರಣೆಯಿಂದ ನೀಡುವುದಕ್ಕೆ ರಕ್ತದಾನ ಎನ್ನುತ್ತಾರೆ.
ವರ್ಷವಿಡೀ ರಕ್ತಕ್ಕೆ ನಿರಂತರ ಬೇಡಿಕೆ ಇರುತ್ತದೆ. ಇದಕ್ಕೆ ಕಾರಣ ನಿರಂತರವಾಗಿ ತುರ್ತು ಚಿಕಿತ್ಸೆ, ದುರ್ಘಟನೆಗಳ, ಅಪಘಾತ ಸಂದರ್ಭಗಳು ಬರುತ್ತಿರುತ್ತವೆ. ಜೊತೆಗೆ ಕ್ಯಾನ್ಸರ್ ರೋಗಿಗಳು, ಗರ್ಭಿಣಿ ಸ್ರೀಯರು, ತಲಸ್ಮೀಯಾ, ಹಿಮೋಫಿಲಿಯಾ ಮುಂತಾದ ರೋಗಿಗಳೆಲ್ಲರಿಗೂ ರಕ್ತದ ಅವಶ್ಯಕತೆ ಇರುತ್ತದೆ.

ರಕ್ತದ ಮಹತ್ವ :
*ರಕ್ತಕ್ಕೆ ಪರ್‍ಯಾಯವಾದ ವಸ್ತು ಇಲ್ಲ.
*ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ.
*ರಕ್ತವನ್ನು ಮನುಷ್ಯನ ದಾನದಿಂದ ಮಾತ್ರ ಪಡೆಯಬಹುದು.
*ರಕ್ತದಾನ ಮಾಡುವುದು ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ರೋಗಿಗಳು ಮತ್ತು ಗಾಯಗೊಂಡವರನ್ನು ಬದುಕಿಸಲು ಸಾಧ್ಯ.
*ರಕ್ತದಾನ ಮಾಡಿದ ಕೆಲವೇ ಕ್ಷಣದಲ್ಲಿ ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿ ಪ್ರಾರಂಭವಾಗಿ ೨೪ ಗಂಟೆಯೊಳಗೆ ದಾನಮಾಡಿದ ಪ್ರಮಾಣದಷ್ಟೇ ರಕ್ತ ಪುನರ್ ಉತ್ಪತ್ತಿಯಾಗುತ್ತದೆ.
*ಒಂದೆರಡು ವಾರದಲ್ಲಿ ರಕ್ತದ ಎಲ್ಲಾ ಅಂಶಗಳು ದಾನಿಯ ರಕ್ತದಲ್ಲಿ ಸಂಪೂರ್ಣವಾಗಿ ತುಂಬಿಕೊಳ್ಳುತ್ತದೆ.
*ರಕ್ತದಾನ ಮಾಡುವಾಗ ಹೆಚ್ಚು ನೋವು ಆಗದು. ಕೇವಲ ಒಂದು ಚುಚ್ಚುಮದ್ದು ತೆಗೆದುಕೊಂಡಂತೆ ಆಗುತ್ತದೆ.
*ರಕ್ತದಾನ ಮಾಡಲು ಮತ್ತು ಸುಧಾರಿಸಿಕೊಳ್ಳಲು ಒಟ್ಟು ಸೇರಿ ೨೦ ನಿಮಿಷಕ್ಕೂ ಹೆಚ್ಚಿನ ಸಮಯ ಬೇಕಾಗದು.

ಯಾರು ರಕ್ತದಾನ ಮಾಡಬಹುದು ?
*ಹೆಣ್ಣು ಗಂಡೆಂಬ ಬೇಧವಿಲ್ಲದೇ ೧೮ ರಿಂದ ೬೦ ವರ್ಷದ ಒಳಗಿರುವ ಎಲ್ಲ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು.
*ಗಂಡಸರು ೩ ತಿಂಗಳಿಗೊಮ್ಮೆ ಹಾಗೂ ಹೆಂಗಸರು ೪ ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
*ರಕ್ತದಾನಿಯ ತೂಕ ಕನಿಷ್ಠ ೪೫ ಕಿಲೋ ಗ್ರಾಂ. ಗಿಂತ ಹೆಚ್ಚಿಗೆ ಇರಬೇಕು.
*ರಕ್ತದಾನಿಯಲ್ಲಿ ರಕ್ತದ ಹಿಮೋಗ್ಲೋಬಿನ್ ಅಂಶ ೧೨.೫ ಗ್ರಾಂ. ಗಿಂತ ಅಧಿಕವಿರಬೇಕು.

ಯಾರು ರಕ್ತದಾನ ಮಾಡಬಾರದು ?
*ಯಾವುದಾದರೂ ಕಾಯಿಲೆಯಿಂದ ಅಥವಾ ಅನಾರೋಗ್ಯದಿಂದ ನರಳುತ್ತಿರುವ ವ್ಯಕ್ತಿಗಳು ರಕ್ತದಾನ ಮಾಡಬಾರದು.
*ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆ ಮಾಡಿದಾಗ ರಕ್ತದಾನ ಮಾಡಬಾರದು.
*ಮಹಿಳೆಯರು ತಿಂಗಳ ಋತುಚಕ್ರದ ಸಮಯದಲ್ಲಿ, ಗರ್ಭಿಣಿಯರಾಗಿದ್ದಾಗ, ಎದೆ ಹಾಲು ಉಣಿಸುತ್ತಿರುವಾಗ, ಮತ್ತು ಹೆರಿಗೆಯ ನಂತರದ ೬ ತಿಂಗಳು ರಕ್ತದಾನ ಮಾಡಬಾರದು.
*ಯಾವುದೇ ವ್ಯಕ್ತಿ ಕಾಯಿಲೆಯ ವಿರುದ್ಧ ಲಸಿಕೆ ಪಡೆದಿದ್ದರೇ, ಅಂತಹ ವ್ಯಕ್ತಿ ಲಸಿಕೆ ಪಡೆದ ೪ ವಾರಗಳ ವರೆಗೆ ರಕ್ತದಾನ ಮಾಡಬಾರದು.
*ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪೆಡದಿದ್ದರೆ, ಚಿಕಿತ್ಸೆ ಪಡೆದ ೩ ತಿಂಗಳವರೆಗೆ ರಕ್ತದಾನ ಮಾಡಬಾರದು.
*ಆಸ್ಪರಿನ್ ಗುಳಿಗೆ ಸೇವಿಸಿದ್ದರೆ, ಅಂತಹ ವ್ಯಕ್ತಿ ಮಾತ್ರೆ ಸೇವಿಸಿದ ನಂತರ ೩ ದಿನ ರಕ್ತದಾನ ಮಾಡಬಾರದು.
*ಯಾವುದೇ ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಅಂತಹವರು ಮುಂದಿನ ೬ ತಿಂಗಳ ವರೆಗೆ ಮತ್ತು ಲಘು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವರಿದ್ದರೆ ಮುಂದಿನ ಮೂರು ತಿಂಗಳವರೆಗೆ ರಕ್ತದಾನ ಮಾಡಬಾರದು.
*ರಕ್ತ ಹೀನತೆ, ಕ್ಷಯ, ಅಧಿಕ ರಕ್ತದೊತ್ತಡ್ ಕಾಮಾಲೆ, ಬಿಳಿಕಾಮಲೆ, ಎಚ್.ಎಚ್.ವಿ. ರೋಗವಿರುವವರು ರಕ್ತದಾನ ಮಾಡಬಾರದು.

ರಕ್ತದಾನ ಮಾಡುವುದರಿಂದ ದಾನಿಗಳಿಗೆ ಆಗುವ ಪ್ರಯೋಜನ :
* ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸರಕ್ತ ಉತ್ಪತ್ತಿಗೆ ಪ್ರಚೋದನೆ ಲಭಿಸುತ್ತದೆ.
* ದೇಹದಲ್ಲಿ ನವ ಶಕ್ತಿ ಚಾಲನೆಯಿಂದ ಕಾರ್‍ಯತತ್ಪರತೆ ಮತ್ತು ಉತ್ಸಾಹ ಹಾಗೂ ಜ್ಞಾಪನ ಶಕ್ತಿ ವೃದ್ಧಿಯಾಗುತ್ತದೆ.
* ರಕ್ತದಾನ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯವಾಗುತ್ತದೆ.
* ಹೃದಯಾಘಾತವನ್ನು ೮೦% ಕ್ಕಿಂತ ಜಾಸ್ತಿ ತಡೆಯಲು ಸಹಾಯಕಾರಿ.
* ರಕ್ತದೊತ್ತಡ ಇತರೆ ಕೆಲರೋಗಗಳನ್ನು ತಡೆಯಲು ಸಹಾಯಕಾರಿಯಾಗಿದೆ.
ರಕ್ತಕ್ಕೆ ಪರ್‍ಯಾಯ ವಸ್ತು ಇಲ್ಲ ವಿಜ್ಞಾನ ಎಷ್ಟೇ ಮುಂದುವರೆದರೂ ರಕ್ತಕ್ಕೆ ಬದಲಿ ಸಂಯೋಜನೆ ನಿರ್ಮಿಸಲು ಈವರೆಗೆ ಸಾಧ್ಯವಾಗಿಲ್ಲ. ಮನುಷ್ಯನ ದೇಹದೆಲ್ಲಡೆ ಸಂಚರಿಸುತ್ತ ಜೀವವನ್ನೇ ಹಿಡಿದುಕೊಂಡಿರುವ ಕೆಂಪುವರ್ಣದ ದ್ರವವೇ ರಕ್ತವಾಗಿದೆ. ನಾವು ಕೊಡುವ ಒಂದು ಬಾಟಲ್ ರಕ್ತ ಒಂದು ಜೀವವನ್ನು ಉಳಿಸಲು ಸಾಧ್ಯ. ರಕ್ತದಾನ ಮಾಡುವುದರಿಂದ ಸಮಸ್ಯೆಗಳು ಉಲ್ಬಣವಾಗುತ್ತವೆ ಎಂಬ ಗೊಡ್ಡು ನಂಬಿಕೆ ಹಾಗೂ ತಪ್ಪು ಕಲ್ಪನೆ ಇಂದಿನ ಕಾಲದಲ್ಲಿಯೂ ಇದೆ. ಜೊತೆಗೆ ಕೆಲವರಲ್ಲಿ ಈ ಕುರಿತು ಗೊಂದಲ ಮತ್ತು ಆತಂಕವೂ ಇದೆ. ಆದರೆ ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆಯೋ ಹೊರತು ಆರೋಗ್ಯ ಕ್ಷೀಣಿಸುವದಿಲ್ಲ. ಆದ್ದರಿಂದ ರಕ್ತದಾನದ ಕುರಿತು ಜನರಲ್ಲಿ ಜಾಗೃತಿ ಉಂಟು ಮಾಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ದೇಶ ವಿದೇಶಗಳಲ್ಲಿ ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಹಲವಾರು ಸ್ವಯಂ ಸೇವಾ ಸಂಘಟನೆಗಳು, ಸಂಘ ಸಂಸ್ಥೆಗಳು, ರಕ್ತದಾನದ ಬಗೆಗೆ ಜಾಗೃತಿ ಮೂಡಿಸುತ್ತಾ ಮುನ್ನಡೆಯುತ್ತಿದ್ದಾರೆ. ಕೆಲವು ಸೇವಾ ಮನೋಭಾವದ ವ್ಯಕ್ತಿಗಳು, ವಿವಿಧ ರಕ್ತದ ಗುಂಪುಗಳ ದಾನಿಗಳ ವಿವರಗಳನ್ನು ಸಂಗ್ರಹಿಸಿಟ್ಟು ಕೊಂಡಿದ್ದು, ಅಗತ್ಯ ಇರುವವರಿಗೆ ಮಾಹಿತಿ ಬಂದ ಕ್ಷಣಾರ್ಥದಲ್ಲಿ ರಕ್ತ ದಾನ ಮಾಡಿ ಜೀವ ಉಳಿಸುವ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಬ್ಲಡ್ ಬ್ಯಾಂಕುಗಳು ವಿವಿಧ ಗುಂಪಿನ ರಕ್ತವನ್ನು ಸಂಗ್ರಹಿಸಿ, ಸೇವೆ ಸಲ್ಲಿಸುತ್ತಿವೆ. ಕೆಲವು ವ್ಯಕ್ತಿಗಳು ನಲವತ್ತಕ್ಕೂ ಹೆಚ್ಚಿನ ಸಲ ರಕ್ತದಾನ ಮಾಡಿದ್ದಾರೆ.
ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸುಮಾರು ಐದೂವರೆ ಲೀಟರ್‌ನಷ್ಟು ರಕ್ತವಿರುತ್ತದೆ. ರಕ್ತದಾನದ ವೇಳೆ ಕೇವಲ ೩೫೦ ಮಿ.ಲಿ. ರಕ್ತವನ್ನು ಸ್ವೀಕರಿಸಲಾಗುತ್ತದೆ. ಇದರಿಂದ ದಾನಿಗಳಿಗೆ ಯಾವುದೇ ಅಪಾಯವಿಲ್ಲ. ಒಂದು ಬಾರಿ ದಾನಿಗಳಿಂದ ಶೇಖರಿಸಲ್ಪಟ್ಟ ರಕ್ತವನ್ನು ೩೫ ದಿನಗಳವರೆಗೆ ಉಪಯೋಗಿಸಬಹುದಾಗಿದೆ. ರಕ್ತದಾನದ ಮೂಲಕ ಇನ್ನೊಬ್ಬರ ಜೀವನದಲ್ಲಿ ಚೈತನ್ಯ ತರುವ ಕಾರ್ಯ ಮಾಡಲು ನಾವೇಲ್ಲರೂ ಅಣಿಯಾಗೋಣ, ಸನ್ನದ್ದರಾಗೋಣ ಮತ್ತು ಜಾಗೃತಿ ಮೂಡಿಸೋಣ.
-ಬಿ.ಎಸ್.ಮಾಳವಾಡ ನಿವೃತ್ತ ಗ್ರಂಥಪಾಲಕರು

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 6

ನಿಮ್ಮ ಕಾಮೆಂಟ್ ಬರೆಯಿರಿ

advertisement