ಬೆಂಗಳೂರು; ಚಂದನವನದ ನಟ ಸಂಚಾರಿ ವಿಜಯ್ ಅವರ ಅಗಲಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಕಿಚ್ಚ ಸುದೀಪ್ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯರು ಸಂಚಾರಿ ವಿಜಯ ಅವರು ವೈದ್ಯಕೀಯವಾಗಿ ಮರಣ ಹೊಂದಿಲ್ಲ, ಅವರಿಗೆ ಜೀವ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ನ್ಯೂಸ್ 18 ಕನ್ನಡ.ಕಾಮ್ ವರದಿ ಮಾಡಿದೆ.
ಸಂಚಾರಿ ವಿಜಯ್ ಅವರ ಬಗ್ಗೆ ಇಲ್ಲಸಲ್ಲದ ಸುದ್ದಿಗಳು ಹರಿದಾಡುತ್ತಿವೆ. ಹೀಗಾಗಿಯೇ ನಾನೇ ಬಂದು ಹೇಳುತ್ತಿದ್ದೇನೆ. ಇನ್ನೂ ಅವರು ಜೀವಂತವಾಗಿದ್ದಾರೆ. ಆದರೆ ಮಿದುಳು ಮಾತ್ರ ನಿಷ್ಕ್ರಿಯಗೊಂಡಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಮರಣ ಎಂದು ನಿರ್ಧರಿಸಲಾಗುವುದಿಲ್ಲ. ಈಗಿರುವ ಪರಿಸ್ಥಿತಿಯಲ್ಲಿ ಮಿದುಳು ಸಾಯಲು ಇನ್ನೂ 4-5 ತಾಸುಗಳು ಬೇಕಾಗುತ್ತದೆ. ಅಷ್ಟರಲ್ಲಿ ನಾವು ಕೆಲವು ಪರೀಕ್ಷೆಗಳನ್ನು ಮಾಡಬೇಕಿದೆ ಎಂದು ಅಪೋಲೋ ಆಸ್ಪತ್ರೆಯಲ್ಲಿ ವೈದ್ಯ ಅರುಣ್ ನಾಯ್ಕ್ ಸ್ಪಷ್ಟನೆ ನೀಡಿದ್ದಾರೆ.
ಬ್ರೈನ್ ಡೆಡ್ ಆದ ಮೇಲೂ ಮನುಷ್ಯರು ಹಲವಾರು ಗಂಟೆಗಳ ಕಾಲ ಜೀವಂತವಾಗಿರುತ್ತಾರೆ. ಹೃದಯದ ಬಡಿತ ನಿಂತ ಮೇಲೆ ಮರಣ ಎಂದು ಘೋಷಿಸಲಾಗುತ್ತದೆ. ಹೀಗಾಗಿಯೇ ಮೆದುಳು ನಿಷ್ಕ್ರಿಯಗೊಂಡಿರುವ ಸಂಚಾರಿ ವಿಜಯ ಅವರಿಗೆ ನಮ್ಮ ದೃಷ್ಟಿಯಲ್ಲಿ ಇನ್ನೂ ಜೀವವಿದೆ. ಇನ್ನೂ ಅವರಿಗೆ ಬ್ರೈನ್ ಡೆಡ್ ಆಗಿಲ್ಲ. ಒಮ್ಮೆ ಬ್ರೈನ್ ಡೆಡ್ ಆದ ನಂತರ ಮತ್ತೆ ಅವರು ಮೊದಲಿನಂತೆ ಆಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಮನೆಯವರ ನಿರ್ಧಾರದಂತೆ ಅಂಗಾಂಗ ದಾನದ ಪ್ರಕ್ರಿಯೆಗೆ ಮುಂದಾಗುತ್ತೇವೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಜಯ್ ಇನ್ನೂ ಉಸಿರಾಡುತ್ತಿದ್ದಾರೆ. ಮೊದಲ ಆ್ಯಪ್ನಿಯಾ ಟೆಸ್ಟ್ ಮಾಡಿದ್ದೇವೆ. ಎರಡನೇ ಆ್ಯಪ್ನಿಯಾ ಟೆಸ್ಟ್ ಮಾಡಬೇಕು. ಈ ಪರೀಕ್ಷೆಯಲ್ಲಿ ಅವರ ನಿಷ್ಕ್ರಿಯಗೊಂಡಿರುವ ಮೆದುಳು ಡೆಡ್ ಆಗಿದೆಯಾ ಎಂದು ತಿಳಿಯುತ್ತದೆ. ಬ್ರೈನ್ ಡೆಡ್ ಆಗಿದ್ದರೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಅಂಗಾಂಗ ದಾನ ಪ್ರಕ್ರಿಯೆಗೆ ಮುಂದಾಗುತ್ತೇವೆ. ಜೀವನಸಾರ್ಥಕತೆ ಸಂಸ್ಥೆಯವರು ಬಂದು ಯಾವ ಅಂಗಗಳು ದಾನ ಮಾಡಲು ಯೋಗ್ಯವಿದೆ ಎಂದು ನಿರ್ಧರಿಸುತ್ತಾರೆ. ಅವರ ನಿರ್ಧಾರದಂತೆ ಮುಂದೆ ಅಂಗಾಂಗ ದಾನದ ಪ್ರಕ್ರಿಯೆ ನಡೆಯುತ್ತದೆ ಎಂದು ಅರುಣ್ ನಾಯ್ಕ್ ಸ್ಪಷ್ಟಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಹಾಗೂ ನಟ ಜಗ್ಗೇಶ್ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ್ದು, ವಿಜಯ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ನಂತರ ಮಾಧ್ಯಮಗಳ ಜೊತೆ ಮಾತನಾಡಿದ್ದು, ದೇವರ ದಯೆಯಿಂದ ವಿಜಯ್ ಅವರು ಬದುಕಿ ಬರಲೆಂದು ಪ್ರಾರ್ಥಿಸಿದ್ದಾರೆ.
ವಿಜಯ ಅವರ ಸ್ನೇಹಿತರಾದ ನೀನಾಸಂ ಸತೀಶ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, ವಿಜಯ್ ಇನ್ನಿಲ್ಲ ಎಂದು ಹೇಳಬಾರದು. ಅವನ ಹೃದಯ ಇನ್ನೂ ಮಿಡಿಯುತ್ತಿದೆ ಎಂದು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ