ಅದಾನಿ ಸಮೂಹದ ಬಹುತೇಕ ಷೇರುಗಳ ಜೂನ್ 14ನೇ ತಾರೀಕಿನ ಸೋಮವಾರ ನಷ್ಟವನ್ನು ಅನುಭವಿಸಿದವು. ಮಾಧ್ಯಮಗಳ ವರದಿಯಂತೆ, ಅದಾನಿ ಕಂಪೆನಿಗಳ ಷೇರುಗಳನ್ನು ಹೊಂದಿರುವ ಮೂರು ಫಾರಿನ್ ಪೋರ್ಟ್ಫೋಲಿಯೋ ಇನ್ವೆಸ್ಟರ್ಸ್ (ಎಫ್ಪಿಐ) ಖಾತೆಗಳನ್ನು ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಡಿಟರಿ ಲಿಮಿಟೆಡ್ (ಎನ್ಎಸ್ಡಿಎಲ್)ನಿಂದ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿತ್ತು. ಈ ವರದಿಗೆ ಅದಾನಿ ಎಂಟರ್ಪ್ರೈಸಸ್ ಸ್ಪಷ್ಟನೆ ನೀಡಿದ್ದು, “ಮಾಧ್ಯಮಗಳ ವರದಿಗಳು ಭಾರೀ ತಪ್ಪಿನಿಂದ ಕೂಡಿವೆ. ಉದ್ದೇಶಪೂರ್ವಕವಾಗಿ ಹೂಡಿಕೆದಾರ ಸಮುದಾಯವನ್ನು ದಾರಿ ತಪ್ಪಿಸುವ ಸಲುವಾಗಿ ಹೀಗೆ ಮಾಡಲಾಗಿದೆ,” ಎನ್ನಲಾಗಿದೆ. ಅಂದ ಹಾಗೆ ಈ ಮೂರು ವಿದೇಶಿ ಫಂಡ್ಗಳು ಸೇರಿ ಅದಾನಿ ಸಮೂಹದ ನಾಲ್ಕು ಕಂಪೆನಿಗಳಲ್ಲಿ 43,500 ಕೋಟಿ ಮೌಲ್ಯದ ಷೇರುಗಳನ್ನು ಹೊಂದಿವೆ.
ಈ ಫಂಡ್ಗಳ ಡಿಮ್ಯಾಟ್ ಅಕೌಂಟ್ಗಳ ಸ್ಥಿತಿಗೆ ಸಂಬಂಧಿಸಿದಂತೆ ಮತ್ತು ಜೂನ್ 14ನೇ ತಾರೀಕು 2021ನೇ ಇಸವಿಯಲ್ಲಿ ನೀಡಿರುವ ಲಿಖಿತ ಸ್ಪಷ್ಟನೆಯಂತೆ, ಯಾವ ಡಿಮ್ಯಾಟ್ ಖಾತೆಯಲ್ಲಿ ಕಂಪೆನಿಯ ಷೇರುಗಳಿವೆಯೋ ಅದನ್ನು ಸ್ಥಗಿತಗೊಳಿಸಿಲ್ಲ. ಇನ್ನು ಮಾಧ್ಯಮಗಳ ವರದಿಗೆ ಸಂಬಧಿಸಿದಂತೆ ಕಂಪೆನಿ ಮುಂದುವರಿದು ತಿಳಿಸಿದ್ದು, ಇದರಿಂದಾಗಿ ಹೂಡಿಕೆದಾರರಿಗೆ ಸರಿಪಡಿಸಲಾಗದಂಥ ಆರ್ಥಿಕ ನಷ್ಟ ದೊಡ್ಡ ಮಟ್ಟದಲ್ಲಿ ಸಂಭವಿಸುತ್ತದೆ ಹಾಗೂ ಸಮೂಹದ ವರ್ಚಸ್ಸಿಗೆ ಪೆಟ್ಟು ಬೀಳುತ್ತದೆ ಎಂದು ಎಂದು ಹೇಳಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಅಲ್ಪ ಪ್ರಮಾಣದ ಹೂಡಿಕೆದಾರರ ಹಿತವನ್ನು ಕಾಪಾಡಲು ಈ ಪತ್ರವನ್ನು ನೀಡುತ್ತಿದ್ದೇವೆ ಎಂದು ಕಂಪೆನಿಯಿಂದ ತಿಳಿಸಿದೆ.
ಅದಾನಿ ಸಮೂಹದ ಕಂಪೆನಿಗಳ ಷೇರುಗಳು ಸೋಮವಾರ ಶೇ 5ರಿಂದ ಶೇ 25ರಷ್ಟು ಕುಸಿತ ಕಂಡಿವೆ, ಅದಾನಿ ಎಂಟರ್ಪ್ರೈಸಸ್ ಷೇರಿನ ಬೆಲೆ ದಶಕದಲ್ಲೇ ಗರಿಷ್ಠ ಮಟ್ಟದ ಕುಸಿತವಾದ ಶೇ 25ರಷ್ಟು ಇಳಿಕೆಗೊಂಡಿದೆ. ಸ್ವಲ್ಪ ಮಟ್ಟಿಗೆ ನಷ್ಟದಿಂದ ಚೇತರಿಸಿಕೊಳ್ಳುವ ಮುನ್ನ ನಿಫ್ಟಿ- 50 ಸೂಚ್ಯಂಕದಲ್ಲಿ ಅದಾನಿ ಪೋರ್ಟ್ಸ್ ಅಂಡ್ ಎಕನಾಮಿಕ್ ಝೋನ್ ಶೇ 19ರಷ್ಟು ಕುಸಿದಿತ್ತು. ಎನ್ಎಸ್ಡಿಎಲ್ನಿಂದ ಅಲ್ಬುಲಾ ಇನ್ವೆಸ್ಟ್ಮೆಂಟ್ ಫಂಡ್, ಕ್ರೆಸ್ಟಾ ಫಂಡ್, ಎಪಿಎಂಎಸ್ ಇನ್ವೆಸ್ಟ್ಮೆಂಟ್ ಫಂಡ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಆ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಸಹ ವೆಬ್ಸೈಟ್ನಲ್ಲಿ ತಿಳಿಸಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ. ಮಾರ್ಚ್ 31, 2020ಕ್ಕೆ ಅನ್ವಯ ಆಗುವಂತೆ ಈ ಮೂರು ಫಂಡ್ಗಳು ಅದಾಗಿ ಸಮೂಹದ ಐದು ಕಂಪೆನಿಗಳಲ್ಲಿ ಶೇ 2.1ರಿಂದ ಶೇ 8.91ರಷ್ಟು ಷೇರಿನ ಪಾಲು ಹೊಂದಿವೆ. ಈ ಅಂಶವನ್ನು ಹೂಡಿಕೆದಾರರ ವಾರ್ಷಿಕ ಸಭೆಯಲ್ಲಿ ತಿಳಿಸಲಾಗಿತ್ತು.
ಕುಸಿದ ಷೇರು ಮೌಲ್ಯ:
ಕಂಪನಿಯಿಂದ ಈ ಸ್ಪಷ್ಟನೆ ಹೊರಬೀಳುವಷ್ಟರಲ್ಲಿ ಷೇರುಪೇಟೆಯಲ್ಲಿ ಅದಾನಿ ಷೇರುಗಳು ಶೇ.25ರಷ್ಟು ಕುಸಿತ ಕಂಡಿವೆ. ಮಧ್ಯಾಹ್ನದ ಹೊತ್ತಿಗೆ, ಅದಾನಿ ಎಂಟರ್ಪ್ರೈಸಸ್ ಷೇರುಗಳು ಶೇ.24.99ರಷ್ಟು, ಅದಾನಿ ಪೋರ್ಟ್ಸ್ ಆಯಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಷೇರುಗಳು ಶೇ. 18.75 ಕುಸಿತ ಕಂಡವು. ಇದರೊಂದಿಗೆ, ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್ಮಿಷನ್ ಷೇರುಗಳು ಶೇ. 5ರಷ್ಟು ಇಳಿಮುಖವಾದರೆ, ಅದಾನಿ ಪವರ್ ಷೇರುಗಳು ಶೇ. 4.99ರಷ್ಟು ಕುಸಿದವು. ಪರಿಣಾಮವೆಂಬಂತೆ, ಅದಾನಿ ಕಂಪನಿಗೆ ಬರೋಬ್ಬರಿ 55,692 ಕೋಟಿ ರೂ. ನಷ್ಟವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ