

ಡೆಹ್ರಾಡೂನ್ : ಹರಿದ್ವಾರ–ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆಯೊಂದು ಬೈಕ್ ಸವಾರನ ಮೇಲೆ ಎರಡು ಬಾರಿ ಕಾಲಿಟ್ಟರೂ ಆತ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಆನೆಯ ಕಾಲಿನಡಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡಿದ ಬೈಕ್ ಸವಾರ, ಆನೆ ಅಲ್ಲಿಂದ ತೆರಳುತ್ತಿದ್ದಂತೆಯೇ ಎದ್ದು ನಿಂತಿರುವ ದೃಶ್ಯ ಸೆರೆಯಾಗಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಗುರುವಾರ ಮುಂಜಾನೆ ನೇಪಾಳಿ ಫಾರ್ಮ್ ಸಮೀಪ ಈ ಘಟನೆ ನಡೆದಿದೆ. ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ರಸ್ತೆಯಲ್ಲೇ ಕಾಡಾನೆ ಎದುರಾಗಿದೆ. ಈ ವೇಳೆ ಆನೆಯು ಬೈಕ್ ಸವಾರನ ಹೊಟ್ಟೆ ಮತ್ತು ಎದೆಯ ಮೇಲೆ ಎರಡು ಬಾರಿ ಕಾಲಿಟ್ಟಿದೆ. ಪರಿಣಾಮ ಆತ ಆನೆಯ ಕಾಲುಗಳ ಕೆಳಗೆ ಸಿಲುಕಿಕೊಂಡಿದ್ದಾನೆ.
ಆನೆಯ ಕಾಲ್ತುಳಿತಕ್ಕೆ ಸಿಲುಕಿದ ವ್ಯಕ್ತಿ ಬದುಕುಳಿಯುವುದು ಅನುಮಾನ ಎಂಬಂತಿದ್ದರೂ, ಅಚ್ಚರಿಯ ಘಟನೆಯೊಂದು ನಡೆದಿದೆ. ಆನೆ ಅಲ್ಲಿಂದ ಮುಂದೆ ಸಾಗುತ್ತಿದ್ದಂತೆಯೇ ಬೈಕ್ ಸವಾರ ತಕ್ಷಣವೇ ಎದ್ದು ನಿಂತಿದ್ದಾನೆ. ಆತನ ದೇಹದ ಮೇಲೆ ಯಾವುದೇ ಗಾಯಗಳು ಕಾಣಿಸದಿರುವುದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.
ಕ್ಯಾಬ್ ಚಾಲಕನ ಕ್ಯಾಮೆರಾದಲ್ಲಿ ಸೆರೆಯಾದ ಘಟನೆ
ಈ ಭಯಾನಕ ಘಟನೆಯನ್ನು ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಕ್ಯಾಬ್ ಚಾಲಕ ಶಿವ ಶರ್ಮಾ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನವೆಂಬರ್ 12ರಂದು ಮುಂಜಾನೆ 3:46ಕ್ಕೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬಳಿಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಘಟನೆಗೆ ಪ್ರತಿಕ್ರಿಯಿಸಿರುವ ಶಿವ ಶರ್ಮಾ, ಹರಿದ್ವಾರ–ಡೆಹ್ರಾಡೂನ್ ನಡುವಿನ ಹೆದ್ದಾರಿಯಲ್ಲಿ ಸಂಚಾರ ಸಾಮಾನ್ಯವಾಗಿ ಸುಗಮವಾಗಿದ್ದರೂ, ರಸ್ತೆಯಲ್ಲಿ ಯಾವ ಸಂದರ್ಭದಲ್ಲಿ ಏನು ಸಂಭವಿಸುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಭಾಗದಲ್ಲಿ ಕಾಡಾನೆಗಳು ಆಗಾಗ್ಗೆ ರಸ್ತೆಗೆ ಬರುತ್ತವೆ. ಇಂತಹ ಅಪಾಯಕಾರಿ ಸನ್ನಿವೇಶದಿಂದ ಬೈಕ್ ಸವಾರ ಪಾರಾಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಆತ ಅತ್ಯಂತ ಅದೃಷ್ಟಶಾಲಿ ಎಂದು ಅವರು ಹೇಳಿದ್ದಾರೆ.


ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ಸಮೀಪ ಆನೆಗಳ ಸಂಚಾರ ಸಾಮಾನ್ಯ
ಹರಿದ್ವಾರ–ಡೆಹ್ರಾಡೂನ್ ಹೆದ್ದಾರಿಯ ಈ ಪ್ರದೇಶವು ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ಸಮೀಪದಲ್ಲಿದೆ. ಈ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳು ಸೇರಿದಂತೆ ಹಲವು ವನ್ಯಜೀವಿಗಳು ವಾಸಿಸುತ್ತಿವೆ. ಹೀಗಾಗಿ ಈ ಭಾಗದ ರಸ್ತೆಗಳ ಸುತ್ತಮುತ್ತ ಕಾಡುಪ್ರಾಣಿಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ವಿಶೇಷವಾಗಿ ಮುಂಜಾನೆ ಮತ್ತು ತಡರಾತ್ರಿ ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಕಾಡಾನೆಗಳು ರಸ್ತೆಯಲ್ಲಿ ಕಾಣಿಸಿಕೊಂಡಾಗ ವಾಹನಗಳ ವೇಗವನ್ನು ಕಡಿಮೆ ಮಾಡಬೇಕು. ಆನೆಗಳ ಸಮೀಪಕ್ಕೆ ಹೋಗುವ ಪ್ರಯತ್ನ ಮಾಡಬಾರದು. ಅವುಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ವಾಹನ ಸವಾರರಿಗೆ ಸಲಹೆ ನೀಡಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ