ಬೆಂಗಳೂರು: ಕರ್ನಾಟಕದ ರಾಜಧಾನಿಯಲ್ಲಿ ತೈಲ ದರ ಗಗನಕ್ಕೇರಿದ್ದು, ಲೀಟರ್ ಪೆಟ್ರೋಲ್ ಸಾರ್ವಕಾಲಿಕ ದಾಖಲೆ ಕಂಡಿದೆ. ಬೆಂಗಳೂರಿನಲ್ಲಿ ಶುಕ್ರವಾರ ಪೆಟ್ರೋಲ್ ದರ 100 ರೂ.ಗಳ ಗಡಿ ದಾಟಿದೆ.
ಗುರುವಾರ ರಾತ್ರಿ ಪೆಟ್ರೋಲ್ ದರ ಪರಿಷ್ಕ್ರತಗೊಂಡಿದ್ದು, ಶುಕ್ರವಾರಕ್ಕೆ ಅನ್ವಯಿಸುವಂತೆ 100.23 ರೂ.ಗಳನ್ನು ತಲುಪಿದೆ
ಗುರುವಾರ ಸರ್ಕಾರಿ ಬಂಕ್ ಗಳಲ್ಲಿ ಲೀಟರ್ ಪೆಟ್ರೋಲ್ 99.95 ರೂ.ಗಳು ಹಾಗೂ ಡೀಸೆಲ್ 92.72 ರೂ.ಗಳು ಇದ್ದವು. ಬಳಿಕ ರಾತ್ರಿ ದರ ಪರಿಷ್ಕೃತಗೊಂಡಿದ್ದು, ಈಗಾಗಲೇ ಖಾಸಗಿ ಪೆಟ್ರೋಲ್ ಬಂಕ್ ಗಳಲ್ಲಿ ಈಗಾಗಲೇ ಪೆಟ್ರೋಲ್ ದರ 100 ರೂ.ಗಳ ಗಡಿ ದಾಟಿದೆ.
ಕರ್ನಾಟಕದ ಹಲವು ನಗರಗಳಲ್ಲಿ ಪೆಟ್ರೋಲ್ ದರವು 100 ರೂ.ಗಳಿಗಿಂತ ಹೆಚ್ಚಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಬೆಲೆ ಹೆಚ್ಚಿಸಿದ್ದು, ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ದರ ಶತಕ ತಲುಪಿದೆ.
ದೇಶದಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 26 ರಿಂದ 27 ಪೈಸೆ ಮತ್ತು ಡೀಸೆಲ್ ದರ 28 ರಿಂದ 30 ಪೈಸೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 96.99ಕ್ಕೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರ 87.75 ರೂ ಗೆ ಏರಿಕೆಯಾಗಿದೆ.ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 103.14ಕ್ಕೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರ 95.2ರೂ ಗೆ ಏರಿಕೆಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ