ಮತ್ತೆ ನಾನು ಸಿಎಂ ಆಗಬೇಕೆನ್ನುವುದು ಶಾಸಕರ ವೈಯಕ್ತಿಕ ಅಭಿಪ್ರಾಯ: ಸಿದ್ದರಾಮಯ್ಯ

posted in: ರಾಜ್ಯ | 1

ಕೊಪ್ಪಳ: ಸಿದ್ದರಾಮಯ್ಯ ಅವರೇ ಮುಂದಿನ ಬಾರಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಾಂಗ್ರೆಸ್ ಕೆಲ ಶಾಸಕರು ಹೇಳುತ್ತಿರುವುದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಹೇಳಿದ್ದಾರೆ.
ಕೊಪ್ಪಳದ ಕ್ಷೇತ್ರದಲ್ಲಿ ಜನತೆಗೆ ಕಿಟ್ ವಿತರಿಸಲು  ಸೋಮವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಕೆಲ ಶಾಸಕರು ನಾನು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಬಯಸಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಅದು ಪಕ್ಷದ ಅಭಿಪ್ರಾಯವಲ್ಲ. ನಮ್ಮ ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ. ಮೊದಲು ಚುನಾವಣೆ ನಡೆದು, ಪಕ್ಷಕ್ಕೆ ಬಹುಮತ ಬರಬೇಕು. ನಂತರ ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಯಾರಾಗಬೇಕೆಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರೋ ಅವರ ಅಭಿಪ್ರಾಯ ಹೇಳಿದಾಕ್ಷಣ ಅದು ಪಕ್ಷದ ಅಭಿಪ್ರಾಯ ಆಗುವುದಿಲ್ಲ. ಈ ಬಗ್ಗೆ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ ಎಂದರು.
ಬಿಜೆಪಿ ಶಾಸಕ ಅರವಿಂದ್ ಬೆಲ್ಲದ ಫೋನ್ ಕದ್ದಾಲಿಕೆ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ. ಪೊಲೀಸರಾಗಲಿ, ಸರ್ಕಾರವಾಗಲಿ ಫೋನ್ ಕದ್ದಾಲಿಸುವುದು ಸರಿಯಲ್ಲ. ರಾಮಕೃಷ್ಣ ಹೆಗಡೆ ಕಾಲದಲ್ಲಿ ಫೋನ್ ಕದ್ದಾಲಿಕೆ ಪ್ರಕರಣ ಏನಾಗಿದೆ ಎಂಬುದು ರಾಜ್ಯಕ್ಕೆ ಗೊತ್ತಿದೆ. ಯಾವ ಪಕ್ಷದವರೇ ಆದರೂ ಫೋನ್ ಕದ್ದಾಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ನೀರಾವರಿ ಇಲಾಖೆ ಟೆಂಡರ್ ನಲ್ಲಿ 2 ಸಾವಿರ ಕೋಟಿ ರೂ. ಕಿಕ್ ಬ್ಯಾಕ್ ಪಡೆಯಲಾಗಿದೆ. ಸರ್ಕಾರ ಕೇವಲ ಹಣ ಮಾಡುವಲಲ್ಲಿ ನಿರತವಾಗಿದೆ ಎಂದು ಆಡಳಿತ ಪಕ್ಷವಾದ ಬಿಜೆಪಿ ಶಾಸಕರೇ ಆರೋಪಿಸಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ, ಅರವಿಂದ್ ಬೆಲ್ಲದ, ಎಚ್. ವಿಶ್ವನಾಥ, ಸಿ.ಪಿ. ಯೋಗೀಶ್ವರ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿ, ಆರೋಪಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ಆರೊಪ ಮಾಡುವವರು ನಮ್ಮ ಪಕ್ಷದವರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಲ್ಲಿ‌ ಯಾವುದೇ ಬಣಗಳಿಲ್ಲ, ಭಿನ್ನಾಭಿಪ್ರಾಯಗಳೂ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನನಗೆ ತಿಳಿಸಿಯೇ ದೆಹಲಿಗೆ ಹೋಗಿದ್ದಾರೆ. ಅಲ್ಲಿ ಅವರು ಕರ್ನಾಟಕದ ಉಸ್ತುವಾರಿ ಸುರ್ಜೆವಾಲಾ ಅವರನ್ನು ಭೇಟಿ ಮಾಡುತ್ತಾರೆ. ಬಿಜೆಪಿಯಲ್ಲಿ ಗೊಂದಲ‌ ಇರುವುದಕ್ಕೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದಿದ್ದು. ಈಗಲೂ ನನಗಿರುವ ಮಾಹಿತಿ ಪ್ರಕಾರ ಬರುವ ದಿನಗಳಲ್ಲಿ ಯಡಿಯೂರಪ್ಪ ಅವರು ಮುಖ್ಯಸ್ಥಾನದಿಂದಕೆಳಗಿಳಿಯುವುದು ಪಕ್ಕಾ ಎಂದು ಮತ್ತೊಮ್ಮೆ ಯಡಿಯೂರಪ್ಪ ಸ್ಥಾನದ ಬಗ್ಗೆ ಭವಿಷ್ಯ ನುಡಿದರು.
ಈ ವೇಳೆ ಶಿವರಾಜ ತಂಗಡಗಿ, ಜಮೀರ್ ಅಹ್ಮದ್ ಖಾನ್, ಸುರೇಶ್ ಭೈರತಿ, ಅಶೋಕ್ ಪಟ್ಟಣ, ಪ್ರಕಾಶ ರಾಥೋಡ್, ಅಮರೇಗೌಡ ಬಯ್ಯಾಪುರ ಮೊದಲಾದವರಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

  1. Arunkumar Habbu

    ರಾಜಕಾರಣಿಗಳು ಟೀಕೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಅಪ್ಪ ಅಮ್ಮ ಶಬ್ದಗಳನ್ನು ಬೈಗಳಕ್ಕೆ ಬಳಸುವುದು ಅಸಭ್ಯ ವರ್ತನೆಯ ಪರಮಾವಧಿ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಾಯಕರಿಗೆ ಇಂಥ ವರ್ತನೆ ಶೋಭೆ ತರಲಾರದು..

ನಿಮ್ಮ ಕಾಮೆಂಟ್ ಬರೆಯಿರಿ