ಬಡವರಿಗೆ 10 ಕೆಜಿ ಅಕ್ಕಿ ಕೊಟ್ಟಿದ್ದರೆ ಇವರಪ್ಪನ‌ಮನೆ ಗಂಟು ಹೋಗುತ್ತಿತ್ತಾ?

ಕೊಪ್ಪಳ:ಲಾಕ್ ಡೌನ್ ಮಾಡುವ ಮುನ್ನ ಬಿಪಿಎಲ್‌ ಕುಟುಂಬಗಳಿಗೆ 10 ಸಾವಿರ ಹಣ, 10 ಕೆಜಿ ಉಚಿತ ಪಡಿತರ ಅಕ್ಕಿ ಕೊಡಿ ಎಂದು ಸಲಹೆ ನೀಡಿದೆವು. ನಾನು ಮುಖ್ಯಮಂತ್ರಿ ಇದ್ದಾಗ 7 ಕೆಜಿ ಅಕ್ಕಿ ಉಚಿತವಾಗಿ ಕೊಟ್ಟಿದ್ದೆ. ಇವರು ಕೇವಲ ಎರಡು ಕೆಜಿ ಕೊಡುತ್ತಿದ್ದಾರೆ. ಬಡವರಿಗೆ ಅಕ್ಕಿ ಕೊಟ್ಟಿದ್ದರೆ ಇವರಪ್ಪನ ಮನೆ ಗಂಟು ಹೋಗುತ್ತಿತ್ತಾ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಜನತೆಗೆ ಉಚಿತ ಫುಡ್ ಕಿಟ್ ವಿತರಿಸಿ ಮಾತನಾಡಿದ ಅವರು, ನಾವೇನು ನಮ್ಮ ಮನೆಯಿಂದ ಕೊಡುತ್ತಿರಲಿಲ್ಲ. ಇದು ಜನರ ದುಡ್ಡು, ಜನರಿಗೆ ಕೊಡಲು ಇವರಿಗೇನು ದಾಡಿ? ಇಂತಹ ಸರ್ಕಾರ ಇರಬಾರದು ಎಂದು ವಾಗ್ದಾಳಿ ನಡೆಸಿದರು.
ಎರಡನೇ ಅಲೆ ಬರುತ್ತದೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದರೂ ಸಹ ಈ ಸರ್ಕಾರ ನಿರ್ಲಕ್ಷ್ಯ ಮಾಡಿತು. ಇದರ ಪರಿಣಾಮ ಜನತೆ ಅನುಭವಿಸಬೇಕಾಯಿತು. ಡಬಲ್ ಎಂಜಿನ್ ಸರ್ಕಾರ ಎಂದ ಮೋದಿ ಜನರಿಗೆ ಅಚ್ಛೆ ದಿನ್ ಕೊಡಲಿಲ್ಲ. ಕೆಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಸ್ವರ್ಗ ಸೃಷ್ಟಿಸುತ್ತೇವೆ ಎಂದು ನರಕ‌ ತೋರಿಸಿವೆ. ಸರ್ಕಾರ ರಾಜ್ಯವನ್ನು ಲೂಟಿ ಮಾಡಿ ಹಣ ಮಾಡುತ್ತಿದೆ ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರೆ. ನಾವು ಆರೋಪಿಸುತ್ತಿಲ್ಲ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್, ಡೀಸೆಲ್ ನೂರರ‌ ಗಡಿ ದಾಟಿವೆ ಎಂದು ಹರಿಹಾಯ್ದರು.
ಕಳೆದ ಎರಡು ವರ್ಷದಿಂದ ಕೋವಿಡ್ ಜಗತ್ತನ್ನು ಕಾಡುತ್ತಿದೆ. ಎರಡನೇ ಅಲೆಯಲ್ಲಿ ಹೆಚ್ಚು ಜನತೆ ಪ್ರಾಣ ಕಳೆದುಕೊಂಡಿದ್ದಾರೆ. ಎರಡನೇ ಅಲೆ ತಡೆಯಲು ಈ ಸರ್ಕಾರ ಮುನ್ನೆಚ್ಚರಿಕೆ ವಹಿಸಿದ್ದರೆ ಇಷ್ಟೊಂದು ಜನ ಸಾಯುತ್ತಿರಲಿಲ್ಲ. ಸೋಂಕಿತರಿಗೆ ಆಮ್ಲಜನಕ, ವೆಂಟಿಲೇಟರ್, ರೆಮ್ ಡಿಸಿವಿರ್, ಅಂಬ್ಯುಲೆನ್ಸ್ ಗಳು ಸರಿಯಾಗಿ ಸಿಗಲಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಒಂದೇ ದಿನ 36 ಜನ ಆಕ್ಸಿಜನ್ ಸಿಗದೇ ಸತ್ತರು. ಇದಕ್ಕೆ ಸರ್ಕಾರವೇ ಹೊಣೆ. ಆರೋಗ್ಯ ಸಚಿವ ಸುಧಾಕರ್, ಯಡಿಯೂರಪ್ಪ ಸುಳ್ಳು ಹೇಳಿದ್ದಾರೆ. ಆ ಪ್ರಕರಷದ ಕುರಿತು ನ್ಯಾಯಾಂಗ ತನಿಖೆ ಆಗಬೇಕೆಂದು ಒತ್ತಾಯಿಸಲಾಗಿದೆ. ಸತ್ತವರ ಕುಟುಂಬಕ್ಕೆ 10 ಲಕ್ಷ ಪರಿಹಾರ ಕೊಡಲು ಹೇಳಿದೆ, ಅದನ್ನು ಕೊಡಲಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಬಿಪಿಎಲ್ ಕುಟುಂಬಕ್ಕೆ10 ಸಾವಿರ ಕೊಟ್ಟಿದ್ದರೆ 12 ಸಾವಿರ ಕೋಟಿ ಆಗುತ್ತಿತ್ತು. ಕೇರಳದಲ್ಲಿ ಆ ಸರ್ಕಾರ ಕೊಟ್ಟಿದೆ. ಅಷ್ಟು ಅನುದಾನ ಕೊಡದಿರುವಂತ ಅತ್ಯಂತ ಕೆಟ್ಟ ಸರ್ಕಾರ ಇದು ಎಂದರು.
ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಇವುಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಕೊರೊನಾದಿಂದ ದೂರ ಇರಬಹುದು, ಜೊತೆಗೆ ಅದನ್ನು ಓಡಿಸಬಹುದು ಎಂದು ಸಲಹೆ ನೀಡಿದರು.
ಕೊಪ್ಪಳ ಕ್ಷೇತ್ರದ ಜನತೆಗೆ 15 ಸಾವಿರ ಕಿಟ್ ವಿತರಿಸಿ ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲೆಯ ಮುಖಂಡರಿಗೆ, ಶಾಸಕ ರಾಘವೇಂದ್ರ, ಬಸಟ್ಟೆಪ್ಪ ಅವರಿಗೆ ಜನತೆ ಪರವಾಗಿ ನಾನು ಧನ್ಯವಾದ ತಿಳಿಸುವೆ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಸ್ವಾಗತಿಸಿ ಮಾತನಾಡಿ, ಮುಖ್ಯಮಂತ್ರಿಯಾಗಿದ್ದಾಗ ಇಡೀ ರಾಜ್ಯದ ಜನರ ಹಸಿವು ನೀಗಿಸಿದವರು ಸಿದ್ದರಾಮಯ್ಯ. ಅನ್ನಭಾಗ್ಯ ಸೇರಿದಂತೆ ಅನೇಕ ಭಾಗ್ಯಗಳನ್ನು ಜನತೆಗೆ ನೀಡಿದ ಬಡವರಿಗೆ ನೀಡಿದ್ದಾರೆ. ಕೊಪ್ಪಳ ಕ್ಷೇತ್ರಕ್ಕೆ 3 ಸಾವಿರ ಕೋಟಿ ಅನುದಾನ ನೀಡಿದ ಏಕೈಕ ಮುಖ್ಯಮಂತ್ರಿ ಇವರಾಗಿದ್ದಾರೆ. 2023ಕ್ಕೆ ಕಾಂಗ್ರೆಸ್ ಗೆ ಬೆಂಬಲ ನೀಡುವ ಮೂಲಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ, ಜಮೀರ್ ಅಹ್ಮದ್ ಖಾನ್, ಬಸವರಾಜ ರಾಯರಡ್ಡಿ, ಅಮರೇಗೌಡ ಬಯ್ಯಾಪುರ, ಶಾಸಕ ಭೈರತಿ ಸುರೇಶ್,ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್‌, ಮಾಜಿ ಸಂಸದ ಶಿವರಾಮಗೌಡ, ಬಸವರಾಜ ಹಿಟ್ನಾಳ, ಅಶೋಕ ಪಟ್ಟಣ, ಮಲ್ಲಿಕಾರ್ಜುನ, , ನಗರಸಭೆ ಅಧ್ಯಕ್ಷೆ ಲತಾ ಚಿನ್ನೂರ ಮೊದಲಾದವರಿದ್ದರು..

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌: ವೀಡಿಯೊ ನೀಡಿದ್ದು ನಾನೇ ಎಂದಿದ್ದ ಮಾಜಿ ಕಾರು ಚಾಲಕ ಕಾರ್ತಿಕ್ ನಾಪತ್ತೆ...!?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement