ಮುಂದಿನ ಸಿಎಂ ಬಗ್ಗೆ ನಾವು ನಿರ್ಧರಿಸ್ತೇವೆ: ಸಿಎಂ ಚರ್ಚೆಗೆ ಬ್ರೇಕ್‌ ಹಾಕಿದ ಕಾಂಗ್ರೆಸ್‌ ಹೈಕಮಾಂಡ್‌

posted in: ರಾಜ್ಯ | 0

ಬೆಂಗಳೂರು:ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರ ತಾರಕಕ್ಕೇರಿದ ಮಧ್ಯೆಯೇ ಈಗ ಕಾಂಗ್ರೆಸ್‌ ಹೈಕಮಾಂಡ್‌ ಇದಕ್ಕೆ ಬ್ರೇಕ್‌ ಹಾಕಿದೆ.
ಮುಖ್ಯಮಂತ್ರಿ ಹುದ್ದೆ ಕುರಿತ ಸಂಘರ್ಷಕ್ಕೆ ಕೊನೆಹಾಡಬೇಕು. ಪಕ್ಷದ ಸಂಘಟನೆಗೆ ಒತ್ತುನೀಡಬೇಕು ಹಾಗೂ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಪ್ರಬಲ ಹೋರಾಟ ನಡೆಸಬೇಕು ಎಂದು ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಪಕ್ಷದ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಕಟ್ಟಪ್ಪಣೆ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸುರ್ಜೇವಾಲ, ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಕೆಲವರು ಬಹಿರಂಗ ಹೇಳಿಕೆ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸಂದರ್ಭ ಬಂದಾಗ ಪಕ್ಷದ ಹೈಕಮಾಂಡ್ ಮತ್ತು ಶಾಸಕರು ನಾಯಕತ್ವದ ಬಗ್ಗೆ ನಿರ್ಧರಿಸುತ್ತಾರೆ. ಈಗ ಅದರ ಬಗ್ಗೆ ಚರ್ಚೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಆ ಮೂಲಕ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಶಾಸಕರಾದ ಜಮೀರ್ ಅಹಮದ್ ಖಾನ್ ಮತ್ತು ರಾಘವೇಂದ್ರ ಹಿಟ್ನಾಳ್ ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಪದಾಧಿಕಾರಿಗಳ ಪಟ್ಟಿ ಪುನರ್‌ರಚನೆ ಬಯಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ದೆಹಲಿಗೆ ತೆರಳಿದ್ದಾರೆ. ಇದೇ ಸಂದರ್ಭದಲ್ಲಿ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟಿತರಾಗಿ ಕೆಲಸ ಮಾಡಿ ಎಂಬ ಸಂದೇಶವನ್ನು ಸುರ್ಜೇವಾಲ ರವಾನಿಸಿದ್ದಾರೆ.
ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕೆಂದು ಶಾಸಕರಾದ ಜಮೀರ್‌ ಅಹ್ಮದ್‌ ಹಾಗೂ ರಾಘವೇಂದ್ರ ಹಿಟ್ನಾಳ್‌ ಇತ್ತೀಚಿಗೆ ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಆಪ್ತ ವಲಯದ ಇನ್ನೂ ಕೆಲವರು ಇದಕ್ಕೆ ದನಿಗೂಡಿಸಿದ್ದರು. ಇದು ಜೋರಾಗುತ್ತಿದ್ದಂತೆಯೇ ಎಚ್ಚೆತ್ತ ಹೈಕಮಾಂಡ್‌ ಈಗ ಇದಕ್ಕೆ ಬ್ರೇಕ್‌ ಹಾಕಲು ಮಧ್ಯ ಪ್ರವೇಶಿಸಿದೆ.
ಸುರ್ಜೇವಾಲಾ ಹೇಳಿಕೆಗೆ ಬ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಪ್ರಥಮ ಆದ್ಯತೆಯಾಗಿದೆ, ಸಾಮೂಹಿಕ ನಾಯಕತ್ವದಲ್ಲಿ ನಾನು ನಂಬಿಕೆಯಿಟ್ಟಿದ್ದೇನೆ, ಮುಂದಿನ ಮುಖ್ಯಮಂತ್ರಿ ಯಾರೂ ಎಂಬ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ, ನಮಗೆ ಪಕ್ಷದ ಶಿಸ್ತು ಪ್ರಾಥಮಿಕವಾಗಿದೆ, ಇದನ್ನು ಎಲ್ಲ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಜಮೀರ್ ಅಹ್ಮದ್ ಹೇಳಿಕೆ ಬಗ್ಗೆ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ ಅದು ಜಮೀರ್ ಅವರ ವೈಯಕ್ತಿಕ ಅಭಿಪ್ರಾಯ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಹಾಗಾಗಿ ನಮ್ಮ ಜೊತೆ ಬೆಂಬಲಿಗರು ಇರುತ್ತಾರೆ. ಅವರಿಗೆ ತಮ್ಮ ನಾಯಕರು ಹೀಗೆ ಆಗಬೇಕು, ಹಾಗೆ ಆಗಬೇಕು ಎಂಬ ಆಸೆಗಳಿರುತ್ತದೆ. ಅದರಂತೆ ಸಿದ್ದರಾಮಯ್ಯನವರ ಜೊತೆ ಇರುವ ಜಮೀರ್‍ ಅವರಿಗೆ ಈ ಆಸೆ ಇದೆ ಎಂದು ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ