ಮಹತ್ವದ ಸುದ್ದಿ..ಎಸ್‌ಎಸ್‌ಎಲ್‌ಸಿ ಪರೀಕ್ಷೆ -2021: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಜುಲೈ ತಿಂಗಳಿನಲ್ಲಿ ನಡೆಯುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಪ್ರತಿಯೊಬ್ಬ ಶಿಕ್ಷಕರು ಇದರ ಪ್ರಕಾರ ಸಿದ್ಧತೆ ಮಾಡಿಕೊಳ್ಳುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಜೂ.28 ರಂದು ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಎಸ್‌ಪಿಗಳು, ಡಿಎಚ್‌ಒ, ಖಜಾನಾಧಿಕಾರಿಗಳು ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ.
ಪರೀಕ್ಷೆ ಕರ್ತವ್ಯದಲ್ಲಿ ಭಾಗಿಯಾಗಲಿರುವ ಶಿಕ್ಷಕರು, ಸಿಬ್ಬಂದಿ ಹಾಗೂ ಅಧಿಕಾರಿಗಳು ಜಿಲ್ಲಾಡಳಿತದ ಸಹಾಯದೊಂದಿಗೆ ಕೊರೊನಾ ಲಸಿಕೆ ಕಡ್ಡಾಯವಾಗಿ ಪಡೆಯಬೇಕು. ಪರೀಕ್ಷೆಯ ಸಂದರ್ಭದಲ್ಲಿ ಒಂದು ಡೋಸ್ ಲಸಿಕೆಯನ್ನಾದರೂ ಪಡೆದಿರಬೇಕು ಎಂದು ಸೂಚಿಸಲಾಗಿದೆ.
ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಒಪಿ ಅನುಷ್ಠಾನಗೊಳಿಸಲು ಮಾಡಿಕೊಂಡಿರುವ ಸಿದ್ಧತೆಗಳನ್ನು ಪರೀಕ್ಷೆಯ ಮೊದಲು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು ಮತ್ತು ಅನುಷ್ಠಾನವನ್ನು ವೀಕ್ಷಿಸಬೇಕು ಎಂದು ಸೂಚಿಸಲಾಗಿದೆ.
ಒಂದೊಮ್ಮೆ ವಿದ್ಯಾರ್ಥಿಗಳು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅಂಥವರಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರದ ಪ್ರವೇಶವಾದೊಡನೆ ನೇರವಾಗಿ ಆರೋಗ್ಯ ತಪಾಸಣಾ ಕೌಂಟರ್ ಪ್ರವೇಶಿಸುವಂತೆ ನಿರ್ದೇಶಿಸಬೇಕು ಎಂದು ಮಾರ್ಗಸೂಚಿಯಲ್ಲಿ
ಸೂಚಿಸಲಾಗಿದೆ.
ಸ್ಥಳೀಯಾಡಳಿತವು ಪ್ರತಿದಿನವೂ ಪರೀಕ್ಷೆ ಆರಂಭಕ್ಕೂ ಮುನ್ನ ಮತ್ತು ಪರೀಕ್ಷೆ ನಂತರ ಸೋಂಕು ನಿವಾರಕ ದ್ರಾವಣದಿಂದ ಸಂಸ್ಥೆಗಳ ನೆರವಿನಿಂದ ಪರೀಕ್ಷಾ ಕೇಂದ್ರ, ಪರೀಕ್ಷಾ ಕೊಠಡಿ, ಪೀಠೋಪಕರಣ ಮತ್ತು ಶೌಚಾಲಯಗಳನ್ನು ಸ್ಯಾನಿಟೈಜೇಷನ್ ಮಾಡುಬೇಕು. ಪರೀಕ್ಷಾ ಕೇಂದ್ರಕ್ಕೆ ಆಗಮನ ಮತ್ತು ನಿರ್ಗಮನ ಹಾಗೆಯೇ ಕೊಠಡಿ ಪ್ರವೇಶ ಸಮಯದಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.ಆರೋಗ್ಯ ಕೌಂಟರ್‌ಗಳು ಬೆಳಗ್ಗೆ 8.30ಕ್ಕೆ ಅರಂಭವಾಗಿ ಪರೀಕ್ಷಾ ಪ್ರಕ್ರಿಯೆ ಮುಗಿಯುವ ತನಕ ತೆರದಿರಬೇಕು. ಪಲ್ಸ್‌ಆಕ್ಸಿಮೀಟರ್, ಥರ್ಮಲ್ ಸ್ಕ್ಯಾನಿಂಗ್, ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಿರುವುದನ್ನು ಖಾತರಿಪಡಿಸಬೇಕೆಂದು ಸೂಚಿಸಲಾಗಿದೆ. ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಆರೋಗ್ಯ ಕೌಂಟರ್‌ನಲ್ಲೇ ಮಾಸ್ಕ್ ನೀಡಲಾಗುತ್ತದೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement