ಜಮ್ಮು ಮತ್ತು ಕಾಶ್ಮೀರ: ಪುಲ್ವಾಮಾ ಜಿಲ್ಲೆಯಲ್ಲಿ ಎಸ್‌ಪಿಒ, ಪತ್ನಿ, ಮಗಳನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು

ಪುಲ್ವಾಮಾ, (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಹರಿಪರಿಗಂ ಗ್ರಾಮದಲ್ಲಿ ಮಾಜಿ ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಮನೆಗೆ ನುಗ್ಗಿದ ಭಯೋತ್ಪಾದಕರು ಅವರು ಮತ್ತು ಅವರ ಪತ್ನಿ ಹಾಗೂ ಮಗಳನ್ನು ಗುಂಡು ಹಾರಿಸಿ ಕೊಂದಿದ್ದಾರೆ.
ಈ ಘಟನೆ ಭಾನುವಾರ ನಡೆದಿದ್ದು, ದಾಳಿಯಲ್ಲಿ ಅವರ ಮಗಳು ಕೂಡ ಗಂಭೀರ ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳು ಈಗ ಪ್ರದೇಶವನ್ನು ಸುತ್ತುವರಿದಿದ್ದು, ಹಲ್ಲೆಕೋರರನ್ನು ಪತ್ತೆ ಹಚ್ಚಲು ಶೋಧ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಶ್ಮೀರ ವಲಯ ಪೊಲೀಸರ ಪ್ರಕಾರ, ಅವಂತಿಪೋರಾದ ಹರಿಪರಿಗಂನ ಮಾಜಿ ಎಸ್‌ಪಿಒ ಫಯಾಜ್ ಅಹ್ಮದ್ ಅವರ ಮನೆಗೆ ನುಗ್ಗಿದ ಭಯೋತ್ಪಾದಕರು ವಿವೇಚನೆಯಿಲ್ಲದೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಅವರು, ಪತ್ನಿ ಮತ್ತು ಮಗಳು ಗಂಭೀರ ಗಾಯಗೊಂಡರು.
ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಎಸ್‌ಪಿಒ ಮತ್ತು ಅವರ ಪತ್ನಿ ನಿಧನರಾದರು. ಮಗಳು ರಫಿಯಾಳನ್ನು ಚಿಕಿತ್ಸೆಗಾಗಿ ಪುಲ್ವಾಮಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ಮಾಹಿತಿ ಪ್ರಕಾರ, ಎಸ್‌ಪಿಒ ಮಗಳು ಕೂಡ ಬುಲೆಟ್ ಗಾಯಗಳಿಂದಾಗಿ ಮೃತಪಟ್ಟಿದ್ದಾಳೆ. ಮೃತಪಟ್ಟ ಅಧಿಕಾರಿ ಮಗ ಪ್ರಾದೇಶಿಕ ಸೈನ್ಯದಲ್ಲಿ ಜವಾನ್. ಎರಡು ವರ್ಷಗಳ ಹಿಂದೆ ಅಹ್ಮದ್‌ಗೆ ರಾಜೀನಾಮೆನಿಡುವಂತೆ ಬೆದರಿಕೆ ಹಾಕಲಾಗಿತ್ತು, ಆದರೆ ಅವರು ಎಂದಿಗೂ ಹಾಗೆ ಮಾಡಲಿಲ್ಲ.
ಭಾನುವಾರ ಮುಂಜಾನೆ ಐಎಎಫ್ ನಿರ್ವಹಿಸುತ್ತಿದ್ದ ಜಮ್ಮು ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಸಂಭವಿಸಿದ ಅವಳಿ ಸ್ಫೋಟಗಳಲ್ಲಿ ಕನಿಷ್ಠ ಇಬ್ಬರು ಭಾರತೀಯ ವಾಯುಪಡೆಯ ಸಿಬ್ಬಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕರು ಮೊದಲ ಬಾರಿಗೆ ಮಾನವರಹಿತ ವೈಮಾನಿಕ ವಾಹನಗಳನ್ನು ದಾಳಿಯಲ್ಲಿ ಬಳಸಿದ್ದಾರೆ ಎಂದು ಶಂಕಿಸಲಾಗಿದೆ.
ಜಮ್ಮುವಿನ ಐಎಎಫ್ ನಿಲ್ದಾಣದಲ್ಲಿ ನಡೆದ ದಾಳಿ ಭಯೋತ್ಪಾದಕ ದಾಳಿ” ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. ದಾಳಿಯ ಹಿಂದಿನ ಯೋಜನೆಯನ್ನು ಬಿಚ್ಚಿಡಲು ಪೊಲೀಸರು ಮತ್ತು ಇತರ ಏಜೆನ್ಸಿಗಳು ಐಎಎಫ್ ಅಧಿಕಾರಿಗಳೊಂದಿಗೆ ಸಹಕರಿಸುತ್ತಿವೆ ಎಂದು ಅವರು ಹೇಳಿದರು.
ಜಮ್ಮು ವಿಮಾನ ನಿಲ್ದಾಣದಲ್ಲಿರುವ ಉನ್ನತ ಸುರಕ್ಷತೆಯ ಭಾರತೀಯ ವಾಯುಪಡೆಯ ನಿಲ್ದಾಣಕ್ಕೆ ಅಪ್ಪಳಿಸಿದ ಎರಡು ಡ್ರೋನ್‌ಗಳ ಹಾರಾಟದ ಮಾರ್ಗವನ್ನು ಕಂಡುಹಿಡಿಯಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ