ದೆಹಲಿಯಲ್ಲಿ ದೇವೇಂದ್ರ ಫಡ್ನವೀಸ್ -ರಮೇಶ ಜಾರಕಿಹೊಳಿ ಭೇಟಿ ಮರ್ಮವೇನು..?

posted in: ರಾಜ್ಯ | 0

ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾಗಲು ಕಸರತ್ತು ನಡೆಸಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ದಿಢೀರ್‌ ದೆಹಲಿಗೆ ತೆರಳಿದ್ದಾರೆ.
ಅವರು ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯಿಸಲು ಏನನ್ನೂ ಹೇಳಲು ರಮೇಶ್​ ಜಾರಕಿಹೊಳಿ ನಿರಾಕರಿಸಿದ್ದಾರೆ.

ರಮೇಶ ಜಾರಕಿಹೊಳಿ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಮೇಶ್ ಜಾರಕಿಹೊಳಿ ಮಹಾರಾಷ್ಟ್ರಸದನದಲ್ಲಿ ಫಡ್ನವಿಸ್ ಅವರೊಂದಿಗೆ  ಮಾತುಕತೆ ನಡೆಸಿದರು ಎನ್ನಲಾಗಿದೆ. ಸಭೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಅವರ ಸಚಿವ ಸಂಪುಟದಲ್ಲಿ ಸೇರ್ಪಡೆಗೊಳ್ಳುವ ವಿಚಾರದಲ್ಲಿ ಚರ್ಚೆ ನಡೆದಿರಬಹುದು ಎಂದು ಹೇಳಲಾಗಿದೆ.
ಇತ್ತೀಚಿನ ಕೆಲ ದಿನಗಳಲ್ಲಿ ಫಡ್ನವೀಸ್ ಅವರನ್ನು ರಮೇಶ ಜಾರಕಿಹೊಳಿ ಎರಡನೇ ಸಲ ಭೇಟಿಯಾಗುತ್ತಿದ್ದಾರೆ. ಕಳೆದ ವಾರ ಅವರು ಮುಂಬೈನಲ್ಲಿ ಫಡ್ನವೀಸ್‌ ಅವರನ್ನು ಭೇಟಿಯಾಗಿ ಅವರನ್ನು ತಮ್ಮ “ರಾಜಕೀಯ ಗುರು” ಎಂದು ಹೇಳಿದ್ದರು.
ಭಾನುವಾರ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ರಮೇಶ ಜಾರಕಿಹೊಳಿ ಹಠಾತ್ ದೆಹಲಿ ಭೇಟಿ ಊಹಾಪೋಹಗಳಿಗೆ ಕಾರಣವಾಗಿದೆ.
ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಯಾವುದೇ ಅಸಮಾಧಾನವಿಲ್ಲ ಮತ್ತು ಬಿಜೆಪಿಯನ್ನು ತೊರೆಯುವ ಯಾವುದೇ ವಿಚಾರ ಇಲ್ಲ ಎಂದು ಹೇಳಿದ್ದರು.
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಲಹೆ ಮೇರೆಗೆ ಹೈಕಮಾಂಡ್ ನಾಯಕರ ಭೇಟಿಗೆ ಮುಂದಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ರಮೇಶ್ ಜಾರಕಿಹೊಳಿ ಮತ್ತು ಹೈಕಮಾಂಡ್ ನಾಯಕರ ನಡುವೆ ಫಡ್ನವಿಸ್ ಅವರು ಸಮನ್ವಯ ನಡೆಸುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ  ಹೇಳಲಾಗುತ್ತಿದೆ.
ರಮೇಶ್​ ಜಾರಕಿಹೊಳಿ  ದೆಹಲಿ ವಿಮಾನ ಹತ್ತಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ