ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಎನ್ ಕೌಂಟರಿನಲ್ಲಿ ಮೂವರು ಎಲ್ ಇಟಿ ಉಗ್ರರು ಹತ, ಓರ್ವ ಯೋಧ ಹುತಾತ್ಮ,

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಗುಂಡಿನ ಸಪ್ಪಳ ಕೇಳಿಬಂದಿದೆ. ದಾಳಿಯಲ್ಲಿ ಓರ್ವ ಯೋಧರು ಹುತಾತ್ಮರಾಗಿದ್ದು, ಯೋಧರು ಮೂವರು ಎಲ್ ಇಟಿ ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಹಂಜಿನ್ ರಾಜ್ ಪೊರಾ ಪ್ರದೇಶದಲ್ಲಿ ಭದ್ರತಾ ಪಡೆ ಯೋಧರು ಮತ್ತು ಎಲ್ ಇಟಿ ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದು ಯೋಧರೊಬ್ಬರು ಹುತಾತ್ಮಗೊಂಡಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.
ಉಗ್ರರ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯ ನಡೆಸಲು ಆರಂಭಿಸಿದರು. ಈ ವೇಳೆ ಉಗ್ರರು ಏಕಾಏಕಿ ಗುಂಡಿನ ಮಳೆಗೈಯಲು ಆರಂಭಿಸಿದರು. ಪೊಲೀಸರು ಮತ್ತು ಸೇನಾಪಡೆ ಜಂಟಿಯಾಗಿ ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿವೆ.
ಪೊಲೀಸರು ಉಗ್ರರನ್ನು ಶರಣಾಗುವಂತೆ ಕೇಳಿಕೊಂಡರೂ ಒಪ್ಪದೆ ಉಗ್ರರು ದಾಳಿ ನಡೆಸಿದಾಗ ಎನ್ ಕೌಂಟರ್ ನಡೆಯಿತು. ದಾಳಿಯಲ್ಲಿ ಮೂವರು ಉಗ್ರರ ಹತ್ಯೆಯಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಇನ್ನೂ ಎನ್ ಕೌಂಟರ್ ಮುಂದುವರಿದಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ