

ಲಕ್ನೋ : ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸನಿಹದಲ್ಲಿದ್ದಾಗಲೇ ಹೊಸ ರಾಜಕೀಯ ಮೈತ್ರಿಕೂಟವೊಂದು ಅಸ್ತಿತ್ವಕ್ಕೆ ಬಂದಿದೆ. ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಆಜಾದ್ ಸಮಾಜ ಪಾರ್ಟಿ (ಕಾನ್ಶಿರಾಮ್) ನಾಯಕ ಚಂದ್ರಶೇಖರ ಆಜಾದ್ ಅವರು ಗುರುವಾರ (ನವೆಂಬರ್ 12) 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೈಜೋಡಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಒಗ್ಗಟ್ಟಾಗಿ ಸ್ಪರ್ಧಿಸುವ ಉದ್ದೇಶದಿಂದ ಎರಡೂ ಪಕ್ಷಗಳು ಮೈತ್ರಿ ಘೋಷಿಸಿದ್ದು, ‘ಸಾಮಾಜಿಕ ಪರಿವರ್ತನ ಮೋರ್ಚಾ’ (Samajik Parivartan Morcha) ಎಂಬ ಹೊಸ ರಾಜಕೀಯ ಮೈತ್ರಿಕೂಟವನ್ನು ರಚಿಸಿವೆ. ಹಾಗೂ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಚಂದ್ರಶೇಖರ ಆಜಾದ್ ಅವರನ್ನು ಈ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ಗುರುವಾರ ಲಕ್ನೋದಲ್ಲಿ ಚಂದ್ರಶೇಖರ ಆಜಾದ್ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಓವೈಸಿ, ತಮ್ಮ ಪಕ್ಷ ಮತ್ತು ಆಜಾದ್ ಅವರ ಪಕ್ಷದ ನಡುವೆ ಮೈತ್ರಿ ಏರ್ಪಟ್ಟಿರುವುದಾಗಿ ಪ್ರಕಟಿಸಿದರು. ಈ ಮೈತ್ರಿಕೂಟಕ್ಕೆ ‘ಸಾಮಾಜಿಕ ಪರಿವರ್ತನ ಮೋರ್ಚಾ’ (Samajik Parivartan Morcha – SPM) ಎಂದು ಹೆಸರಿಡಲಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು ಈ ಮೈತ್ರಿಯ ಪ್ರಮುಖ ಉದ್ದೇಶವಾಗಿದೆ ಎಂದು ಓವೈಸಿ ತಿಳಿಸಿದರು.
ಹೊಸ ಮೈತ್ರಿಕೂಟದ ಕುರಿತು ಮಾತನಾಡಿದ ಓವೈಸಿ, ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಮಾಜಿಕ ಪರಿವರ್ತನ ಮೋರ್ಚಾ ಪ್ರಬಲ ಪರ್ಯಾಯವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. “ಉತ್ತರ ಪ್ರದೇಶದಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಈ ಮೈತ್ರಿಕೂಟ ಪ್ರಬಲ ಪರ್ಯಾಯವಾಗಲಿದೆ ಎಂದು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ” ಎಂದು ಅವರು ಹೇಳಿದರು. ಹಿಂದುಳಿದ ವರ್ಗಗಳು, ದಲಿತರು, ಶೋಷಿತರು ಮತ್ತು ಸಮಾಜದ ಅಂಚಿನಲ್ಲಿರುವ ಜನರ ಸಮಸ್ಯೆಗಳಿಗೆ ಮೈತ್ರಿಕೂಟ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಓವೈಸಿ ತಿಳಿಸಿದರು.


ಚಂದ್ರಶೇಖರ ಆಜಾದ್ ಮುಖ್ಯಮಂತ್ರಿ ಅಭ್ಯರ್ಥಿ
ಚಂದ್ರಶೇಖರ ಆಜಾದ್ ಅವರನ್ನು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಓವೈಸಿ, ಅವರ ನಾಯಕತ್ವದಲ್ಲಿ ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡಲಿವೆ ಎಂದರು. “ಚಂದ್ರಶೇಖರ ಆಜಾದ್ ಅವರು ಸಾಮಾಜಿಕ ಪರಿವರ್ತನ ಮೋರ್ಚಾದ ಮುಖ್ಯಸ್ಥರಾಗಿಯೂ, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿಯಾಗಿಯೂ ಇರಲಿದ್ದಾರೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ” ಎಂದು ಓವೈಸಿ ಹೇಳಿದರು.
ಮೈತ್ರಿಕೂಟವನ್ನು ‘ತೃತೀಯ ರಂಗ’ ಎಂದು ಕರೆಯುವುದನ್ನು ತಳ್ಳಿಹಾಕಿದ ಚಂದ್ರಶೇಖರ ಆಜಾದ್, ಸಮಾಜದ ವಂಚಿತರು, ಶೋಷಿತರು ಹಾಗೂ ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ ಪ್ರಬಲ ರಾಜಕೀಯ ವೇದಿಕೆಯಾಗಿ ಸಾಮಾಜಿಕ ಪರಿವರ್ತನ ಮೋರ್ಚಾ ಹೊರಹೊಮ್ಮಲಿದೆ ಎಂದು ಹೇಳಿದರು. ಇದು ತೃತೀಯ ರಂಗವಲ್ಲ, ಮೊದಲ ರಂಗ ಎಂಬುದು ನಿಮಗೆ ತಿಳಿಯುತ್ತದೆ” ಎಂದು ಅವರು ಹೇಳಿದರು.
ಸಮಾಜದ ದುರ್ಬಲರು ಮತ್ತು ವಂಚಿತ ವರ್ಗಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದು ಮೈತ್ರಿಕೂಟದ ಉದ್ದೇಶವಾಗಿದೆ. ಈ ಸಮುದಾಯಗಳು ತಮ್ಮ ಜನಸಂಖ್ಯಾ ಬಲವನ್ನು ರಾಜಕೀಯ ಶಕ್ತಿಯಾಗಿ ಪರಿವರ್ತಿಸಿಕೊಳ್ಳುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗುವುದು ಮೋರ್ಚಾದ ಗುರಿಯಾಗಿದೆ ಎಂದು ಆಜಾದ್ ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಉಲ್ಲೇಖಿಸಿದ ಅವರು, ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜಕೀಯ ಅಧಿಕಾರವೇ ‘ಮಾಸ್ಟರ್ ಕೀ’ (ಪ್ರಮುಖ ಕೀಲಿಕೈ) ಇದ್ದಂತೆ ಎಂದು ಹೇಳಿದರು.
ತಮ್ಮದೇ ಆದ ರಾಜಕೀಯ ಸಂಘಟನೆ ಹೊಂದಿರದ ಸಮುದಾಯಗಳು ಎಷ್ಟೇ ದೊಡ್ಡ ಜನಸಂಖ್ಯೆಯನ್ನು ಹೊಂದಿದ್ದರೂ ತಮ್ಮ ಹಿತಾಸಕ್ತಿಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಶೋಷಿತ ಮತ್ತು ವಂಚಿತ ಸಮುದಾಯಗಳು ರಾಜಕೀಯವಾಗಿ ಸಂಘಟಿತರಾಗಿ ಅಧಿಕಾರದಲ್ಲಿ ತಮ್ಮ ಪಾಲುದಾರಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಿಹೇಳಿದರು.
ಅಖಿಲೇಶ ಯಾದವ್ ವಿರುದ್ಧ ವಾಗ್ದಾಳಿ
ಮೈತ್ರಿಕೂಟದ ಅಧಿಕೃತ ಘೋಷಣೆಗೂ ಮುನ್ನವೇ ಎಐಎಂಐಎಂ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಶೌಕತ್ ಅಲಿ ಅವರು ಸಮಾಜವಾದಿ ಪಕ್ಷದ (SP) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಎಐಎಂಐಎಂ ಪಕ್ಷವು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಆದರೆ, ಈ ಎರಡೂ ಪಕ್ಷಗಳು ತಮ್ಮ ಅಹಂಕಾರದ ಕಾರಣದಿಂದ ಮೈತ್ರಿ ಪ್ರಸ್ತಾಪವನ್ನು ತಿರಸ್ಕರಿಸಿವೆ ಎಂದು ಶೌಕತ್ ಅಲಿ ಆರೋಪಿಸಿದರು. ಬಿಹಾರದಲ್ಲಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ರಾಜಕೀಯ ಸವಾಲು ಹಾಕಿದ ರೀತಿಯಲ್ಲೇ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ ಯಾದವ್ ಅವರಿಗೂ ಎಐಎಂಐಎಂ ತಕ್ಕ ಪಾಠ ಕಲಿಸಲಿದೆ ಎಂದು ಅವರು ಹೇಳಿದರು. ಅಲ್ಲದೆ, 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಕೇವಲ 27 ಸ್ಥಾನಗಳಿಗೆ ಸೀಮಿತಗೊಳಿಸುತ್ತೇವೆ ಎಂದು ಶೌಕತ್ ಅಲಿ ಸವಾಲು ಹಾಕಿದರು.
ಒಟ್ಟಿನಲ್ಲಿ, 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಐಎಂಐಎಂ ಮತ್ತು ಆಜಾದ್ ಸಮಾಜ್ ಪಾರ್ಟಿ–ಕಾನ್ಶಿರಾಮ್ ಪಕ್ಷಗಳು ಸಾಮಾಜಿಕ ಪರಿವರ್ತನ ಮೋರ್ಚಾ ಹೆಸರಿನಲ್ಲಿ ಚುನಾವಣಾ ಪೂರ್ವ ಮೈತ್ರಿಕೂಟ ಮಾಡಿಕೊಂಡಿದ್ದು, ಚಂದ್ರಶೇಖರ ಆಜಾದ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿರುವುದು ರಾಜ್ಯದ ರಾಜಕೀಯದಲ್ಲಿ ಹೊಸ ಬೆಳವಣಿಗೆಯಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ