ನಮ್ಮ ಬಳಿ ಸಿಡಿ ಬಾಂಬ್‌, ಮಿಸೈಲ್‌ ಇದೆ ಎಂದೆಲ್ಲ ಶಾಸಕರು ಹೇಳುವ ಮಾತಾ..?: ಜೆಡಿಎಸ್‌ ಶಾಸಕರ ವಿರುದ್ಧ ಸುಮಲತಾ ಕಿಡಿ

posted in: ರಾಜ್ಯ | 0

ಮಂಡ್ಯ: ‘ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆಯುಂಟಾಗುತ್ತಿದೆ. ಇದನ್ನು ಪ್ರಶ್ನೆ ಮಾಡಿದರೆ ಮಾಜಿ ಮುಖ್ಯಮಂತ್ರಿ ಸೇರಿ ಜಿಲ್ಲೆಯ ಹಲವು ಶಾಸಕರು ‘ನಮ್ಮ ಬಳಿ ಸಿಡಿ ಬಾಂಬ್‌ ಇದೆ, ಮಿಸೈಲ್‌ ಇದೆ ಎಂದೆಲ್ಲ ಬೆದರಿಕೆ ಹಾಕುತ್ತಿದ್ದಾರೆ. . ಇವರು ಶಾಸಕರಾಗಿ ಭಯೋತ್ಪಾದಕರಂತೆ ಮಾತನಾಡುತ್ತಿದ್ದಾರೆ ಎಂದು ಸಂಸದೆ ಸುಮಲತಾ ಕಿಡಿಕಾರಿದ್ದಾರೆ.
ಬುಧವಾರ ಶ್ರೀರಂಗಪಟ್ಟಣ, ಪಾಂಡವಪುರ ತಾಲ್ಲೂಕಿನ ವಿವಿಧ ಕಲ್ಲು ಗಣಿ ಚಟುವಟಿಕೆ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಬಳಿ ಸಿಡಿ ಬಾಂಬ್‌ ಇದೆ, ಮಿಸೈಲ್‌ ಇದೆ ಎಂದೆಲ್ಲ ಜನಪ್ರತಿನಿಧಿಗಳೂ ಆಡುವ ಮಾತುಗಳಾ, ಮುಖ್ಯಮಂತ್ರಿ ಮಗ, 8 ಮಂದಿ ಜೆಡಿಎಸ್‌ ಶಾಸಕರ ವಿರುದ್ಧ ಹೋರಾಡಿ ನಾನು ಗೆಲುವು ಪಡೆದಿದ್ದೇನೆ.ಶಾಸಕರ ಬೆದರಿಕೆಗಳಿಗೆ ನಾನು ಹೆದರುವವಳಲ್ಲ ಎಂದರು.
ಕಲ್ಲು ಗಣಿ ಅಕ್ರಮದ ಬಗ್ಗೆ ಮಾತನಾಡಿದರೆ ಅವರಿಗೆ ಯಾಕೆ ಅಷ್ಟೊಂದು ಭಯ-ಕೋಪವೇಕೆ. ಅಂಬರೀಷ್‌ ಅವರ ಎದುರು ಇವರೆಲ್ಲ ಕೈಕಟ್ಟಿ ನಿಂತಿದ್ದನ್ನು ಕಂಡಿದ್ದೇನೆ, ಅಂಥವರಿಂದ ನಾನು ಪಾಠ ಕಲಿಯಬೇಕಾಗಿಲ್ಲ. ಗಣಿ ಪ್ರದೇಶಕ್ಕೆ ಭೇಟಿ ನೀಡುವುದು ದಿಢೀರ್‌ ನಿಗದಿಯಾಗಿಲ್ಲ, ಕಳೆದ ವಾರ ಅಧಿಕಾರಿಗಳ ಸಭೆಯಲ್ಲೇ ಈ ಬಗ್ಗೆ ತಿಳಿಸಿದ್ದೆ. ನಾನು ಮಂಡ್ಯ ಸಂಸದೆ, ಗಣಿ ಪ್ರದೇಶಕ್ಕಾದರೂ ಹೋಗುತ್ತೇನೆ, ಕೆಆರ್‌ಎಸ್‌ಗಾದರೂ ಹೋಗುತ್ತೇನೆ, ನಾನು ಹೋದರೆ ಅವರಿಗ್ಯಾಕೆ ಭಯ’ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿಯಾಗಿ ಸಂಸದೆ ಬಗ್ಗೆ ಆಡುವ ಮಾತು ಅವರ ಸಂಸ್ಕಾರ ತೋರಿಸುತ್ತದೆ. ಅವರು ತಮ್ಮ ಮಾತುಗಳಿಂದಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ನನ್ನ ಕೆಲಸಗಳನ್ನು ತಡೆಯಲು ಬರಬೇಡಿ ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್‌ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ 76 ಕೋಟಿ ರೂ.ಗಳ ವೆಚ್ಚದಲ್ಲಿ ಕೆಆರ್‌ಎಸ್‌ ಜಲಾಶಯ ದುರಸ್ತಿ ಮಾಡಲಾಗಿದೆ. ಜಲಾಶಯ ಬಿರುಕು ಬಿಟ್ಟಿದ್ದಕ್ಕೇ ಅಷ್ಟೊಂದು ಹಣ ವೆಚ್ಚ ಮಾಡಲಾಗಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೇ ನನಗೆ ಮಾಹಿತಿ ನೀಡಿದ್ದಾರೆ. ಜಲಾಶಯದ ಆಸುಪಾಸಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ತೊಂದರೆಯಾಗುತ್ತಿದೆ. ಕಲ್ಲು ಗಣಿಗಳ ವಿರುದ್ಧ ನನ್ನ ಹೋರಾಟ ನಿರಂತರ ಎಂದು ಹೇಳಿದರು.
ಗಣಿಗಾರಿಕೆ ನಿಷೇಧಿಸಿದ್ದರೂ ರಾತ್ರಿವೇಳೆ ಕದ್ದು ಮುಚ್ಚಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಗಣಿ ಸ್ಫೋಟದಿಂದ ಸ್ಥಳೀಯರಿಗೆ ತೊಂದರೆಯಾಗಿದೆ, ಪರಿಸರಕ್ಕೆ ಹಾನಿಯಾಗುತ್ತಿದೆ, ಕೃಷಿ ಭೂಮಿ ಹಾಳಾಗುತ್ತಿದೆ. ನಿತ್ಯವೂ ನನಗೆ ಜನರು ದೂರು ಹೇಳುತ್ತಿದ್ದಾರೆ. ಗಣಿಗಾರಿಕೆ ವಿರುದ್ಧ ಶಾಸಕರು ಹೋರಾಟ ನಡೆಸಬೇಕಾಗಿತ್ತು, ಅವರು ಮಾಡದ ಕೆಲಸವನ್ನು ನಾನು ಮಾಡುತ್ತಿದ್ದೇನೆ’ ಎಂದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ