ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 206 ಸೀನ್‌ ಕ್ರೈಮ್‌ ಆಫಿಸರ್‌ ಹುದ್ದೆ ಸೃಷ್ಟಿ;ಇದು ದೇಶದಲ್ಲೇ ಮೊದಲು

ಬೆಂಗಳೂರು: ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸೂಕ್ಷ್ಮಾತಿಸೂಕ್ಷ್ಮ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಅಪರಾಧವನ್ನು ಪತ್ತೆ ಮಾಡಲು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನುರಿತ ಹಾಗೂ ಪರಿಣಿತರ ‘ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ’ ಹುದ್ದೆಯನ್ನು ಸೃಷ್ಟಿ ಮಾಡಲಾಗಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರಥಮ ಹಂತದಲ್ಲಿ 206 ಜನ ನುರಿತ ಅಧಿಕಾರಿಗಳ ಹುದ್ದೆಗಳನ್ನು ಮಂಜೂರು ಮಾಡಿದ್ದು, ನಾಳೆ (ಜುಲೈ 13ರಂದು) ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೀನ್‌ ಕ್ರೈಮ್‌ ಆಫಿಸರ್‌ (ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ) ಹುದ್ದೆಗಳ ಆದೇಶ ಪ್ರತಿ ಕೊಡಲಿದ್ದಾರೆ.
ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಅಪರಾಧ ಕೃತ್ಯಗಳ ತನಿಖೆಗೆ ಈ ರೀತಿ ಹೊಸ ಪೊಲೀಸ್ ಹುದ್ದೆಗಳನ್ನು ಸೃಷ್ಟಿ ಮಾಡಲಾಗಿದೆ.

ಕೋಟ್‌
ಈ ಎಲ್ಲ ಯೋಜನೆಗಳಿಗೆ ಅನುಮೋದನೆ ನೀಡಿರುವ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಕೋರುತ್ತೇನೆ

ಬಸವರಾಜ ಬೊಮ್ಮಾಯಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು

ಯಾವುದಾದರೂ ಒಂದು ಅಪರಾಧ ಕೃತ್ಯ ನಡೆದ ತಕ್ಷಣ ಘಟನಾ ಸ್ಥಳಕ್ಕೆ ಹೋಗಿ ಅಲ್ಲಿರುವಂತಹ ಸಾಕ್ಷ್ಯಾಧಾರಗಳನ್ನು ವೈಜ್ಞಾನಿಕವಾಗಿ, ಸುರಕ್ಷಿತವಾಗಿ ಸಂರಕ್ಷಣೆ ಮಾಡಲು ಈ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಇದುವರೆಗೆ ಈ ಕೆಲಸವನ್ನು ಸ್ಥಳೀಯ ಅಧಿಕಾರಿಗಳು ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಮೊದಲ ಹಂತದಲ್ಲಿ ಗಂಭೀರ ಸ್ವರೂಪದ ಅಪರಾಧಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವಿಶೇಷ ತರಬೇತಿ ಪಡೆದ ಈ ತಂಡ ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಮೊದಲು ಭೇಟಿ ನೀಡಲಿದೆ. ಆ ಸ್ಥಳದಲ್ಲಿನ ಎಲ್ಲ ಸಾಕ್ಷ್ಯಾಧಾರಗಳನ್ನು ಸಂರಕ್ಷಣೆ ಮಾಡುವುದು, ಆನಂತರ ಸಾಕ್ಷ್ಯಾಧಾರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡಲಾಗುತ್ತದೆ, ತನಿಖಾಧಿಕಾರಿಗೆ ಆ ಸಾಕ್ಷ್ಯಾಧಾರಗಳನ್ನು ಒದಗಿಸುವುದು ಸೇರಿದಂತೆ ಇತರ ಅವಶ್ಯ ಕರ್ತವ್ಯಗಳನ್ನು ಮಾಡುತ್ತ ಅಪರಾಧಿಗಳನ್ನು ಅತ್ಯಂತ ಶ್ರೀಘ್ರದಲ್ಲಿ ಪತ್ತೆ ಮಾಡಲು ಮೂಲಭೂತವಾಗಿ ಬೇಕಾಗುವ ಎಲ್ಲ ಕೆಲಸ ಕಾರ್ಯಗಳನ್ನು ಈ ಅಧಿಕಾರಿಗಳು ಮಾಡುತ್ತಾರೆ. ಇದರಿಂದ ಅಪರಾಧಿಗಳ ಪತ್ತೆ ಮತ್ತು ಅಪರಾಧ ನಿಯಂತ್ರಣ ಸಾಧ್ಯ. ಈ ವ್ಯವಸ್ಥೆಯ ಪ್ರಮುಖವಾಗಿ ವಿದೇಶಗಳಲ್ಲಿ ಹೆಚ್ಚಾಗಿ ಇದೆ.
ನಾಳೆ (ಜುಲೈ 13ರಂದು) ಈ ಸಂಬಂಧ ಅಧಿಕೃತವಾಗಿ ಸರ್ಕಾರಿ ಆದೇಶವನ್ನು ಮುಖ್ಯಮಂತ್ರಿಗಳು ಗೃಹ ಇಲಾಖೆಗೆ ಕೊಡಲಿದ್ದಾರೆ.ಇದೇ ಸಂದರ್ಭದಲ್ಲಿ ಪೊಲೀಸರ ಆರೋಗ್ಯ ಕಾಪಾಡುವ ಆರೋಗ್ಯ ಭಾಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ ಇರುವ ಕೈಪಿಡಿಯನ್ನು ಪೊಲೀಸ್ ಸಿಬ್ಬಂದಿಗೆ ನೀಡಲು ಮುಖ್ಯಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆ. ಅದೇ ರೀತಿ ಪೊಲೀಸರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ವಿದ್ಯಾನಿಧಿ – 2 ಯೋಜನೆಗೆ ಅವರು ಚಾಲನೆ ನೀಡಲಿದ್ದಾರೆ. ಅಲ್ಲದೆ ಅಗ್ನಿಶಾಮಕ ದಳ, ಗೃಹರಕ್ಷಕ ದಳ ಹಾಗೂ ಇತರ ಪೊಲೀಸ್ ಸೇವಾ ಪದಕಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಧಾನ ಮಾಡಲಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement