ಅಮೆರಿಕದಲ್ಲಿ ವಿಪರೀತ ಉಷ್ಣಾಂಶ , ಹೆಚ್ಚುತ್ತಿರುವ ಕಾಳ್ಗಿಚ್ಚು: ಹಲವು ರಾಜ್ಯಗಳಲ್ಲಿ ಬಿಸಿಯಿಂದ ಸಂಕಷ್ಟ

ಸ್ಯಾನ್​ಫ್ರಾನ್ಸಿಸ್ಕೊ: ಅಮೆರಿಕದ ಹಲವು ರಾಜ್ಯಗಳಲ್ಲಿ ಉಷ್ಣಾಂಶ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಕಾಳ್ಗಿಚ್ಚಿನ ಭೀತಿ ಆವರಿಸಿದೆ. ಬೆಂಕಿ ಅನಾಹುತವಾಗಬಹುದು ಎಂಬ ಮುನ್ಸೂಚನೆಯ ಹಿನ್ನೆಲೆಯಲ್ಲಿ ಹಲವು ಗ್ರಾಮ, ನಗರಗಳಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ.
ಅಮೆರಿಕದ ಪಶ್ಚಿಮ ಪ್ರಾಂತ್ಯಗಳಲ್ಲಿ ಬೆಂಕಿಯ ಉಪಟಳ ಹೆಚ್ಚಾಗಿದೆ. ಒಳನಾಡು ಮತ್ತು ಮರುಭೂಮಿ ಪ್ರದೇಶಗಳಲ್ಲಿ ಉಷ್ಣಾಂಶ ಏರಿಕೆ ಕಾಣುತ್ತಿದೆ. ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿ ಶನಿವಾರ ಉಷ್ಣಾಂಶ 53 ಡಿಗ್ರಿ ಸೆಂಟಿಗ್ರೇಡ್ ತಲುಪಿತ್ತು. ಭಾನುವಾರ 54 ಡಿಗ್ರಿ ಸೆಂಟಿಗ್ರೇಡ್​ ಉಷ್ಣಾಂಶ ವರದಿಯಾಗಿತ್ತು.ಈ ಭಾಗದಲ್ಲಿ ಜುಲೈ 1913ರಲ್ಲಿ ದಾಖಲಾಗಿದ್ದ 57 ಡಿಗ್ರಿ ಉಷ್ಣಾಂಶ ಈವರೆಗಿನ ಅತ್ಯುಧಿಕ ಉಷ್ಣಾಂಶ ಎನಿಸಿದೆ.
ನೆವಾಡ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಕುರುಚಲು ಕಾಡುಗಳಲ್ಲಿ ಕಾಳ್ಗಿಚ್ಚು ವ್ಯಾಪಿಸಿದೆ. ನೆವಾಡ ರಾಜ್ಯದ ವಾಶೊಯ್ ಕೌಂಟಿ ಪ್ರದೇಶದಲ್ಲಿ ಜನರ ಜೀವ ಮತ್ತು ಆಸ್ತಿಗೆ ಧಕ್ಕೆಯೊದಗುವ ಅಪಾಯ ಎದುರಾಗಿದೆ. ಜನರು ಮತ್ತು ಜಾನುವಾರುಗಳ ರಕ್ಷಣೆಗೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿ ಅಗ್ನಿಶಾಮಕ ಇಲಾಖೆ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದೆ.
ಈ ಪ್ರದೇಶದಲ್ಲಿ ಬೀಸುತ್ತಿರುವ ಪ್ರಬಲ ಗಾಳಿಯು ಕಾಳ್ಗಿಚ್ಚು ವೇಗವಾಗಿ ಹಬ್ಬಲು ನೆರವಾಗುತ್ತಿದೆ. ಕೇವಲ ಮೂರು ದಿನಗಳಲ್ಲಿ 311 ಚದರ ಕಿಲೋಮೀಟರ್​ಗಳಷ್ಟು ಪ್ರದೇಶಕ್ಕೆ ಕಾಳ್ಗಿಚ್ಚು ವಿಸ್ತರಿಸಿದೆ. ವಾತಾವರಣದ ಉಷ್ಣಾಂಶ ಮತ್ತು ಕಾಳ್ಜಿಚ್ಚಿನಿಂದ ಉಷ್ಣ ಸಂಬಂಧಿ ಕಾಯಿಲೆಗಳು ಹೆಚ್ಚಾಗಬಹುದು ಎಂದು ರಾಷ್ಟ್ರೀಯ ಹವಾಮಾನ ಸೇವೆ (National Weather Service) ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವುದರಿಂದ ಜನರು ಹವಾನಿಯಂತ್ರಕಗಳ ಬಳಕೆ ಹೆಚ್ಚು ಮಾಡಿದ್ದಾರೆ. ಇದರ ಜೊತೆಗೆ ಅರಣ್ಯ ಪ್ರದೇಶಗಳಲ್ಲಿ ವ್ಯಾಪಿಸುತ್ತಿರುವ ಕಾಳ್ಗಿಚ್ಚಿನಿಂದ ಪವರ್​ ಗ್ರಿಡ್​ನ ಹೆಚ್ಚಿನ ಸಾಮರ್ಥ್ಯದ ವೈರ್​ಗಳಿಗೂ ಧಕ್ಕೆಯಾಗುವ ಅಪಾಯವಿದೆ ಎಂದು ಕ್ಯಾಲಿಫೋರ್ನಿಯಾ ಪವರ್​ ಗ್ರಿಡ್​ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಕ್ಯಾಲಿಫೋರ್ನಿಯಾದ ಪಾಮ್​ ಸ್ಪ್ರಿಂಗ್ಸ್​ನಲ್ಲಿ ಉಷ್ಣಾಂಶ 49 ಡಿಗ್ರಿ ಸೆಂಟಿಗ್ರೇಡ್ ದಾಟಿದೆ. ಕ್ಯಾಲಿಫೋರ್ನಿಯಾದ ಕೃಷಿ ವಲಯದ ಕಣಿವೆಗಳಲ್ಲಿ ಉಷ್ಣಾಂಶ 44 ಡಿಗ್ರಿ ತಲುಪಿದೆ. ಲಾಸ್​ವೆಗಾಸ್​ನಲ್ಲಿ ಶನಿವಾರ 47 ಡಿಗ್ರಿ ಉಷ್ಣಾಂಶ ದಾಖಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement