ನಮಗೆ ಭಯ ಇರದವರು ಬೇಕು, ಹೆದರುವವರು ಆರ್​ಎಸ್​ಎಸ್​​ಗೆ ಹೋಗಬಹುದು’:ಪಕ್ಷ ತೊರೆದವರಿಗೆ ರಾಹುಲ್ ಗಾಂಧಿ ಟಾಂಗ್‌

ನವದೆಹಲಿ: ಭಯ ಇರದ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬೇಕು. ಪಕ್ಷದಲ್ಲಿ ಇರುವುದಕ್ಕೆ ಭಯಪಡುವವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪಕ್ಷದ ಸಾಮಾಜಿಕ ಜಾಲತಾಣದ ತಂಡದೊಂದಿಗೆ ನಡೆಸಿದ ಮಾತುಕತೆಯ ವೇಳೆ ಅವರು ಈ ಮಾತನ್ನು ಹೇಳಿದ್ದಾರೆ. ತನ್ಮೂಲಕ, ಕಾಂಗ್ರೆಸ್ ಪಕ್ಷ ತೊರೆದ ಹಾಗೂ ಪಕ್ಷಕ್ಕೆ ಸಮಸ್ಯೆ ಉಂಟಾಗುವಂತೆ ವ್ಯವಹರಿಸುತ್ತಿರುವ ನಾಯಕರಿಗೆ ಕಟು ಸಂದೇಶ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಹೊರಗೂ ಕೆಲವು ಸಮರ್ಥರಿದ್ದಾರೆ. ಅಂಥವರನ್ನು ಕಾಂಗ್ರೆಸ್ ಪಕ್ಷದ ಒಳಕ್ಕೆ ಕರೆತರಬೇಕಾಗಿದೆ ಎಂದು ಹೇಳಿದ ರಾಹುಲ್‌ ಗಾಂಧಿ, ನಮ್ಮ ಪಕ್ಷದಲ್ಲಿ ಭಯಪಟ್ಟು ಇರುವವರಿದ್ದಾರೆ ಅಂಥವರು ಪಕ್ಷ ಬಿಟ್ಟು ಆರ್​ಎಸ್​ಎಸ್​ ಕಡೆಗೆ ಹೋಗಬಹುದು. ಅಂಥವರು ನಮಗೆ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಮಗೆ ಹೆದರದ ವ್ಯಕ್ತಿಗಳು, ನಾಯಕರು ಬೇಕು. ಅದು ನನ್ನ ಸಂದೇಶ. ಹೆದರುವವರು ಬೇಡ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಆಪ್ತ ವಲಯದಲ್ಲಿದ್ದ ಸದ್ಯ ಬಿಜೆಪಿಯಲ್ಲಿರುವ ಕೇಂದ್ರ ಸಚಿವ ಜೋತಿರಾದಿತ್ಯ ಸಿಂಧಿಯಾ ಹಾಗೂ ಉತ್ತರ ಪ್ರದೇಶದ ಜಿತಿನ್ ಪ್ರಸಾದ್ ಬಗ್ಗೆ ಪರೋಕ್ಷವಾಗಿ ಟೀಕಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ.
ರಾಹುಲ್ ಗಾಂಧಿ ತಮ್ಮ ಹೇಳಿಕೆಯ ಮೂಲಕ ಜಿ 23 ನಾಯಕರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಜಿ 23 ನಾಯಕರು ಇತ್ತೀಚೆಗಷ್ಟೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪಕ್ಷದ ನಾಯಕತ್ವದ ಬಗ್ಗೆ ಪತ್ರ ಬರೆದಿದ್ದರು.ಪಕ್ಷಕ್ಕೆ ಪೂರ್ಣಪ್ರಮಾಣದ, ದೂರದೃಷ್ಟಿಯುಳ್ಳ ನಾಯಕತ್ವ ಬೇಕು ಎಂದು ಪತ್ರದಲ್ಲಿ ತಿಳಿಸಿದ್ದರು.
ಜೊತೆಗೆ ಮುಂದೆ ಬರಲಿರುವ ಕೆಲವು ರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಶಾಂತ್ ಕಿಶೋರ್ ಹಾಗೂ ರಾಹುಲ್ ಗಾಂಧಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ