ಬಿಎಸ್‌ವೈ ಬದಲಾವಣೆ ಬೇಡ, ಬೆಂಗಳೂರಲ್ಲಿ 500 ಮಠಾಧೀಶರ ಸೇರಿಸಿ ಸಭೆ ಮಾಡ್ತೇವೆ: ದಿಂಗಾಲೇಶ್ವರ ಶ್ರೀ

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ, ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಕೆಳಗಿಳಿಯುತ್ತಾರೆಂಬ ಊಹಾಪೋಹಗಳ ಮಧ್ಯೆ ಲಿಂಗಾಯತ ಮಠಾಧಿಪತಿಗಳು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಬಿಜೆಪಿ ಹೈಕಮಾಂಡಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದ 20ಕ್ಕೂ ಹೆಚ್ಚು ಮಠಾಧಿಪತಿಗಳು ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ವೀರಶೈವ-ಲಿಂಗಾಯತ ರಾಜಕೀಯ ಮುಖಂಡರು ಕೂಡ ಯಡಿಯೂರಪ್ಪ ಬದಲಾವಣೆಗೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಈ ಮಠಾಧೀಶರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿರುವುದು ರಾಜಕೀಯವಾಗಿ ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ್ದ ಮಠಾಧೀಶರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚರ್ಚೆ ನಡೆಸಿದರು.
ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ 20 ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಮಠಾಧೀಶರ ಪರವಾಗಿ ಮಾತನಾಡಿರುವ ದಿಂಗಾಲೇಶ್ವರ ಸ್ವಾಮೀಜಿ ,ಯಡಿಯೂರಪ್ಪ ಇದ್ದಾಗ ಮಾತ್ರ ಬದಲಾವಣೆ ಪ್ರಶ್ನೆ ಉದ್ಭವ ಆಗುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.
ಹೈಕಮಾಂಡ್ ತೀರ್ಮಾನವೇ ಅಂತಿಮ. ಅವರು ಏನು ಹೇಳುತ್ತಾರೋ ಹಾಗೆ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆ ಮಾಡಬಾರದು ಎನ್ನುವುದು ನಮ್ಮ ಒತ್ತಾಯ” ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.
ಇಲ್ಲಿ ಲಿಂಗಾಯತರ ಪ್ರಶ್ನೆ ಬರುವುದಿಲ್ಲ. ಪ್ರಶ್ನೆ ಇರುವುದು ಯಡಿಯೂರಪ್ಪ ಪರಿಶ್ರಮ ಪಟ್ಟಿದಾರೆ ಎಂಬುದು. ಯಡಿಯೂರಪ್ಪ ಇದ್ದಾಗ ಮಾತ್ರ ಬದಲಾವಣೆ ಪ್ರಶ್ನೆ ಉದ್ಭವ ಆಗುತ್ತಿರುವುದು ಯಾಕೆ? ಮುಂದಿನ ದಿನಗಳಲ್ಲಿ ಬೆಂಗಳೂರಲ್ಲಿ ಮಠಾಧೀಶರೆಲ್ಲ ಸೇರಿ ಸಭೆ ಮಾಡುತ್ತೇವೆ. ಐದಾರು ನೂರು ಮಠಾಧೀಶರು ಬಹುದೊಡ್ಡ ಸಭೆ ನಡೆಸುತ್ತೇವೆ. ಆ ಸಭೆ ಬಳಿಕ ನಾವು ಮುಂದಿನ ತೀರ್ಮಾನ ಮಾಡುತ್ತೇವೆ” ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.
ಈಗ ಜುಲೈ 26ರಂದು ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಆಗುತ್ತದೆಯಾ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ ಹಾಗೂ ಚರ್ಚೆಗೆ ಗ್ರಾಸ ಒದಗಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ