ದೆಹಲಿಗೆ ಹೊರಟಿದ್ದ ಸಿಎಂ ಆಪ್ತ ಶಾಸಕರ ನಿಯೋಗಕ್ಕೆ ಬ್ರೇಕ್‌ ಹಾಕಿದ ಸಿಎಂ ಬಿಎಸ್‌ವೈ..!

ಬೆಂಗಳೂರು: ದೆಹಲಿ ಬಿಜೆಪಿ ಹೈಕಮಾಂಡ್ ಭೇಟಿಗೆ ಮುಂದಾಗಿದ್ದ ತಮ್ಮ ಆಪ್ತ ಶಾಸಕರ ಬಣದ ನಿಯೋಗಕ್ಕೆ ದೆಹಲಿ ಪ್ರವಾಸ ಕೈಗೊಳ್ಳದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ನೇತೃತ್ವದ ಶಾಸಕರ ನಿಯೋಗ ಪ್ರವಾಸ ರದ್ದುಗೊಳಿಸಿದೆ ಎಂದು ತಿಳಿದುಬಂದಿದೆ.
ಇಂದು (ಮಂಗಳವಾರ) ರಾತ್ರಿ ದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ದೆಹಲಿಗೆ ತೆರಳಲು ಹೊನ್ನಾಳಿಯಿಂದ ಬೆಂಗಳೂರಿಗೆ ಬಂದಿದ್ದರು. ಆದರೆ ದೂರವಾಣಿ ಕರೆ ಮಾಡಿದ ಯಡಿಯೂರಪ್ಪ, ದೆಹಲಿಗೆ ತೆರಳದಂತೆ ಸೂಚನೆ ನೀಡಿದರು. ಹೀಗಾಗಿ ಶಾಸಕರ ನಿಯೋಗ ತನ್ನ ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದುಪಡಿಸಿದ್ದು, ಮತ್ತೊಮ್ಮೆ ಹೈಕಮಾಂಡ್ ನಾಯಕರ ಅನುಮತಿ ಪಡೆದ ನಂತರ ತೆರಳಲು ನಿರ್ಧರಿಸಿದೆ ಎನ್ನಲಾಗಿದೆ.
ನಾಯಕತ್ವ ಬದಲಾವಣೆ ಮಾಡದಂತೆ ಹೈಕಮಾಂಡ್‍ಗೆ ಮನವಿ ಸಲ್ಲಿಸಿ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು ಎಂದು ಆಗ್ರಹಿಸಿದ್ದ ರೇಣುಕಾಚಾರ್ಯ, ಈ ಹಿಂದೆ ಅರುಣ ಸಿಂಗ್‌ ಭೇಟಿ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಪರ ಶಾಸಕರ ಸಹಿ ಸಂಗ್ರಹಿಸಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂಬ ಶಾಸಕರ ಸಹಿಯುಳ್ಳ ಪತ್ರವನ್ನು ಹೈಕಮಾಂಡ್‍ಗೆ ನೀಡಿ ಯಡಿಯೂರಪ್ಪ ಅವರ ಮುಂದುವರಿಕೆಗೆ ಮನವಿ ಮಾಡಲು ಈ ನಿಯೋಗ ದೆಹಲಿಗೆ ತೆರಳಲು ನಿರ್ಧರಿಸಿತ್ತು ಎನ್ನಲಾಗಿದೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ಅದಕ್ಕೆ ಬ್ರೇಕ್‌ ಹಾಕಿದ್ದಾರೆ.
# ದೆಹಲಿ ವಿಶೇಷ ಪ್ರತಿನಿಧಿ ಜೊತೆ ಸಭೆ:
ದೆಹಲಿಗೆ ತೆರಳದಂತೆ ಮುಖ್ಯಮಂತ್ರಿಗಳ ಸೂಚನೆ ಬರುತ್ತಿದ್ದಂತೆ. ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ ಅವರನ್ನು ಸಂಪರ್ಕಿಸಿದ ರೇಣುಕಾಚಾರ್ಯ ದೆಹಲಿ ಪ್ರವಾಸ ರದ್ದುಪಡಿಸಿರುವ ಮಾಹಿತಿ ನೀಡಿದರು.
ನಂತರ ಬೆಂಗಳೂರಿನಲ್ಲಿಯೇ ಇದ್ದ ಪಾಟೀಲï, ರೇಣುಕಾಚಾರ್ಯ ಅವರ ಸರ್ಕಾರಿ ನಿವಾಸಕ್ಕೆ ಆಗಮಿಸಿದರು. ಉಭಯ ನಾಯಕರು ಕೆಲಕಾಲ ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್ ನಾಯಕರ ಭೇಟಿ ಮಾಡಿದ್ದ ವೇಳೆ ಅವರ ಜೊತೆ ಶಂಕರಗೌಡ ಪಾಟೀಲ್ ಕೂಡ ಉಪಸ್ಥಿತರಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆದ ಘಟನೆಗಳೇನು ಎನ್ನುವ ಕುರಿತು ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement