ನಾಯಕತ್ವ ಬದಲಾವಣೆ : ಹೈಕಮಾಂಡಿಗೆ ಯಡಿಯೂರಪ್ಪ ಮನಸ್ಥಿತಿಯೇ ಮುಖ್ಯ..ಇಲ್ಲದಿದ್ದರೆ ಮುಂದೆ ಕಷ್ಟಕಷ್ಟ..?

ರಘುಪತಿ ಯಾಜಿ

ಹುಬ್ಬಳ್ಳಿ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ಕೇಂದ್ರ ಬಿಜೆಪಿ ಮುಂದಾಗಿದೆ ಎಂದು ಹೇಳಲಾಗುತ್ತಿದ್ದು ಆದರೆ ವರಿಷ್ಠರಿಗೆ ಈ ತೀರ್ಮಾನವನ್ನು ಅಷ್ಟು ಸುಲಭವಾಗಿ ಕಾರ್ಯಗತಗೊಳಿಸುವುದು ಕಷ್ಟಸಾಧ್ಯ.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಡೀ ಲಿಂಗಾಯತ ಸಮುದಾಯ ಪಕ್ಷಾತೀತವಾಗಿ ಬೆನ್ನಿಗೆ ನಿಲ್ಲುವಂತೆ ತೋರುತ್ತಿದ್ದು, ಇದು ಬಿಜೆಪಿಗೆ ಬೆಂಬಲಿಸುತ್ತ ಬಂದಿರುವ ಲಿಂಗಾಯತ ಮತಗಳು ಕೈತಪ್ಪಿ ಹೋಗಲಿದೆಯೇ ಎಂಬ ಲೆಕ್ಕಾಚಾರವೂ ನಡೆದಿದೆ.
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಿಸಿ ಬೇರೊಬ್ಬರನ್ನು ಅವರ ಜಾಗಕ್ಕೆ ಕರೆತರುವುದು ಅಷ್ಟು ಸುಲಭವಲ್ಲ ಎಂಬುದು ಬಿಜೆಪಿಗೆ ಗೊತ್ತಿದೆ. ಆದರೆ ಯಡಿಯೂರಪ್ಪ ಅವರನ್ನು ಮುಂದುವರಿಸುವಂತೆಯೂ ಇಲ್ಲ, ಮುಂದುವರಿಸದೇ ಇರುವಂತೆಯೂ ಇಲ್ಲ ಎಂಬ ಸ್ಥಿತಿಯಲ್ಲಿದೆ. ಈ ಗೊಂದಲದಲ್ಲಿರುವಾಗಲೇ ಯಡಿಯೂರಪ್ಪ ಅವರನ್ನು ನಾಯಕತ್ವದಿಂದ ಪದಚ್ಯುತಿಗೊಳಿಸದಂತೆ ಪಕ್ಷಾತೀತವಾಗಿ ಲಿಂಗಾಯತ ಸಮುದಾಯದ ಬೆಂಬಲ ವ್ಯಕ್ತವಾಗಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ ಅಥವಾ ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿದ್ದರೆ ಅದು ನಾಯಕತ್ವ ಬದಲಾವಣೆಗೆ ಇಷ್ಟೊಂದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗಿಂತ ಕಡಿಮೆ ಸ್ಥಾನ ಪಡೆದಿರುವುದು, ಮುಂದಿನ ವರ್ಷದ ಆರಂಭದಲ್ಲಿ ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಿಂದ ಬಿಜೆಪಿ ಹೈಕಮಾಂಡ್‌ ಎಚ್ಚರಿಕೆ ಹೆಜ್ಜೆ ಇಡುತ್ತಿದೆ.
ಈವರೆಗೂ ಯಡಿಯೂರಪ್ಪ ನಾಯಕತ್ವಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ, ಅದರ ಅಧ್ಯಕ್ಷ ಹಾಗೂ ಕಾಂಗ್ರೆಸ್‍ನ ಹಿರಿಯ ಮುಖಂಡ ಶ್ಯಾಮನೂರು ಶಿವಶಂಕರಪ್ಪ, ಪ್ರಭಾವಿ ಮುಖಂಡ ಎಂ.ಬಿ.ಪಾಟೀಲ್ ಸೇರಿದಂತೆ ಅನೇಕರು ಬಹಿರಂಗವಾಗಿಯೇ ಯಡಿಯೂರಪ್ಪ ನಾಯಕತ್ವಕ್ಕೆ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ನಾಡಿನ ಪ್ರಭಾವಿ ಮಠಗಳು, ಧಾರ್ಮಿಕ ಮುಖಂಡರು, ಮಠಾಧೀಶರು ಸೇರಿದಂತೆ ಅನೇಕರು ಮುಖ್ಯಮಂತ್ರಿ ಬೆಂಬಲಕ್ಕೆ ಬಹಿರಂಗವಾಗಿಯೇ ಅಖಾಡಕ್ಕಿಳಿದಿರುವುದು ಹೈಕಮಾಂಡಗೆ ಎಚ್ಚರಿಕೆ ಹೆಜ್ಜೆ ಇಡುವಂತೆ ಮಾಡಿದೆ.
bimba pratibimbaನವದೆಹಲಿಯಲ್ಲಿ ಭೇಟಿಯಾದ ವೇಳೆ ಯಡಿಯೂರಪ್ಪ ಅವರು ಗೌರವಯುತವಾಗಿ ಅಧಿಕಾರದಿಂದ ನಿರ್ಗಮಿಸಬಹುದೆಂಬ ಲೆಕ್ಕಾಚಾರ ಕೇಂದ್ರ ನಾಯಕರದ್ದಾಗಿತ್ತು. ಹೀಗಾಗಿ ಯಾವುದೇ ಪರ್ಯಾಯ ನಾಯಕತ್ವಕ್ಕೆ ಮಣೆ ಹಾಕುವುದು ಸುಲಭವಾಗಲಿದೆ ಎಂಬ ಲೆಕ್ಕಾಚಾರ ಬಿಜೆಪಿ ಹೈಕಮಾಂಡಿನದಾಗಿತ್ತು.
ಆದರೆ, ಯಡಿಯೂರಪ್ಪನವರಿಗೆ ಪ್ರತಿಪಕ್ಷವಾದ ಕಾಂಗ್ರೆಸ್‍ನ ನಾಯಕರೇ ಬೆಂಬಲ ಸೂಚಿಸುತ್ತಿರುವುದು, ಮಠಾಧೀಶರ ಬೆಂಬಲ ವ್ಯಕ್ತವಾಗುತ್ತಿರುವುದು, ಸಮುದಾಯದ ನಾಯಕನನ್ನು ಬಿಜೆಪಿ ಹೈಕಮಾಂಡ್‌ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಬಿಂಬಿಸಲು ಕಾಂಗ್ರೆಸ್‌ ಲಿಂಗಾಯತ ನಾಯಕರು ಪ್ರಯತ್ನಿಸಿರುವುದು ನಾಯಕತ್ವ ಬದಲಾವಣೆ ವಿಚಾರವನ್ನು ಮತ್ತಷ್ಟು ಕಗ್ಗಂಟಾಗುವಂತೆ ಮಾಡಿದೆ. ಇದೇ ವೇಳೆ ಯಡಿಯೂರಪ್ಪ ಪರ ಸಹಾನುಭೂತಿ ಹೆಚ್ಚಾಗುವಂತೆ ಮಾಡಿದೆ.
ರಾಜ್ಯದ ಪ್ರಭಾವಿ ಲಿಂಗಾಯಿತ ಸಮುದಾಯದ ನಾಯಕನಾಗಿರುವ ಯಡಿಯೂರಪ್ಪನವರನ್ನು ಏಕಾಏಕಿ ಅಧಿಕಾರದಿಂದ ಪದಚ್ಯುತಿಗೊಳಿಸಿದರೆ ಸಮುದಾಯದ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಇದು 2023ರ ವಿಧಾನಸಭೆ ಹಾಗೂ 2024ರ ಲೋಕಸಭೆ ಚುನಾವಣೆಗೆ ಮುಳುವಾಗಬಹುದು ಎಂಬ ಆತಂಕ ವರಿಷ್ಠರಿಗೆ ಇದ್ದೇ ಇದೆ.
ಯಡಿಯೂರಪ್ಪನವರನ್ನು ಬಲವಂತವಾಗಿ ಇಲ್ಲವೇ ಒತ್ತಾಯದಿಂದ ಇಳಿಸುವಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ. ಅವರ ಸಾಮರ್ಥ್ಯ ಏನೆಂಬುದು ತಿಳಿದಿದೆ. ಗೌರವಯುತವಾಗಿಯೇ ನಡೆಸಿಕೊಂಡೇ ಅನಾಯಕತ್ವ ಬದಲಾವಣೆ ಮಾಡಲು ಮುಂದಾಗಿ ಎಂದು ಕೆಲ ಬಿಜೆಪಿ ವರಿಷ್ಠರು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಯಡಿಯೂರಪ್ಪ ಒಬ್ಬ ಜನನಾಯಕ. ವೈಯಕ್ತಿಕವಾಗಿ ಅವರ ಮೇಲೆ ಏನೇ ಆರೋಪ-ಪ್ರತ್ಯಾರೋಪಗಳಿದ್ದರೂ ಬಿಜೆಪಿಯನ್ನು ಅಧಿಕಾರಕ್ಕೆ ತರಬಲ್ಲ ಸಾಮರ್ಥ್ಯ ಇರುವ ವ್ಯಕ್ತಿ, ಎಲ್ಲ ಜಾತಿ-ಸಮುದಾಯಗಳು ಹಾಗೂ ಕರ್ನಾಟಕದ ಉದ್ದಗಲಕ್ಕೂ ಅವರ ಬಗ್ಗೆ ಸಹಾನುಭೂತಿ ಹಾಗೂ ಬೆಂಬಲವಿದೆ ಎಂಬುದು ಹೈಕಮಾಂಡಿಗೆ ಗೊತ್ತಿದೆ. ಇತಿಹಾಸದಿಂದ ನಾವು ಪಾಠ ಕಲಿಯದಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಒಂದು ಸಮುದಾಯ ಯಾವ ರೀತಿ ಶಾಶ್ವತವಾಗಿ ದೂರವಾಗಿದೆಯೋ ಅದೇ ರೀತಿ ಬಿಜೆಪಿಗೂ ಆಗವ ಸಾಧ್ಯತೆ ಇದೆ. ಹೀಗಾಗಿ ಯಡಿಯೂರಪ್ಪ ಅವರನ್ನು ಗೌರವಯುತವಾಗಿಯೇ ನಡೆಸಿಕೊಂಡು ನಾಯಕತ್ವ ಬದಲಾವಣೆ ಮಾಡಬೇಕು ಎಂದು ಕೆಲವು ವರಿಷ್ಠರು ಸಲಹೆ-ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ಅವರನ್ನು ಅವಮಾನಕಾರಿಯಾಗಿ ಇಳಿಸಿದರೆ 2013ರ ಚುನಾವಣಾ ಫಲಿತಾಂಶ ನಮ್ಮ ಕಣ್ಣಮುಂದೆ ಇದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರನ್ನು ಅವಮಾನಕರ ರೀತಿಯಲ್ಲಿ ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ಈಗಲೂ ಕೂಡ ವೀರಶೈವ ಲಿಂಗಾಯತ ಸಮುದಾಯ ಕಾಂಗ್ರೆಸ್‌ನಿಂದ ದೂರವಿದೆ. ಇದೇರೀತಿ ಯಡಿಯೂರಪ್ಪ ಅವರನ್ನು ಅವಮಾನಕರವಾಗುವ ರೀತಿಯಯಲ್ಲಿ ಕೆಳಗಿಳಿಸಿದರೆ ಮುಂದಿನ ದಿನಗಳಲ್ಲಿ ಬಿಜೆಪಿಗೂ ತೊಂದರೆಯಾಗಬಹುದು ಎಂಬ ಲೆಕ್ಕಾಚಾರ ಈ ಸಲಹೆ-ಸೂಚನೆಗಳ ಹಿಂದಿದೆ ಎನ್ನಲಾಗಿದೆ.
ಯಡಿಯೂರಪ್ಪ ವಿಚಾರದಲ್ಲಿ ಈಗ ಸಮುದಾಯ ಬೆನ್ನ ಹಿಂದೆ ನಿಲ್ಲುವ ಲಕ್ಷಣ ಗೋಚರಿಸಿದ್ದು, ಹೀಗಾಗಿ ಬಿಜೆಪಿ ಹೈಕಮಾಂಡ್‌ ಅತ್ಯಂಯ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಯಾಕೆಂದರೆ ವೀರೇಂದ್ರ ಪಾಟೀಲರನ್ನು ಅಗೌರವಯುತವಾಗಿ ಕೆಳಗಿಳಿಸಿದ ನಂತರ ಲಿಂಗಾಯತ ಸಮುದಾಯ ಕಾಂಗ್ರೆಸ್‌ನಿಂದ ವಿಮುಖರಾದಂತೆ ಬಿಜೆಪಿಗೂ ಆದರೆ ಎಂಬ ಭಯ ಹಾಗೂ ದೂರಾಲೋಚನೆ ಮೇಲೆ ಬಿಜೆಪಿ ಹೆಜ್ಜೆ ಇಡುತ್ತಿದೆ. ಹೀಗಾಗಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವಾಗ ಗೌರವಯುತವಾಗಿ ನಡೆಸಿಕೊಂಡು ಸೂಕ್ತ ಸಂದರ್ಭ ಹಾಗೂ ಸಮಯದಲ್ಲಿ ಬದಲಾವಣೆ ಮಾಡುವ ಅವಕಾಶಕ್ಕಾಗಿ ಹೈಕಮಾಂಡ್‌ ಕಾಯುತ್ತಿದೆ. ಇದರಿಂದ ಯಡಿಯೂರಪ್ಪ ಅವರ ನಾಯಕತ್ವದ ಬದಲಾವಣೆಯೂ ಆಗಬೇಕು, ಪಕ್ಷಕ್ಕೂ ಹಾನಿ ಆಗಬಾರದು. ಹೀಗಾಗಿ ಬಿಜೆಪಿ ಹೈಕಮಾಂಡ್‌ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಈ ಕಾರಣಕ್ಕಾಗಿ ಜುಲೈ 26ರಂದು ಇದು ಸಂಭವಿಸಬಹುದು ಅಥವಾ ಇನ್ನೂ ಕೆಲವು ದಿನ ಮುಂದಕ್ಕೆ ಹೋಗಬಹುದು .ಅದು ಯಡಿಯೂರಪ್ಪ ಅವರ ಮನಸ್ಥಿತಿಯನ್ನು ಅವಲಂಬಿಸಿದೆ. ಅವರು ಹೈಕಮಾಂಡ್‌ ಹೇಳಿದಂತೆ ಸುಮ್ಮನಿದ್ದರೆಹೈಕಮಾಂಡ್‌ ಕೆಲಸ ಸುಲಭವಾಗುತ್ತದೆ. ಇಲ್ಲದಿದ್ದರೆ ಹೈ ಕಮಾಂಡಿಗೆ ಇದು ಕಷ್ಟಸಾಧ್ಯವಾಗಬಹುದು.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

5 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement