ಯಡಿಯೂರಪ್ಪ ಭೇಟಿ ಮಾಡಿದ ಸಿದ್ಧಗಂಗಾ ಶ್ರೀಗಳು: ಸಿಎಂ ಬದಲಾವಣೆ ಬೇಡ ಎಂದು ಬಿಜೆಪಿ ಹೈಕಮಾಂಡಿಗೆ ಆಗ್ರಹ

posted in: ರಾಜ್ಯ | 0

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನ ಕೆಳಗಿಳಿಸುತ್ತಾರೆ ಎಂದು ಸುದ್ದಿ ಹರಡಿದ ಬೆನ್ನಲ್ಲೇ ಮಠಾಧೀಶರೆಲ್ಲ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈಗಾಗಲೇ ಹಲವು ಮಠಾಧೀಶರು ಬಹಿರಂಗವಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದಾರೆ. ಬುಧವಾರ ತುಮಕೂರಿನ ಸಿದ್ಧಗಂಗಾ ಮಠಾಧೀಶರು ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು. ಈ ಮೂಲಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸಲು ಅವಕಾಶ ನೀಡಬೇಕು ಎಂಬ ಸ್ಪಷ್ಟ ಸಂದೇಶವನ್ನು ಸ್ವಾಮೀಜಿಗಳು ಹೈಕಮಾಂಡ್ ಗೆ ರವಾನಿಸಿದ್ದಾರೆ. ರಾಜ್ಯದ ಹಲವಾರು ಮಠಾಧೀಶರು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ.
ಮಳೆಗಾಲ ಆರಂಭವಾಗಿದೆ, ಕೋವಿಡ್ ಮೂರನೇ ಅಲೆಯ ಭೀತಿ ಕೂಡ ಎದುರಾಗಿದೆ, ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ ಇಂತಹ ಸಂದಿಗ್ಧ ಕಾಲದಲ್ಲಿ ಸಮರ್ಥ ನಾಯಕನ ಬದಲಾವಣೆ ಮಾಡುವುದು ಸರಿಯಲ್ಲ. ಬದಲಾವಣೆ ಮಾಡುವುದರಿಂದ ಸರ್ಕಾರ ಸುಭದ್ರವಾಗಿಯೂ ಇರಲಾರದು, ಜನರಿಗೆ ಒಳ್ಳೆಯ ಆಡಳಿತ ನೀಡಲು ಸಾಧ್ಯವಾಗುವುದಿಲ್ಲ. ಯಡಿಯೂರಪ್ಪ ಉತ್ತಮ ಆಡಳಿತ ನೀಡುತ್ತಿದ್ದಾರೆ.ಓರ್ವ ಪಕ್ಷಾತೀತ ನಾಯಕನಾಗಿದ್ದಾರೆ ಹೀಗಾಗಿ ಯಡಿಯೂರಪ್ಪನವರಿಗೆ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಹೇಳಿದರು.
ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಸಿದ್ಧಗಂಗಾ ಶ್ರೀಗಳು, ಕಳೆದು ಒಂದು ವಾರದಿಂದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸುದ್ದಿ ಹರಡುತ್ತಿದೆ. ಯಡಿಯೂರಪ್ಪ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಶಕ್ತಿ ಮೀರಿ ಕೆಲಸ ಮಾಡುವ ಅವರನ್ನು ಯಾಕೆ ಬದಲಾವಣೆ ಮಾಡಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಸಮರ್ಥ ನಾಯಕರಾದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಸಬೇಕು. ಅದಕ್ಕಾಗಿ ನಾವೆಲ್ಲರೂ ಬಂದಿದ್ದೇವೆ. ರಾಜೀನಾಮೆ ಕುರಿತಾಗಿ ಯಡಿಯೂರಪ್ಪ ಅವರು ನಮ್ಮ ಬಳಿ ಏನೂ ಹೇಳಿಲ್ಲ. ಆದರೆ ನಾವೆಲ್ಲ ಹೇಳುತ್ತೀದ್ದೇವೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದು ಹೇಳಿದರು.
ಈಗ ರಾಜ್ಯದಲ್ಲಿ ಸಂದಿಗ್ಧ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಮುಬದಲಾವಣೆ ಮಾಡುವುದು ಸರಿಯಲ್ಲ. ನಾವ್ಯಾರು ರಾಜಕಾರಣಿಗಳ ಜೊತೆ ಓಡಾಡುತ್ತಿಲ್ಲ. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂಬ ಅಪೇಕ್ಷೆ ನಮ್ಮದು ಎಂದು ಹೇಳಿದ್ದಾರೆ.
ಇದೇ ವೇಳೆ ಮಾಜಿ ಸಚಿವ ಎಚ್‌. ವಿಶ್ವನಾಥ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದಗಂಗಾ ಶ್ರೀಗಳು, ನಮ್ಮ ಮಠಗಳು ಯಾವುದೇ ರಾಜಕೀಯ ಮಾಡುತ್ತಿಲ್ಲ. ಯಾವುದೇ ರಾಜಕೀಯ ಪಕ್ಷದ ಜೊತೆ ಅಥವಾ ರಾಜಕಾರಣಿಗಳ ಜೊತೆಯೂ ನಾವಿಲ್ಲ. ಎಲ್ಲ ಮುಖ್ಯಮಂತ್ರಿಗಳಿಗೂ ಬೆಂಬಲ ಕೊಟ್ಟಿದ್ದೇವೆ. ಕೊರೊನಾ ಸಮಯದಲ್ಲೂ ನಾವೂ ಮಠಗಳನ್ನ ಬಂದ್‌ ಮಾಡದೆ ಕೆಲಸ ಮಾಡಿದ್ದೇವೆ. ಕೋವಿಡ್ ಕೇರ್ ಸೆಂಟರ್ ಗಳನ್ನ ಪ್ರಾರಂಭ ಮಾಡಿದ್ದೇವೆ. ನಾವು ಯಾವ ರಾಜಕಾರಣಿ ಪರ ಇಲ್ಲ ಎಂದು ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ