ಸಿಎಂ ಬದಲಾವಣೆ ಊಹಾಪೋಹದ ಮಧ್ಯೆಯೇ ಇಂದು ಸಂಪುಟ ಸಭೆ ಕರೆದ ಯಡಿಯೂರಪ್ಪ

posted in: ರಾಜ್ಯ | 0

ಬೆಂಗಳೂರು: ನಾಯಕತ್ವ ಬದಲಾವಣೆ ಊಹಾಪೋಗಳ ಮಧ್ಯೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಗುರುವಾರ) ಸಂಜೆ 4 ಗಂಟೆಗೆ ಸಚುವ ಸಂಪುಟದ ಸಭೆ ಕರೆದಿದ್ದಾರೆ.
ಕಳೆದ ಶುಕ್ರವಾರ ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್‌ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಬಂದಿದ್ದರು.
ಯಡಿಯೂರಪ್ಪ ಬೆಂಗಳೂರಿಗೆ ಬಂದ ಬಳಿಕ ಮತ್ತೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಮುನ್ನೆಲೆಗೆ ಬಂತು.ನಂತರ ಮೌನಕ್ಕೆ ಶರಣಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಒಳಗೊಳಗೆ ರೂಪಿಸಿದ ರಣತಂತ್ರಗಳಿಂದ ಸ್ವಾಮೀಜಿಗಳು, ಲಿಂಗಾಯತ ನಾಯಕರು ಪಕ್ಷಾತೀತವಾಗಿ ಯಡಿಯೂರಪ್ಪ ಬೆಂನಲಕ್ಕೆ ನಿಂತರು. ಹೀಗಾಗಿ ದಿನದಿಂದ ದಿನಕ್ಕೆ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತಲೇ ಇವೆ. ನಾಯಕತ್ವದ ಬದಲಾವಣೆ ಕುರಿತು ದಿನಕ್ಕೊಂದು ಸುದ್ದಿಗಳು ಹೊರಬರುತ್ತಿವೆ.
ಈ ಎಲ್ಲ ಊಹಾಪೋಹ ಹಾಗೂ ಗೊಂದಲಗಳ ನಡುವೆಯೇ ರಾಜ್ಯ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಸಂಜೆ 4 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಿಗದಿ ಮಾಡಲಾಗಿದೆ. ದೆಹಲಿಯಿಂದ ವಾಪಸ್ ಬಂದ ಮೇಲೆ ಎಲ್ಲ ಸಚಿವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿರಲಿಲ್ಲ. ಹೀಗಾಗಿ ಸಂಪುಟ ಸಭೆ ಮಹತ್ವ ಪಡೆದಿದೆ. ಅಲ್ಲಿ ಯಡಿಯೂರಪ್ಪ ಏನು ಹೇಳುತ್ತಾರೆ ಎಂಬ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಈ ಸಭೆಯಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಗೆ ನೇಮಕ, ಇತರೆ ಇಲಾಖೆ ಅಧಿಕಾರಿಗಳನ್ನು ನೇಮಿಸುವ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆಅಡಿ ನಗದು ರಹಿತ ವೈದ್ಯಕೀಯ ಸೌಲಭ್ಯ ಒದಗಿಸುವ ಬಗ್ಗೆ, ನಗರ, ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ವಸತಿ ಇಲಾಖೆ ಮೂಲಕ 6 ಲಕ್ಷ ಮನೆಗಳ ನಿರ್ಮಾಣ, ರಾಜ್ಯ ನಾಗರಿಕ ಸೇವಾ ನಿಯಮಗಳ ವಿಧೇಯಕ ತಿದ್ದುಪಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೇವಾ ನಿಯಮ ವಿಧೇಯಕ ತಿದ್ದುಪಡಿ ಬಗ್ಗೆ ಚರ್ಚೆ ಸಾಧ್ಯತೆ ಇದೆ. ಕೃಷಿ ವಿವಿಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಆವಿಷ್ಕಾರ ಅಳವಡಿಕೆ, ಖಾಸಗಿ ಕಂಪನಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಕೇಂದ್ರ ಸ್ಥಾಪನೆ ಬಗ್ಗೆಯೂ ಚಚರೆಯಾಗುವ ಸಾಧ್ಯತೆ ಇದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ