ಸಿಎಂ ಬಿಎಸ್‌ವೈ ಪರೋಕ್ಷ ರಾಜೀನಾಮೆ ಸುಳಿವು: ಮತ್ತೆ ಮುಂಚೂಣಿಗೆ ಬಂದ ಮುಂದಿನ ಸಿಎಂ ಪಟ್ಟಿಯಲ್ಲಿ ಅನೇಕ ಹೆಸರುಗಳು..!

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗುತ್ತಿದ್ದಂತೆ ಈ ಸ್ಥಾನಕ್ಕೆ ಯಾರು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಆರಂಭವಾಗಿದೆ..
ಗುರುವಾರ ಹೈಕಮಾಂಡಿನಿಂದ ಸೂಚನೆಗಾಗಿ ಕಾಯುತ್ತಿರುವುದಾಗಿ ತಿಳಿಸಿರುವ ಯಡಿಯೂರಪ್ಪ ಅವರು ಹೈಕಮಾಂಡ್‌ ಸೂಚನೆಯಂತೆ ನಡೆದುಕೊಳ್ಳುವುದಾಗಿ ಗುರುವಾರ ಮಾಧ್ಯಮಕ್ಕೆ ತಿಳಿಸುವ ಮೂಲಕ ರಾಜೀನೆಮ ಸುಳಿವನ್ನು ಪರೋಕ್ಷವಾಗಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಈಗ ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಬದಲಿಗೆ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿದೆ.
ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ಒಂದು ಡಜನ್ ಆಕಾಂಕ್ಷಿಗಳು ಇದ್ದಾರೆ. ಅಥವಾ ಅದಕ್ಕೂ ಹೆಚ್ಚಿದ್ದಾರೆ. ಆದರೆ ಹೈಕಮಾಂಡ್‌ ಯಾರನ್ನು ಮಾಡಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಹೈಕಮಾಂಡ್‌ ಈವರೆಗೆ ಯಾವ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಅನೇಕ ಮಟಾಧೀಶರು ಯಡಿಯೂರಪ್ಪ ಪರವಾಗಿ ಬಹಿರಂಗವಾಗಿ ನಿಂತಿದ್ದರಿಂದ ಬಿಜೆಪಿ ಹೈಕಮಾಂಡ್‌ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಆದರೆ ಹೆಸರು ಚಾಲ್ತಿಯಲ್ಲಿರುವವರ ದೆಹಲಿ ಭೇಟಿ ಹಾಗೂ ಕಾಶಿ ಭೇಟಿ ಮುಂದುವರಿದಿದೆ. ಈಗ ಎದ್ದಿರುವ ಪ್ರಶ್ನೆಯೆಂದರೆ ಹೆಸರು ಕೇಳಿಬರುತ್ತಿರುವವರಲ್ಲಿ ಯಾರನ್ನು ಮಾಡುತ್ತಾರೆ ಅಥವಾ ಇವರಲ್ಲದೆ ಬೇರೆಯವರಿಗೆ ಮಣೆ ಹಾಕುತ್ತಾರೆಯೋ ಎಂಬುದು ಹೈಕಮಾಂಡ್‌ ಸುಳಿವು ಬಿಟ್ಟುಕೊಡುತ್ತಿಲ್ಲ.
ಆದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಸಂಪುಟದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್, ಉಪಮುಖ್ಯಮಂತ್ರಿಗಳಾದ ಗೋವಿಂದಕಾರಜೋಳ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಶಾಸಕರಾದ ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕ ಹೆಸರುಗಳು ಚಾಲ್ತಿಯಲ್ಲಿವೆ.
ಸಾಧ್ಯಾಸಾಧ್ಯತೆಗಳ ಬಗ್ಗೆ ಒಂದು ಅವಲೋಕನ..:
ಸಿ.ಟಿ.ರವಿ: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಆಗಿರುವ ಸಿ.ಟಿ.ರವಿ, ಸಂಘ ಪರಿವಾರದ ಹಿನ್ನೆಲೆಯಿಂದ ಬಂದ ನಾಯಕ. ಪಕ್ಷದ ಸೂಚನೆಯಂತೆ ಸಚಿವ ಸ್ಥಾನ ತೊರೆದು ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡವರು. ಸಂಘಟನಾ ಸಾಮರ್ಥ್ಯ ಹೊಂದಿರುವ ಇವರು ಮತದಾರರನ್ನು ಒಗ್ಗೂಡಿಸಬಲ್ಲ ಶಕ್ತಿ ಹೊಂದಿದ್ದಾರೆ. ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅನುಭವ ಹೊಂದಿರುವ ಇವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಹಾಗೂ ನಾಲ್ಕು ಬಾರಿ ಶಾಸಕರಾಗಿದ್ದಾರೆ.
ಡಾ.ಸಿ.ಎನ್.ಅಶ್ವತ್ಥ ನಾರಾಯಣ: ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಐಟಿಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವರಾಗಿರುವ ಇವರು ವೃತ್ತಿಯಲ್ಲಿ ವೈದ್ಯರು. ಬೆಂಗಳೂರಿನ ಮಲ್ಲೇಶ್ವರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗುತ್ತ ಬಂದಿದ್ದಾರೆ. ಇವರನ್ನು ಬಿಜೆಪಿಯ ಯುವ ಮುಖವಾಗಿ ನೋಡಲಾಗುತ್ತಿದೆ. ಇವರ ಹೆಸರೂ ಚಾಲ್ತಿಯಲ್ಲಿದೆ.
ಪ್ರಲ್ಹಾದ್ ಜೋಷಿ: ಕೇಂದ್ರದ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಕೂಡ ಕರ್ನಾಟಕದ ಸಿಎಂ ಸ್ಥಾನಕ್ಕೆ ಪರಿಗಣಿಸುವ ಚರ್ಚೆ ನಡೆದಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಅನಂತ್ ಕುಮಾರ್ ನಂತರ ಪ್ರಲ್ಹಾದ್ ಜೋಶಿ ಉನ್ನತ ಸ್ಥಾನಮಾನ ಹೊಂದಿದ್ದಾರೆ. ನಾಲ್ಕು ಬಾರಿ ಸಂಸದರಾಗಿರುವ ಜೋಶಿ ಬಿಜೆಪಿ ಹೈಕಮಾಂಡಿಗೆ ಹೆಚ್ಚು ನಿಕಟವಾಗಿರುವವರು. ಇವರು ಆರೆಸ್ಸೆಸ್‌ ಹಿನ್ನೆಲೆಯಿಂದ ಬಂದಿರುವ ಇವರಿಗೆ ಆರ್‍ಎಸ್‍ಎಸ್ ಬೆಂಬಲವಿದೆ.
ಬಸವರಾಜ ಬೊಮ್ಮಾಯಿ: ರಾಮಕೃಷ್ಣ ಹೆಗಡೆ ಕಾಲದ ಜನತಾ ಪರಿವಾರದಿಂದ ಬೆಳೆದು ಬಂದ ನಾಯಕ ಬಸವರಾಜ ಬೊಮ್ಮಾಯಿ ಈಗ ರಾಜ್ಯದ ಗೃಹ ಸಚಿವರು. ಮುಖ್ಯಮಂತ್ರಿ ಯಡಿಯೂರಪ್ಪರ ಆಪ್ತ ಬಳಗದಲ್ಲಿರುವ ಗುರುತಿಸಿಕೊಂಡಿರುವ ಬೊಮ್ಮಾಯಿ 2008ರಲ್ಲಿ ಬಿಜೆಪಿ ಅಧೀಕಾರಕ್ಕೆ ಬಂದಾಗಲೂ ಜಲ ಸಂಪನ್ಮೂಲ ಖಾತೆ ಸಚಿವರಾಗಿ ಕೂಡಾ ಕಾರ್ಯ ನಿರ್ವಹಿಸಿದ್ದರು. ಉತ್ತರ ಕರ್ನಾಟಕದ ಪ್ರಮುಖ ಲಿಂಗಾಯತ ನಾಯಕರಲ್ಲೊಬ್ಬರು.
ಮುರುಗೇಶ್ ನಿರಾಣಿ: ಗಣಿಗಾರಿಕೆ ಹಾಗೂ ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ ಲಿಂಗಾಯತ ಪಂಚಮಸಾಲಿ ಸಮುದಾಯದಕ್ಕೆ ಸೇರಿದವರು. ಈ ಹಿಂದೆ ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಕೈಗಾರಿಕಾ ಸಚಿವರಾಗಿ ಕರ್ನಾಟಕಕ್ಕೆ ಬಂಡಾವಳ ಹೂಡಿಕೆಯ ರಹದಾರಿ ತೋರಿಸಿದವರು. 2008ರಲ್ಲಿ ಬಿಜೆಪಿ ಸರ್ಕಾರದಲ್ಲಿಯೂ ಕೈಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಆರ್‍ಎಸ್‍ಎಸ್ ಜೊತೆಯೂ ಗುರುತಿಸಿಕೊಂಡವರು.ಆದರೆ ಸಂಘಟನಾತ್ಮಕವಾಗಿ ಗುರುತಿಸಿಕೊಂಡವರಲ್ಲ.
ಅರವಿಂದ್ ಬೆಲ್ಲದ: ಎರಡು ಬಾರಿ ಶಾಸಕರಾಗಿರುವ ಅರವಿಂದ್ ಅವರನ್ನು ಬಿಜೆಪಿಯ ಯುವ ನಾಯಕ ಎಂದು ಹೇಳಲಾಗುತ್ತಿದೆ. ಹುಬ್ಬಳ್ಳಿ -ಗದಗ ಭಾಗದಲ್ಲಿ ಜನಪ್ರಿಯತೆ ಹೊಂದಿರುವ ಬೆಲ್ಲದ್ ಕುಟುಂಬ ಉದ್ಯಮದಲ್ಲೂ ಯಶಸ್ಸು ಪಡೆದಿದೆ. ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ ಅವರ ಪುತ್ರರಾದ ಇವರು ಆರೆಸ್ಸೆಸ್ ಬೆಂಬಲ ಹೊಂದಿರುವ ರಾಜಕಾರಣಿ. ಉತ್ತಮ ಇಮೇಜ್‌ ಹೊಂದಿದ್ದಾರೆ. ಜಾಗತಿಕ ವಿದ್ಯಮಾನಗಳು ಹಾಗೂ ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿದುಕೊಂಡವರು.
ಸುನಿಲಕುಮಾರ: ಯುವ ನಾಯಕರ ಆಯ್ಕೆ ಪ್ರಶ್ನೆ ಬಂದಾಗ ಬಿಜೆಪಿ ಹೈಕಮಾಂಡ್ ಇವರ ಹೆಸರನ್ನೂ ಪರಿಗಣಿಸಬಹುದಾಗಿದೆ. ಕರ್ನಾಟಕದ ಮುಖ್ಯ ವಿಪ್ ಆಗಿರುವ ಸುನಿಲಕುಮಾರ ಅವರು ಕರಾವಳಿ ಭಾಗದ ಬಿಜೆಪಿ ಮುಖಂಡರಾಗಿದ್ದಾರೆ. ಕೇರಳ ಬಿಜೆಪಿಯ ಸಹ ಪ್ರಭಾರಿಯಾಗಿದ್ದಾರೆ. ಪ್ರಖರ ಹಿಂದುತ್ವವಾದಿಯಾಗಿರುವ ಇವರು ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರು.
ಇವರಲ್ಲದೆ ಗೋವಿಂದ ಕಾರಜೋಳ, ಬಸನಗೌಡ ಪಾಟೀಲ ಯತ್ನಾಳ ಮೊದಲಾದ ಕೆಲವು ಹೆಸರುಗಳೂ ಚಾಲ್ತಿಯಲ್ಲಿವೆ. ಆದರೆ ಸಾಧ್ಯತೆಗಳು ಬಹಳ ಕಡಿಮೆ ಎನ್ನಲಾಗುತ್ತಿದೆ. ಇದರ ಹೊರತಾಗಿ ಅಚ್ಚರಿಯ ಆಯಕೆಯೂ ನಡೆಯಬಹುದಾಗಿದೆ. ಯಾಕೆಂದರೆ ಮುಂದಿನ ಚುನಾವಣೆ ಲೆಕ್ಕಾಚಾರದಲ್ಲಿ ಬಿಜೆಪಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement