ಕರ್ನಾಟಕ: ಬಿಜೆಪಿ ಕೇಂದ್ರ ನಾಯಕತ್ವಕ್ಕೆ ಬಿಎಸ್‌ವೈ ಮುಂದಿನ ನಡೆ ಏನೆಂದು ಅರಿಯುವುದೇ ಒಂದು ಸವಾಲು

posted in: ರಾಜ್ಯ | 0

 

ರಘುಪತಿ ಯಾಜಿ
ಕರ್ನಾಟಕದ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಬಲ ನಾಯಕ ಬಿ.ಎಸ್. ಯಡಿಯೂರಪ್ಪ ತಮ್ಮನ್ನು ತಾವು ಬಿಜೆಪಿಯ ಶಿಸ್ತಿನ ಸಿಪಾಯಿ” ಎಂದು ಹೇಳಿಕೊಂಡಿದ್ದಾರೆ ಮತ್ತು ಹೈಕಮಾಂಡ್‌ನ ನಿರ್ಧಾರಕ್ಕೆ ತಾವು ಬದ್ಧ ಎಂದು ಹೇಳಿದ್ದಾರೆ ಹಾಗೂ ತಮ್ಮ ಬೆಂಬಲಿಗರಿಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ಮಾಡದೆ ಶಾಂತವಾಗಿರಬೇಕು ಎಂದು ಸೂಚನೆಯನ್ನೂ ನೀಡಿದ್ದಾರೆ. ಆದರೆ ಸದ್ಯ ಯಡಿಯೂರಪ್ಪ ನಾಯಕತ್ವ ಬದಲು ಮಾಡಿದರೆ ಕರ್ನಾಟಕದ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಏನು ಎಂಬ ಬಿಜೆಪಿಯ ಕೇಂದ್ರ ನಾಯಕತ್ವದಲ್ಲಿಯೇ ವಿಭಿನ್ನ ಅಭಿಪ್ರಾಯಗಳಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಪಕ್ಷದ ಮೂಲಗಳು ಅಂತಿಮವಾಗಿ ಬಿಜೆಪಿಯ ಕರ್ನಾಟಕದ ಅತ್ಯಂತ ಪ್ರಬಲ ನಾಯಕ ಯಡಿಯುರಪ್ಪ ಅವರನ್ನು ನಿವೃತ್ತಿ ಮಾಡುವ ಸಮಯ ಬಂದಿದೆ – 75 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಿತಿಯನ್ನು ಬಿಜೆಪಿ ಸಾಮಾನ್ಯವಾಗಿ ನಾಯಕರು ಸಾರ್ವಜನಿಕ ಹುದ್ದೆ ಅಲಂಕರಿಸಲು ಅಲಿಖಿತವಾಗಿ ನಿಗದಿ ಪಡಿಸಿರುವುದರಿಂದ 78 ವರ್ಷ ವಯಸ್ಸಿನ ಯಡಿಯೂರಪ್ಪ ಅವರಿಗೆ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದೆ. ಜುಲೈ 26 ರಂದು ಅವರ ಪ್ರಸ್ತುತ ಅವಧಿಯಲ್ಲಿ. ಅವರು ಮುಖ್ಯಮಂತ್ರಿಯಾಗಿ ಎರಡು ವರ್ಷಗಳನ್ನು ಪೂರೈಸುತ್ತಾರೆ. ಅದರ ನಂತರ ಅವರು ಹೈಕಮಾಂಡ್‌ ಸೂಚನೆ ಮೇರೆಗೆ ರಾಜೀನಾಮೆ ನೀಡುತ್ತಾರೆ ಎಂಬುದು ಈಗ ಕರ್ನಾಟಕದಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಸುದ್ದಿ. ಆದರೆ ಜುಲೈ26 ಸಮೀಪಿಸುತ್ತಿದ್ದಂತೆಯೇ ಇಲ್ಲಿವರೆಗೆ ಚಿಂತೆಯಲ್ಲಿದ್ದ ಯಡಿಯೂರಪ್ಪ ಕಳೆದೆರಡು ದಿನಗಳಿಂದ ಅದಕ್ಕೆ ಸಿದ್ಧವಾದಂತೆ ಅವರ ಮಾತುಗಳಿಂದ ಮೇಲ್ಕೋಟಕ್ಕೆ ಕಾಣುತ್ತಿದೆ. ಆದರೆ ಬಿಜೆಪಿ ಹೈಕಮಾಂಡಿಗೆ ಮಾತ್ರ ಅವರ ನಂತರ ಕರ್ನಾಟಕದಲ್ಲಿ ಬಿಜೆಪಿಯ ರಾಜಕೀಯ ಭವಿಷ್ಯ ಏನು ಎಂಬುದರ ಚಿಂತೆ ಬಗೆಹರಿದಂತೆ ಕಾಣುತ್ತಿಲ್ಲ. ಇದರ ಜೊತೆಗೆ ನಡೆಯಲ್ಲಿ ಸ್ವಲ್ಪವೇ ಎಡವಟ್ಟಾದರೂ ಅದರಿಂದ ಬಿಜೆಪಿಗೆ ಒಂದೂವರೆ ವರ್ಷದಲ್ಲಿ ಬರುವ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾನಿಯಾಗಬಹುದು ಎಂಬ ಆತಂಕವೂ ಇದ್ದೇ ಇದೆ. ಈ ಕಾರಣಕ್ಕಾಗಿಯೇ ಅವರು ನಾಯಕತ್ವ ಬದಲಾದರೆ ಯಡಿಯೂರಪ್ಪ ಮುಂದೆ ಏನು ಮಾಡಬಹುದೆಂದುಹೆಚ್ಚು ಜಾಗರೂಕರಾಗಿರುವಂತೆ ತೋರುತ್ತಿದೆ. ಅದಕ್ಕಾಗಿಯೇ ನಾಯಕತ್ವ ಬದಲಾವಣೆಯನ್ನು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಹಾನಿಯಾಗದಂತೆ ಹೇಗೆ ಸುಖಾಂತ್ಯಗೊಳಿಸಿ ಡ್ಯಾಮೇಜ್‌ ಆಗದಂತೆ ನೋಡಿಕೊಳ್ಳುವುದು ಎಂಬ ಬಗ್ಗೆ ಹೆಚ್ಚು ಯೋಚಿಸಿರುವಂತೆ ಕಾಣುತ್ತಿದೆ. ಅದಕ್ಕಾಗಿಯೇ ಬಿಜೆಪಿ ಹೈಕಮಾಂಡ್‌ಎಚ್ಚರಿಕೆಯ ಹೆಜ್ಜೆಗಳನ್ನು ಇಡಲು ಹೊರಟಂತೆ ಕಾಣುತ್ತದೆ.

ಅದಕ್ಕೆ ಕಾರಣವೂ ಇದೆ. ಯಾಕೆಂದರೆ ಕರ್ನಾಟಕವು ಬಿಜೆಪಿ ಅಧಿಕಾರದಲ್ಲಿರುವ ಏಕೈಕ ದಕ್ಷಿಣ ರಾಜ್ಯ. ಇದು ಬಿಜೆಪಿ ಪಾಲಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿಯೂ ಸ್ಥಾನಗಳ ದೃಷ್ಟಿಯಿಂದಲೂ ನಿರ್ಣಾಯಕವೇ. ಯಾಕೆಂದರೆ ಕಳೆದ ಲೋಕಸಭೆಚುನಾವಣೆಯಲ್ಲಿ ಒಟ್ಟು 28ರಲ್ಲಿ ಬಿಜೆಪಿ 25ರಲ್ಲಿ ಗೆಲುವು ಸಾಧಿಸಿ ಅಭೂತಪೂರ್ವ ಸಾಧನೆ ಮಾಡಿದೆ. ಈ ಸಾಧನೆ ಮೂಲಕವೇ ಕೇಂದ್ರ ಬಿಜೆಪಿಯು ತೆಲಂಗಾಣ ಹಾಗೂ ಆಂಧ್ರದಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಯೋಚಿಸುತ್ತಿದೆ. ಕರ್ನಾಟಕದಲ್ಲಿ ಎಡವಿದರೆ ಅದು ಆಂಧ್ರಪ್ರದೇಶ ಹಾಗೂ ತೆಲಂಗಾಣದ ಪಕ್ಷದ ಬೆಳವಣಿಗೆಯ ಮೇಲೆಯೂ ಅದು ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರವೂ ಇದೆ.
ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಯಡಿಯೂರಪ್ಪನವರು ಯಾವ ದಾರಿಯಲ್ಲಿ ಹೋಗುತ್ತಾರೆ ಎಂಬುದು ಮುಖ್ಯವಾಗುತ್ತದೆ.ಆದರೆ ಯಡಿಯೂರಪ್ಪ ಅವರ ನಡೆ ಇನ್ನೂ ರಾಜ್ಯ ಬಿಜೆಪಿಯವರಿಗೇ ಸ್ಪಷ್ಟವಾಗಿ ಅರ್ಥವಾದಂತೆ ಕಾಣುತ್ತಿಲ್ಲ. ಯಡಿಯೂರಪ್ಪ ನಡೆ ಬಹುತೇಕ ಎಲ್ಲರಿಗೂ ಗೊಂದಲ ಉಂಟುಮಾಡುವಂತೆಯೇ ಇದೆ. ಬಿಜೆಪಿ ಹೈಕಮಾಂಡ್‌ ನಾಯಕತ್ವ ಬದಲಾವಣೆಯಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಸ್ವಲ್ಪ ಎಡವಿದರೂ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್‌ ಅನ್ನು ಧಿಕ್ಕರಿಸಿ ನಿಲ್ಲುವಷ್ಟು ಶಕ್ತಿಶಾಲಿ ಎಂಬುದು ಅದಕ್ಕೆ ಗೊತ್ತಿದೆ.2013ರಲ್ಲಿ ಯಡಿಯೂರಪ್ಪ ಬಿಜೆಪಿ ತೊರೆದು ಬೇರೆ ಪಕ್ಷ ಕಟ್ಟಿ ಸ್ವತಂತ್ರವಾಗಿ ಸ್ಪರ್ಧಿಸಿ ಬಿಜೆಪಿಯ ಅತ್ಯಂತ ಕಳಪೆ ಸಾಧನೆಗೆ ಕಾರಣವಾಗಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಅದನ್ನು ಈಗ ಸಾಬೀತು ಪಡಿಸುವ ಅಗತ್ಯವಿಲ್ಲ.
ಯಡಿಯೂರಪ್ಪ ಅವರನ್ನು ಇತ್ತೀಚಿನ ಭೇಟಿ ಮಾಡಿರುವ ಹಾಗೂ ಬೆಂಬಲಿಸಿ ಮಾತನಾಡಿರುವ ಲಿಂಗಾಯತ ನಾಯಕರು ಹಾಗೂ ಸ್ವಾಮೀಜಿಗಳನ್ನು ಕೇಂದ್ರ ನಾಯಕತ್ವವು ಒಂದು ಎಚ್ಚರಿಕೆಯಂತೆ ನೋಡಿದೆ. ಲಿಂಗಾಯತರು ಕರ್ನಾಟಕದಲ್ಲಿ ಪ್ರಬಲ ಸಮುದಾಯವಾಗಿದ್ದು, ಜನಸಂಖ್ಯೆಯ ಶೇಕಡಾ 17 ರಷ್ಟಿದ್ದಾರೆ, ಅವರು ಹೆಚ್ಚಾಗಿ ಉತ್ತರ ಕರ್ನಾಟಕ ಭಾಗದಲ್ಲಿದ್ದಾರೆ ಮತ್ತು ಒಟ್ಟು 224 ಅಸೆಂಬ್ಲಿ ಸ್ಥಾನಗಳಲ್ಲಿ 100 ಕ್ಕೂ ಹೆಚ್ಚುಕ್ಷೇತ್ರಗಳಲ್ಲಿ ಪ್ರಭಾವವನ್ನು ಹೊಂದಿದ್ದಾರೆ. ಯಾರು ಸರ್ಕಾರವನ್ನು ರಚಿಸುತ್ತಾರೆ ಎಂಬುದರ ಮೇಲೆ ಲಿಂಗಾಯತರು ನಿರ್ಣಾಯಕ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ರಾಜ್ಯದ ರಾಜಕೀಯ ಇತಿಹಾಸ ಸಾಕ್ಷಿಯಾಗಿದೆ.
ಯಡಿಯೂರಪ್ಪ ಅವರಿಗೆ ಬಹಿರಂಗವಾಗಿ ಬೆಂಬಲ ವ್ಯಕ್ತವಾಗುತ್ತಿರುವುದಕ್ಕೆ ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪ ಅವರ ಕಿರಿಯ ಮಗ ಬಿ.ವೈ. ವಿಜಯೀಂದ್ರ ಅವರಿಗೆ ಬಿಜೆಪಿ ಹೈಕಮಾಂಡ್‌ ತಮ್ಮ ಅಸಮಾದಾನ ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರು ತಮ್ಮ ಪರವಾಗಿ ಬೆಂಬಲಿಸಿ ಪ್ರತಿಭಟನೆ ಹಾಗೂ ಪ್ರದರ್ಶನ ಮಾಡಬೇಡಿ. ಎಂದು ಮನವಿ ಮಾಡಿ ಟ್ವೀಟ್‌ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಜುಲೈ 25 ರಂದು ಸ್ವಾಮೀಜಿಗಳು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಬೆಂಗಳೂರಿನಲ್ಲಿ ಪ್ರದರ್ಶನ ಮಾಡಲಿದ್ದು, ಅದರಲ್ಲಿ ನೂರಾರು ಸ್ವಾಮೀಜಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. ಹೀಗಾದರೆ ಪಕ್ಷಕ್ಕೆ ಕಷ್ಟವಾಗುತ್ತದೆ. ಹೀಗಾಗಿ ಇದು ಪದೇಪದೇ ನಡೆಯದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಯಡಿಯೂರಪ್ಪ ಹಿಂದುಳಿದ ವರ್ಗಗಳು ಮತ್ತು ದಲಿತರನ್ನು ಒಳಗೊಂಡ ವಿಶಾಲ ಒಕ್ಕೂಟದ ಮಹತ್ವವನ್ನು ಅರಿತುಕೊಂಡ ಕರ್ನಾಟಕದ ಬಿಜೆಪಿಯಲ್ಲಿ ಬಹುಶಃ ಮೊದಲಿಗರು. ಅದಕ್ಕಾಗಿಯೇ ಅವರು ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಕೆಲವು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಇದು ಉಳಿದ ಬಿಜೆಪಿ ನಾಯಕರಿಗೆ ಅಷ್ಟೊಂದು ಪ್ರಮಾಣದಲ್ಲಿ ಸಾಧ್ಯವಾಗಿಲ್ಲ ಎಂಬುದನ್ನು ಬಿಜೆಪಿ ಅನೇಕ ನಾಯಕರೇ ಹೇಳುತ್ತಾರೆ.
ಹೀಗಾಗಿ ಕೇಂದ್ರದ ಬಿಜೆಪಿ ನಾಯಕತ್ವವನ್ನು ಈಗ ಕಾಡುತ್ತಿರುವ ಪ್ರಶ್ನೆಯೆಂದರೆ, ಯಡಿಯೂರಪ್ಪ ಅವರ ನಾಯಕತ್ವವನ್ನು ಮತ್ತೊಬ್ಬ ಲಿಂಗಾಯತ ನಾಯಕರೊಂದಿಗೆ ಬದಲಿಸಬೇಕೋ ಅಥವಾ ಲಿಂಗಾಯತೇತರೊಂದಿಗೆ ಬದಲಾಯಿಸಬೇಕೋ ಎಂಬುದು. ಆದರೆ ನಾಯಕತ್ವ ಬದಲಾದರೆ ಯಡಿಯೂರಪ್ಪ ಅವರ ಮುಂದಿನ ನಡೆ ಏನೆಂಬುದು ಗೊತ್ತಾದರೆ ಬಿಜೆಪಿ ಹೈಕಮಾಂಡಿಗೆ ತನ್ನ ಕಾರ್ಯ ಸುಲಭವಾಗುತ್ತದೆ. ಆದರೆ ಯಡಿಯೂರಪ್ಪ ಅವರ ರಾಜಕೀಯ ನಡೆ ಇದುವರೆಗೂ ಏನೆಂಬುದು ಬಹಿರಂಗವಾಗಿಲ್ಲ. ಅವರು ತಾನು ಪಕ್ಷ ವಹಿಸಿದ ಜವಾಬ್ದಾರಿಯನ್ನು ವಹಿಸುವುದಾಗಿ ಹೇಳಿದ್ದಾರೆ. ಆದರೆ ಯಡಿಯೂರಪ್ಪ ಅವರನ್ನು ಬಲ್ಲವರು ಯಡಿಯೂರಪ್ಪ ಅವರು ಹೇಳಿದ ಈ ಮಾತನ್ನು ಪೂರ್ಣವಾಗಿ ನಂಬಲು ಸಿದ್ಧರಿಲ್ಲ. ಯಾಕೆಂದರೆ ಯಡಿಯೂರಪ್ಪ ಈ ವರೆಗೆ ನಡೆದುಕೊಂಡು ಬಂದಿದ್ದು ಹಾಗೆ. ಹೀಗಾಗಿ ಯಡಿಯೂರಪ್ಪ ಅವರಿಗೆ ತಮ್ಮನ್ನು ಅಥವಾ ತಮ್ಮ ಕುಟುಂಬವರನ್ನು ಬಿಜೆಪಿ ಕಡೆಗಣಿಸಿದೆ ಎಂದು ಅನ್ನಿಸಿದರೆ ಹಿಂದಿನ ನಡವಳಿಕೆಯನ್ನೇ ತೆಗೆದುಕೊಂಡರೆ ಅವರ ಮುಂದಿನ ನಡೆ ಊಹಿಸುವುದು ಕಷ್ಟವಾಗಬಹುದು. ಈ ಕಾರಣಕ್ಕಾಗಿಯೇ ಬಿಜೆಪಿ ಹೈಕಮಾಂಡಿಗೆ ಯಡಿಯೂರಪ್ಪ ಅವರ ತೆರೆಯ ಹಿಂದಿನ ಆಟ ಏನೆಂಬುದು ಮುಖ್ಯವಾಗುತ್ತದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ