ಪ್ರವಾಹದಿಂದ ಬೆಳಗಾವಿ ಜಿಲ್ಲೆಯಲ್ಲಿ 1200 ಕೋಟಿ ಹಾನಿ; ತಕ್ಷಣವೇ 170 ಕೋಟಿ ರೂ.ಗಳ ಬಿಡುಗಡೆಗೆ ಮನವಿ

ಬೆಳಗಾವಿ: ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ಮಧ್ಯೆಯೂ ಪ್ರವಾಹ ಸ್ಥಿತಿ ಉದ್ಭವಿಸಿದೆ.‌ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತಗಳು ಸಂವೇದನಾಶೀಲತೆಯಿಂದ ಕೆಲಸ ಮಾಡಬೇಕು. ಹಣಕಾಸು ಸೇರಿದಂತೆ ಯಾವುದೇ ತೊಂದರೆ ಇದ್ದರೂ ತಕ್ಷಣವೇ ಗಮನಕ್ಕೆ ತಂದು ರಿಸ್ಥಿತಿ ಸರಿಪಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ (ಜು.25) ಬೆಳಗಾವಿ ಜಿಲ್ಲೆ ಪ್ರವಾಹ ಹಾನಿ ವೀಕ್ಷಣೆ ನಂತರ ನಡೆದ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ವಾರದಿಂದ ದಾಖಲೆ ಪ್ರಮಾಣದ ಮಳೆಯಾಗಿದೆ. ರಾಜ್ಯದ ಅಧಿಕಾರಿಗಳು ಮಹಾರಾಷ್ಟ್ರದ ಜತೆ ನಿರಂತರ ಸಂಪರ್ಕದಲ್ಲಿದ್ದು, ಪ್ರವಾಹ‌ ನಿರ್ವಹಣೆ ಕುರಿತು ನಿಗಾ ವಹಿಸಲಾಗಿದೆ. 2-3 ದಿನಗಳಲ್ಲಿ ಹರಿವು ಹೆಚ್ಚಾಗುವ ಸಾಧ್ಯತೆಯಿದೆ. ಪರಿಸ್ಥಿತಿ ನಿರ್ವಹಣೆಗೆ ಸರಕಾರದಿಂದ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಪ್ರವಾಹ-ಬಾಕಿ ಪರಿಹಾರ ಬಿಡುಗಡೆಗೆ ಸೂಚನೆ:
ಕಳೆದ ವರ್ಷದ ಪ್ರವಾಹ ಸಂದರ್ಭದಲ್ಲಿ ಮನೆಹಾನಿಯ ಬಾಕಿ ಪರಿಹಾರ ಬಿಡುಗಡೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು.
ಬೆಳಗಾವಿ ಜಿಲ್ಲೆಯಲ್ಲಿ 113 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಜನರ ತಾತ್ಕಾಲಿಕ ಪುನರ್ವಸತಿಗಾಗಿ 89 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಜನರ ಕಷ್ಟ ಅರಿತು ಜಿಲ್ಲಾಡಳಿತ ಕೆಲಸ ಮಾಡಬೇಕು. ಪರಿಹಾರ ಕಾರ್ಯದಲ್ಲಿ ತೊಡಕು ಉಂಟಾದರೆ ತಕ್ಷಣವೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ, ಪ್ರವಾಹ ಸಂದರ್ಭದಲ್ಲಿ ತುರ್ತು ಔಷಧಿ ಮತ್ತಿತರ ಸಾಮಗ್ರಿಗಳನ್ನು ಎನ್.ಡಿ.ಆರ್.ಎಫ್. ಅನುದಾನದಲ್ಲಿ ಖರೀದಿಸಬೇಕು ಎಂದು ಸೂಚನೆ ನೀಡಿದರು. ಎನ್.ಡಿಆರ್.ಎಫ್ ಹೊರತುಪಡಿಸಿ ಉಳಿದ ಹೆಚ್ಚಿನ ಅನುದಾನ ಅಗತ್ಯವಿದೆ ಎಂಬುದರ ಬಗ್ಗೆ ಪ್ರಸ್ತಾವ ಸಲ್ಲಿಸಬೇಕು. ಎನ್.ಡಿ.ಆರ್.ಎಫ್. ಅನುದಾನ ಹೆಚ್ಚಿಸುವಂತೆ ಕೋರಿ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಪ್ರವಾಹ ಸಂದರ್ಭದಲ್ಲಿ ಕೊಚ್ಚಿ ಹೋಗಿರುವ ಜಾನುವಾರುಗಳ ಕುರಿತು ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು.
1200 ಕೋಟಿ ಹಾನಿ; ತಕ್ಷಣವೇ 170 ಕೋಟಿ ಬಿಡುಗಡೆಗೆ ಮನವಿ:
ಬೆಳಗಾವಿ ವಿಭಾಗದಲ್ಲಿ 1400 ಕಿ.ಮೀ. ರಸ್ತೆ ಹಾನಿಯಾಗಿಸೆ. 305 ಸೇತುವೆ ಹಾನಿ ಸೇರಿ ಒಟ್ಟಾರೆ 1200 ಕೋಟಿ ರೂಪಾಯಿ ಹಾನಿಯಾಗಿದ್ದು, ತಕ್ಷಣ ದುರಸ್ತಿಗೆ 170 ಕೋಟಿ ಬಿಡುಗಡೆ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿ ಮಾಡಿಕೊಂಡರು.
ಕಳೆದ ಬಾರಿ ಶಾಶ್ವತ ಪುನರ್ವಸತಿ ಕಲ್ಪಿಸಿ ವಿತರಿಸಲಾಗಿರುವ ಮನೆಗಳಲ್ಲಿ ಇದುವರೆಗೆ ಖಾಲಿಯಿರುವ ಮನೆಗಳನ್ನು ಅಗತ್ಯತೆ ಆಧರಿಸಿ ಬೇರೆಯವರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷ್ಣಾ ನದಿಯಲ್ಲಿ ಈಗಲೂ ನೀರಿನ ಹರಿವು ಜಾಸ್ತಿ ಇರುವುದರಿಂದ ಆಲಮಟ್ಟಿ ಜಲಾಶಯದಿಂದ‌ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಜನರ ತುರ್ತು ರಕ್ಷಣೆಗೆ ಅಗತ್ಯವಾಗಿರುವ ಬೋಟ್ ಗಳನ್ನು ನದಿತೀರದ ಭಾಗಗಳ ಗ್ರಾಮಗಳಿಗೆ ಒದಗಿಸಬೇಕು ಎಂದು ಹೇಳಿದರು.
ಪ್ರವಾಹದಿಂದ ಹಾನಿಗೊಳಗಾಗಿರುವ ಮನೆಗಳ ಸಮೀಕ್ಷೆ ನಡೆಸಬೇಕು. ಕಳೆದ ಬಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಆದ್ಯತೆ ಮೇರೆಗೆ ಮೊದಲು ಪರಿಹಾರ ಒದಗಿಸಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಒತ್ತಾಯಿಸಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಕಳೆದ ಬಾರಿ ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳು ಹಾಗೂ ಸೇತುವೆಗಳ ದುರಸ್ತಿಗೆ ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿಕೊಂಡರು. ಬೆಳಗಾವಿ ಗ್ರಾಮೀಣ ಮತಕ್ಷೇತ್ರಕ್ಕೆ ಕನಿಷ್ಠ ಒಂದು ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಅಥಣಿ ಮತಕ್ಷೇತ್ರದಲ್ಲಿ ಹಾನಿಗೊಳಗಾಗಿರುವ ರಸ್ತೆ ದುರಸ್ತಿಗೆ ತಕ್ಷಣವೇ ಅನುದಾನ ಬಿಡುಗಡೆ ಮಾಡಬೇಕು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ್ ಕುಮಠಳ್ಳಿ ಒತ್ತಾಯಿಸಿದರು.
ಮನೆ ಹಾನಿಯಾದಾಗ ಮನೆ ನಿರ್ಮಾಣಕ್ಕೆ ಬರೀ ಪರಿಹಾರ ನೀಡದೇ ಮನೆಗಳನ್ನು ನಿರ್ಮಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಹಾಲಿ ಇರುವ ಮನೆಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು.
ಕುಡಚಿ ಮತಕ್ಷೇತ್ರದ ಶಿರವಾರ ಹಾಗೂ ಗುಂಡವಾಡ ಗ್ರಾಮಗಳ 350 ಕ್ಕೂ ಅಧಿಕ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಆಶ್ರಯ ಮನೆಗಳನ್ನು ಒದಗಿಸಬೇಕು ಎಂದು ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ‌.ರಾಜೀವ್ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಒಂದು ವಾರದಿಂದ ಮಳೆ ಜಾಸ್ತಿಯಾಗಿದೆ. ಶೇ.60 ರಷ್ಟು ಅಧಿಕ‌ ಮಳೆಯಾಗಿದೆ. ಮೂರು ಜನರು‌ ಮೃತಪಟ್ಟಿರುತ್ತಾರೆ. ಪೂರ್ಣ 40 ಮತ್ತು ಭಾಗಶಃ 1200 ಕ್ಕೂ ಅಧಿಕ ಮನೆಗಳು ಕುಸಿದಿವೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಬೆಳೆ ಜಲಾವೃತಗೊಂಡಿದ್ದು. ಒಂದು ವಾರದಲ್ಲಿ ಜಂಟಿ ಸಮೀಕ್ಷೆ ನಡೆಸಿ ಹಾನಿಯ ಮಾಹಿತಿಯನ್ನು ಕಲೆಹಾಕಲಾಗುವುದು ಎಂದು ತಿಳಿಸಿದರು.
37 ಸೇತುವೆ ಸ್ಥಗಿತಗೊಂಡಿವೆ. ಆದರೆ ಖಾನಾಪುರ ತಾಲ್ಲೂಕಿನ ಎರಡು ಸೇತುವೆ ಹೊರತುಪಡಿಸಿ ಉಳಿದ ಕಡೆ ಪರ್ಯಾಯ ಮಾರ್ಗಗಳಿವೆ ಎಂದು ತಿಳಿಸಿದರು.
ಸಚಿವರಾದ ಶ್ರೀಮಂತ ಪಾಟೀಲ, ವಿಧಾನಸಭಾ ಉಪ ಸಭಾಪತಿ ಆನಂದ ಮಾಮನಿ, ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಶಾಸಕರಾದ ಮಹಾಂತೇಶ ದೊಡ್ಡಗೌಡ್ರ, ಮಹಾಂತೇಶ ಕೌಜಲಗಿ, ಅಭಯ್ ಪಾಟೀಲ, ಅನಿಲ್ ಬೆನಕೆ, ಮಹಾದೇವಪ್ಪ ಯಾದವಾಡ, ಮಹಾಂತೇಶ ಕೌಜಲಗಿ, ವಿಧಾನ ಪರಿಷತ್ ಸದಸ್ಯರಾದ ಸಾಯಬಣ್ಣ ತಳವಾರ, ಕಾಡಾ ಅಧ್ಯಕ್ಷ ವಿ.ಐ.ಪಾಟೀಲ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ದುರ್ಯೋಧನ ಐಹೊಳೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಬಿಜೆಪಿಯಿಂದ ಕೆ.ಎಸ್‌. ಈಶ್ವರಪ್ಪ ಉಚ್ಚಾಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement